ಎಲ್ಲರ ನಿರೀಕ್ಷೆಯನ್ನೂ ಮೀರಿಸಿ ತ್ರಿಪುರದಲ್ಲಿ 25 ವರ್ಷಗಳ ಸಿಪಿಎಂ ನೇತೃತ್ವದ ಆಡಳಿತವನ್ನು ಬಿಜೆಪಿ ಕೊನೆಗಾಣಿಸಿದೆ. ಹಾಗಿದ್ದರೆ ಹೊಸ ಸರಕಾರ ನೇತೃತ್ವ ವಹಿಸುವವರು ಯಾರು ಎಂಬ ಬಗ್ಗೆ ಕುತೂಹಲ ಶುರುವಾಗಿದೆ. ಸದ್ಯ ಚಾಲ್ತಿಯಲ್ಲಿರುವ ಹೆಸರುಗಳ ಪೈಕಿ ಮುಂಚೂಣಿಯಲ್ಲಿರುವುದು ತ್ರಿಪುರ ಬಿಜೆಪಿ ಅಧ್ಯಕ್ಷ ಬಿಪ್ಲಬ್ ದೇಬ್(48). ಅವರು ವನಮಾಲಿಪುರ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದಿದ್ದಾರೆ. 25 ವರ್ಷಗಳ ಮಾಣಿಕ್ ಸರ್ಕಾರ್ ನೇತೃತ್ವದ ಸರಕಾರವನ್ನು ಕೆಳಕ್ಕೆ ಇಳಿಸಿದ ಹೆಗ್ಗಳಿಕೆ ಅವರದ್ದು.
ಹೆಸರು ಬಹಿರಂಗಪಡಿಸಲಿಚ್ಛಿಸದ ಬಿಜೆಪಿ ಪ್ರಧಾನ ಕಾರ್ಯದರ್ಶಿಯೊಬ್ಬರು, ಬಿಪ್ಲಬ್ ಅವರೇ ಮುಖ್ಯಮಂತ್ರಿಯಾಗಲಿದ್ದಾರೆ ಎಂಬ ವಿಚಾರ ಖಚಿತಪಡಿಸಿದ್ದಾರೆ.
ಆಚಾರ್ಯರ ಗರಡಿ ಪೈಲ್ವಾನ್: ವೃತ್ತಿಯಲ್ಲಿ ವ್ಯಾಯಾಮ ಶಾಲೆಯ ನಿರ್ವಾಹಕ (ಜಿಮ್ ಇನ್‌ಸ್ಟ್ರಕ್ಟರ್)ರಾಗಿದ್ದ ಬಿಪ್ಲಬ್ ದೇಬ್ ತ್ರಿಪುರದಲ್ಲಿ ಬಿಜೆಪಿ ಮತ್ತು ಆರ್‌ಎಸ್‌ಎಸ್ ಜತೆಗೆ ಗುರುತಿಸಿ ಕೊಂಡು ಕೆಲಸ ಮಾಡಿದ್ದಾರೆ. ಬಿಜೆಪಿಯಲ್ಲಿ ಅವರಿಗೆ ಕ್ಲೀನ್ ಇಮೇಜ್ ಇದೆ. ಹದಿನೈದು ವರ್ಷಗಳ ಹಿಂದೆ ಹೊಸದಿಲ್ಲಿಯಲ್ಲಿ ಅವರು ವ್ಯಾಯಾಮ ಶಾಲೆಯ ನಿರ್ವಾಹಕರಾಗಿದ್ದರು. ತ್ರಿಪುರದಲ್ಲಿ ಬಿಜೆಪಿಯ ನಾಯಕರಾಗಿದ್ದ ಸುನೀಲ್ ದೇವ್‌ಧರ್ ಅವರೇ ದೇಬ್‌ರ ರಾಜಕೀಯ ತರಬೇತುದಾರ. ಅವರ ಜತೆಗೆ ಹಿರಿಯ ಚಿಂತಕ ಕೆ.ಎನ್.ಗೋವಿಂದಾ ಚಾರ್ಯರ ಗರಡಿ ಯಲ್ಲಿಯೂ ಅವರು ಪಳಗಿದ್ದರು.
2016ರಲ್ಲಿ ತ್ರಿಪುರದಲ್ಲಿ ಬಿಜೆಪಿ ಅಧ್ಯಕ್ಷರಾಗುವುದಕ್ಕೆ ಮುನ್ನ ಬಿಜೆಪಿ ನಾಯಕ ಗಣೇಶ್ ಸಿಂಗ್ ಗರಡಿಯಲ್ಲೂ ಪಳಗಿದ್ದರು.
ಸಿಪಿಎಂ ಸರಕಾರವನ್ನು ಸೋಲಿಸುವ ನಿಟ್ಟಿನಲ್ಲಿ ರಣತಂತ್ರ ರಚನೆ ಮಾಡಲು ಅಸ್ಸಾಂ ಸಚಿವ ಹಿಮಾಂತ ಬಿಸ್ವಾ ಶರ್ಮಾ ಜತೆಗೂಡಿ ಕೆಲಸ ಮಾಡುವವರು ಬೇಕಾಗಿದ್ದ ಹಿನ್ನೆಲೆಯಲ್ಲಿ ದೇಬ್ ಅವರನ್ನು ತ್ರಿಪುರ ಘಟಕದ ಅಧ್ಯಕ್ಷರನ್ನಾಗಿ ನೇಮಿಸಲಾಗಿತ್ತು.
ಹಿನ್ನೆಲೆ: ತ್ರಿಪುರದ ಗೋಮತಿ ಜಿಲ್ಲೆಯ ಉದಯಪುರದಲ್ಲಿ ಜನಿಸಿರುವ ಬಿಪ್ಲಬ್ ದೇಬ್ ಉನ್ನತ ಅಧ್ಯಯನಕ್ಕಾಗಿ 15 ವರ್ಷಗಳ ಕಾಲ ಹೊಸದಿಲ್ಲಿ ಯಲ್ಲಿ ಇದ್ದರು. ಅವರ ಪತ್ನಿ ಸಂಸತ್ ಭವನದಲ್ಲಿರುವ ಎಸ್‌ಬಿಐ ಶಾಖೆಯಲ್ಲಿ ಡೆಪ್ಯುಟಿ ಮ್ಯಾನೇಜರ್ ಆಗಿದ್ದಾರೆ. ಅವರಿಗೆ ಇಬ್ಬರು ಮಕ್ಕಳು.