ಕೈಗಾರಿಕೋದ್ಯಮ, ಆವಿಷ್ಕಾರ, ದಾನ-ಧರ್ಮದ ಮೂಲಕ ಜಾಗತಿಕ ಮಟ್ಟದಲ್ಲಿ ಜನಪ್ರಿಯತೆ ಪಡೆದವರು ರತನ್ ಟಾಟಾ. 86 ವರ್ಷದ ಟಾಟಾ ಇಹಲೋಕ ತ್ಯಜಿಸಿದ್ದಾರೆ. ಅವಿವಾಹಿತರಾಗಿದ್ದ ರತನ್ ಟಾಟಾ ತನ್ನ ಸರಳತೆಯಿಂದಲೇ ಅಪಾರ ಜನಮನ್ನಣೆ ಪಡೆದಿದ್ದರು. ಆದರೆ ಇವರ ಸಹೋದರ ಜಿಮ್ಮಿ ಟಾಟಾ ಬಗ್ಗೆ ಹೆಚ್ಚಿನವರಿಗೆ ತಿಳಿದಿಲ್ಲ. ಜಿಮ್ಮಿ ಟಾಟಾ ಅವರು ಕೋಟ್ಯಂತರ ರೂಪಾಯಿ ಒಡೆತನದ ಕಂಪನಿಯನ್ನು ಬಿಟ್ಟು ಸರಳ ಜೀವನ ನಡೆಸುತ್ತಿದ್ದಾರೆ!
ರತನ್ ಟಾಟಾ ಕಿರಿಯ ಸಹೋದರ ಜಿಮ್ಮಿ ಟಾಟಾ!
ಜಿಮ್ಮಿ ನವಲ್ ಟಾಟಾ (Jimmy Naval Tata) ರತನ್ ಟಾಟಾ ಅವರ ಕಿರಿಯ ಸಹೋದರ. ರತನ್ ಟಾಟಾ ಅಪಾರ ಸಂಪತ್ತಿನ ಟಾಟಾ ಸಮೂಹದ ಕೈಗಾರಿಕೋದ್ಯಮಿಯಾಗಿದ್ದರೆ, ಜಿಮ್ಮಿ ಟಾಟಾ ತನ್ನ ಜೀವಮಾನವಿಡೀ ಕುಟುಂಬದ ವ್ಯವಹಾರದಿಂದ ದೂರವೇ ಇದ್ದು, ಸರಳತೆಯಿಂದಲೇ ಜೀವನ ನಡೆಸುತ್ತಿದ್ದಾರೆ.
ಜಿಮ್ಮಿ ಟಾಟಾ ಅವರ ಬಗ್ಗೆ ಬಹುತೇಕರಿಗೆ ತಿಳಿದೆ ಇಲ್ಲವಾಗಿತ್ತು. ಆದರೆ ಜಿಮ್ಮಿ ಅವರ ಹುಟ್ಟುಹಬ್ಬದ ದಿನದಂದು (2023-ಜೂನ್) ರತನ್ ಟಾಟಾ ಅವರು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಸಹೋದರನ ಜತೆಗಿನ ಕಪ್ಪು-ಬಿಳುಪಿನ ಫೋಟೋವನ್ನು ಹಂಚಿಕೊಂಡ ನಂತರ ಎಲ್ಲರಲ್ಲೂ ಹೆಚ್ಚಿನ ಕುತೂಹಲ ಮೂಡಿಸಲು ಕಾರಣವಾಗಿತ್ತು. 1945ರಲ್ಲಿ ನನ್ನ ಸಹೋದರ ಜಿಮ್ಮಿ ಎಂದು ನಮೂದಿಸಿದ್ದ ರತನ್ ಟಾಟಾ…ಅದು ಸಂತೋಷದ ದಿನಗಳು…ನಮ್ಮಿಬ್ಬರ ನಡುವೆ ಯಾವುದೇ ಭಿನ್ನಾಭಿಪ್ರಾಯಗಳು ಬಂದಿಲ್ಲವಾಗಿತ್ತು ಎಂದು ಕ್ಯಾಪ್ಶನ್ ನೀಡಿದ್ದರು.
ಇದಕ್ಕೂ ಮೊದಲು 2022ರಲ್ಲಿ RPG ಎಂಟರ್ ಪ್ರೈಸಸ್ ನ ಅಧ್ಯಕ್ಷ ಹರ್ಷ ವರ್ಧನ್ ಗೋಯೆಂಕಾ ತಮ್ಮ ಎಕ್ಸ್ ಖಾತೆಯಲ್ಲಿ, ಆಧುನಿಕ ಕಾಲಘಟ್ಟದಲ್ಲೂ ಜಿಮ್ಮಿಯವರ ಸರಳ ಜೀವನ ಬಹಿರಂಗಗೊಳಿಸಿದ್ದರು. ನಿಮಗೆ ರತನ್ ಟಾಟಾ ಕಿರಿಯ ಸಹೋದರ ಜಿಮ್ಮಿ ಟಾಟಾ ಬಗ್ಗೆ ಗೊತ್ತಾ? ಮುಂಬೈನ ಕೊಲಾಬಾ(Colaba)ದ ಹ್ಯಾಂಪ್ಟನ್ ಕೋರ್ಟ್ ನ ಆರನೇ ಮಹಡಿಯಲ್ಲಿ 2 ಬೆಡ್ ರೂಂಗಳ ಅಪಾರ್ಟ್ ಮೆಂಟ್ ನಲ್ಲಿ ಸರಳ ಜೀವನ ನಡೆಸುತ್ತಿದ್ದಾರೆ. ಇವರು ಉದ್ಯಮದ ಬಗ್ಗೆ ಯಾವತ್ತೂ ಆಸಕ್ತಿ ತೋರಿಸಿದವರಲ್ಲ. ಅದ್ಭುತ ಸ್ಕ್ವೇಶ್ (Squash) ಆಟಗಾರರು ಆಗಿದ್ದಾರೆ ಎಂದು ಮಾಹಿತಿ ನೀಡಿದ್ದರು.
ಆಧುನಿಕ ಜೀವನಶೈಲಿಯಿಂದ ದೂರವೇ ಉಳಿದಿದ್ದ ಜಿಮ್ಮಿ ಟಾಟಾ ಅವರು ಟಾಟಾ ಸಮೂಹದಂತಹ ಸಂಸ್ಥೆ, ಅಪಾರ ಹಣ ಇದ್ದರೂ ಸರಳ ಬದುಕನ್ನು ಆಯ್ದುಕೊಂಡಿದ್ದರು. ಎಲ್ಲಿಯವರೆಗೆ ಅಂದರೆ ಜಿಮ್ಮಿ ಅವರ ಬಳಿ ಮೊಬೈಲ್ ಫೋನ್ ಕೂಡಾ ಇಲ್ಲ. ಯಾವುದೇ ಆಧುನಿಕ ತಂತ್ರಜ್ಞಾನಕ್ಕೆ ಒಗ್ಗಿಕೊಳ್ಳದ ಇವರು ದಿನಪತ್ರಿಕೆ ಮತ್ತು ಪುಸ್ತಕಗಳ ಮೂಲಕ ಮಾಹಿತಿ ತಿಳಿದುಕೊಳ್ಳುತ್ತಿದ್ದಾರೆ.
ಅಷ್ಟೇ ಅಲ್ಲ ಮನೆಯಲ್ಲೇ ಹೆಚ್ಚಿನ ಸಮಯ ಕಳೆಯುವ ಜಿಮ್ಮಿ ಟಾಟಾ ಅವರು ಹೊರಗಡೆ ಅಪರೂಪಕ್ಕೆ ಬರುತ್ತಾರೆ ಎಂಬ ಊಹಾಪೋಹವಿದೆ. ಜಿಮ್ಮಿ ಅವರು ಟಾಟಾ ಸಮೂಹ ಸಂಸ್ಥೆಗಳ ಟಾಟಾ ಮೋಟಾರ್ಸ್, ಟಾಟಾ ಸ್ಟೀಲ್, ಟಾಟಾ ಸನ್ಸ್, ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್, ಟಾಟಾ ಪವರ್, ಇಂಡಿಯನ್ ಹೋಟೆಲ್ಸ್, ಟಾಟಾ ಕೆಮಿಕಲ್ಸ್ ನಲ್ಲಿ ಷೇರುಪಾಲುದಾರಿಕೆ ಹೊಂದಿದ್ದಾರೆ. ಅಲ್ಲದೇ ಸರ್ ರತನ್ ಟಾಟಾ ಟ್ರಸ್ಸ್ ನ ಟ್ರಸ್ಟಿಯೂ ಆಗಿದ್ದಾರೆ. 1989ರಲ್ಲಿ ಅವರ ತಂದೆ ನವಲ್ ಟಾಟಾ ನಿಧನಹೊಂದಿದ ನಂತರ ಜಿಮ್ಮಿ ಟಾಟಾ ಅವರು ಆನುವಂಶಿಕವಾಗಿ ಬಂದ ಷೇರುಪಾಲನ್ನು ಪಡೆದಿದ್ದರು.
ನವಲ್ ಟಾಟಾ ಮತ್ತು ಸೂನಿ ಟಾಟಾ ದಂಪತಿ (ನವಲ್ ಟಾಟಾ ಮೊದಲ ಪತ್ನಿ) ದಂಪತಿಯ ಎರಡನೇ ಪುತ್ರ ಜಿಮ್ಮಿ ಟಾಟಾ. ಜಿಮ್ಮಿ ಅವರ ಟಾಟಾ ಗ್ರೂಪ್ ನ ಸಕ್ರಿಯ ಸದಸ್ಯರಾಗಿದ್ದು, ತಂದೆಯ ಜೊತೆ ಜಿಮ್ಮಿ ಅವರು ಟಾಟಾ ಗ್ರೂಪ್ ನ ಟೆಕ್ಸ್ ಟೈಲ್ ವ್ಯವಹಾರ ನೋಡಿಕೊಳ್ಳುತ್ತಿದ್ದರು. ನಂತರ ಉದ್ಯಮದಲ್ಲಿ ತನಗೆ ಆಸಕ್ತಿ ಇಲ್ಲವೆಂದು ಜಿಮ್ಮಿ ಟಾಟಾ ನಿಗೂಢವಾಗಿ, ಸರಳವಾಗಿ ಜೀವನ ನಡೆಸಲು ಆರಂಭಿಸಿದ್ದರು. ಜಿಮ್ಮಿ ಅವರಿಗೆ ಕುಟುಂಬ ವ್ಯವಹಾರದಲ್ಲಿ ಆಸಕ್ತಿ ಇಲ್ಲದ ಕಾರಣ ಟಾಟಾ ಸಮೂಹ ಜವಾಬ್ದಾರಿ ಈಗ ನೊಯೆಲ್ ಟಾಟಾ ಅವರ ಮಕ್ಕಳಾದ ಲೇಹ್ ಟಾಟಾ, ಮಾಯಾ ಟಾಟಾ ಹಾಗೂ ನವಿಲ್ಲೆ ಟಾಟಾ ಅವರ ಹೆಗಲೇರಿದೆ.