Advertisement

ಜಿಮ್ಸ್‌ ಆಮ್ಲಜನಕ ಸಂಗ್ರಹಾಗಾರ ಸಂಜೀವಿನಿ

07:33 PM May 04, 2021 | Team Udayavani |

ಗದಗ: ಜಿಮ್ಸ್‌ ಆವರಣದಲ್ಲಿರುವ ಆಮ್ಲಜನಕ ಸಂಗ್ರಹಾಗಾರ ಜಿಲ್ಲೆಯ ಕೋವಿಡ್‌-19 ಸೋಂಕಿನಿಂದ ಸಾವು-ಬದುಕಿನ ಮಧ್ಯೆ ಹೋರಾಡುತ್ತಿರುವವರ ಪಾಲಿಗೆ ಸಂಜೀವಿನಿಯಾಗಿದೆ.

Advertisement

ಜಿಲ್ಲೆಯ ಒಟ್ಟು ಸೋಂಕಿತರ ಪೈಕಿ ಶೇ.20 ಜನರು ಮಾತ್ರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆಕ್ಸಿಜನ್‌ ಸಮಸ್ಯೆ ಇಲ್ಲ. ಆದರೆ, ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವುದು ಆತಂಕ ಸೃಷ್ಟಿಸಿದೆ. ಜಿಲ್ಲೆಯಲ್ಲಿ 837 ಸಕ್ರಿಯ ಪ್ರಕರಣಗಳಲ್ಲಿ 267 ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪೈಕಿ ಐಸಿಯುನಲ್ಲಿ 36,200 ಜನರು ಆಕ್ಸಿಜನ್‌ ನಲ್ಲಿ ಹಾಗೂ 31 ಜನರು ಸಾಮಾನ್ಯ ವಾರ್ಡ್‌ ಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶೇ.80 ಸೋಂಕಿತರು ಹೋಂ ಐಸೋಲೇಷನ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೀಗಾಗಿ ಜಿಲ್ಲೆಯ ಒಟ್ಟು 982 ಬೆಡ್‌ಗಳಲ್ಲಿ 54 ಐಸಿಯು, 386 ಆಕ್ಸಿಜನ್‌ ಬೆಡ್‌, ಸಾಮಾನ್ಯ 226 ಬೆಡ್‌ಗಳು ಖಾಲಿ ಇವೆ. ಸದ್ಯಕ್ಕೆ ಜಿಲ್ಲೆಯಲ್ಲಿ ಯಾವುದೇ ರೀತಿಯಲ್ಲಿ ಆಕ್ಸಿಜನ್‌ ಸಮಸ್ಯೆ ಇಲ್ಲ.

ಜಿಮ್ಸ್‌ಗೆ 13 ಕೆ.ಎಲ್‌ ಘಟಕ ಬಲ:

ಕಳೆದ ವರ್ಷ ಕೋವಿಡ್‌ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಜಿಮ್ಸ್‌ ಆವರಣದಲ್ಲಿ 13 ಕೆ.ಎಲ್‌. ಸಾಮರ್ಥ್ಯದ ಆಕ್ಸಿಜನ್‌ ಸಂಗ್ರಹಾಗಾರ ಕಾರ್ಯ ನಿರ್ವಹಿಸುತ್ತಿರುವುದು ಆಸ್ಪತ್ರೆಗೆ ಬಲ ತುಂಬಿದೆ. ಜಿಮ್ಸ್‌ ಆಸ್ಪತ್ರೆ ಹಾಗೂ ನಿಗದಿತ ಕೋವಿಡ್‌ ಆಸ್ಪತ್ರೆ ರೋಗಿಗಳಿಗೆ ಪ್ರತಿನಿತ್ಯ ಆಕ್ಸಿಜನ್‌ ಒದಗಿಸುತ್ತದೆ. ಸದ್ಯ 13 ಕೆ.ಎಲ್‌. ಸಾಮರ್ಥ್ಯದ ಘಟಕ ಸಂಪೂರ್ಣ ಭರ್ತಿಯಾಗಿದೆ. ಜತೆಗೆ ತುರ್ತು ಸಂದರ್ಭದಲ್ಲಿ ಬಳಕೆ 96 ಜಂಬೋ ಸಿಲಿಂಡರ್‌ ಹೊಂದಲಾಗಿದೆ. ಗದಗ ಹೊರತುಪಡಿಸಿ, ಜಿಲ್ಲೆಯ ನರಗುಂದ, ರೋಣ ಮತ್ತು ಮುಂಡರಗಿ ತಾಲೂಕಿನಲ್ಲಿ ತಲಾ 50 ಬೆಡ್‌, ಶಿರಹಟ್ಟಿ 30 ಹಾಗೂ ಗಜೇಂದ್ರಗಡ, ಲಕ್ಷ್ಮೇಶ್ವರ ತಾಲೂಕು ಆಸ್ಪತ್ರೆಗಳಲ್ಲಿ ತಲಾ 10 ಆಕ್ಸಿಜನ್‌ ಬೆಡ್‌ಗಳ ವ್ಯವಸ್ಥೆ ಮಾಡಲಾಗಿದೆ. ತಲಾ 24 ಜಂಬೋ ಸಿಲಿಂಡರ್‌ ಒದಗಿಸಲಾಗಿದೆ. ಎಂಎಸ್‌ಪಿಎಲ್‌ ಹಾಗೂ ಕರ್ನಾಟಕ ಇಂಡಸ್ಟ್ರೀಜ್‌ ಗ್ಯಾಸ್‌ ಏಜೆನ್ಸಿ ಲಿ.ನಿಂದ ಅಗತ್ಯನುಗುಣವಾಗಿ ಆಮ್ಲಜನಕ ಪೂರೈಸಲಾಗುತ್ತದೆ ಎನ್ನುತ್ತಾರೆ ಆರೋಗ್ಯ ಇಲಾಖೆ ಅಧಿ ಕಾರಿಗಳು.

ಸಾರ್ವಜನಿಕರಲ್ಲಿ ಆಕ್ಸಿಜನ್‌ ಭೀತಿ:

Advertisement

ಸದ್ಯ ಜಿಮ್ಸ್‌ ಆಸ್ಪತ್ರೆಯ 13 ಕೆ.ಎಲ್‌ ಘಟಕದಲ್ಲಿ ದಿನಕ್ಕೆ 6 ಕೆ.ಎಲ್‌. ಆಮ್ಲಜನಕ ಬಳಕೆಯಾಗುತ್ತಿದೆ. ಆದರೆ, ವಿವಿಧ ತಾಲೂಕು ಆಸ್ಪತ್ರೆಗಳಲ್ಲೂ ಕೋವಿಡ್‌ ರೋಗಿಗಳ ಸಂಖ್ಯೆ ಏರಿಕೆಯಾಗುತ್ತಿದೆ. ಅಲ್ಲದೇ, ದಿನ ಕಳೆದಂತೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ನೆರೆಹೊರೆ ಜಿಲ್ಲೆಗಳಲ್ಲೂ ಆಕ್ಸಿಜನ್‌ ಕೊರತೆಯಾಗಿರುವುದು ಸಾರ್ವಜನಿಕರಲ್ಲಿ ಸಹಜಯವಾಗಿಯೇ ಆತಂಕ ಮೂಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next