Advertisement

ಜಿಲ್ಲೇಲಿ 954 ಮಕ್ಕಳು ಶಾಲೆಯಿಂದ ಹೊರಗೆ

05:20 PM Dec 17, 2018 | Team Udayavani |

ಚಿತ್ರದುರ್ಗ: ಜಿಲ್ಲಾದ್ಯಂತ ಸಾರ್ವಜನಿಕ ಶಿಕ್ಷಣ ಇಲಾಖೆ ನಡೆಸಿದ ಸಮೀಕ್ಷೆಯಲ್ಲಿ 954 ಮಕ್ಕಳು ಶಾಲೆಯಿಂದ ಹೊರಗೆ ಉಳಿದಿರುವುದು ಕಂಡು ಬಂದಿದೆ. 2017ರ ಸಾಲಿನ ಶಾಲಾ ಪ್ರವೇಶಾತಿ ಸಂದರ್ಭದಲ್ಲಿ 235 ವಿದ್ಯಾರ್ಥಿಗಳು ಶಾಲೆಯಿಂದ ಹೊರಗುಳಿದಿದ್ದು ಅವರನ್ನು ಮುಖ್ಯವಾಹಿನಿಗೆ ತರಲಾಗಿದೆ. ಪ್ರಸಕ್ತ ಸಾಲಿನಲ್ಲಿ 954 ಮಕ್ಕಳು ಶಾಲೆಯಿಂದ ಹೊರಗುಳಿಯುವ ಮೂಲಕ ಶಿಕ್ಷಣದಿಂದ ವಂಚಿತರಾಗಿದ್ದಾರೆ. ಈ ಪೈಕಿ 932 ಮಕ್ಕಳು ಶಾಲೆಗೆ ದಾಖಲಾಗಿ ವಿವಿಧ ಕಾರಣಗಳಿಂದ ಹೊರಗುಳಿದಿದ್ದರೆ, ಇನ್ನುಳಿದ 22 ಮಕ್ಕಳು ಯಾವುದೇ ಶಾಲೆಗೆ ದಾಖಲಾಗಿಲ್ಲ ಎಂಬ ಸಂಗತಿ ಸಮೀಕ್ಷೆಯಿಂದ ಬೆಳಕಿಗೆ ಬಂದಿದೆ.

Advertisement

ಶಾಲೆಯಿಂದ ಹೊರಗುಳಿದಿರುವ ಎಲ್ಲ ಮಕ್ಕಳನ್ನು ಮತ್ತೆ ಶಾಲೆಗೆ ಕರೆತರಲು ಸಾರ್ವಜನಿಕ ಶಿಕ್ಷಣ ಇಲಾಖೆ ಮುಂದಾಗಿದ್ದು, ಶಿಕ್ಷಕರು ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಶಾಲಾ ಹಂತದಲ್ಲಿ ಶಾಲೆಗೆ ಸೇರಿ ಮಧ್ಯಂತರದಲ್ಲಿ ಶಾಲೆ ಬಿಟ್ಟಿರುವ ಮಕ್ಕಳನ್ನು ಗುರುತಿಸಲಾಗುತ್ತಿದೆ. ಮದುವೆ, ಗುಳೆ, ಮತ್ತಿತರ ಕಾರಣಗಳಿಂದಾಗಿ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ.

ಎಲ್ಲೆಲ್ಲಿ ಎಷ್ಟೆಷ್ಟು?: ಜಿಲ್ಲಾ ಕೇಂದ್ರ ಚಿತ್ರದುರ್ಗದಲ್ಲಿ 344 ಮಕ್ಕಳು ಶಾಲೆಯಿಂದ ಹೊರಗುಳಿಯುವ ಮೂಲಕ ಪ್ರಥಮ ಸ್ಥಾನದಲ್ಲಿದ್ದರೆ, ಜಿಲ್ಲೆಯಲ್ಲೇ ಅತ್ಯಂತ ಹಿಂದುಳಿದ ಮೊಳಕಾಲ್ಮೂರು ತಾಲೂಕಿನಲ್ಲಿ ಕೇವಲ 32 ಮಕ್ಕಳು ಮಾತ್ರ ಶಾಲೆಯಿಂದ ಹೊರಗುಳಿಯುವ ಮೂಲಕ ಕೊನೆಯ ಸ್ಥಾನದಲ್ಲಿದೆ. ಹಿರಿಯೂರು ತಾಲೂಕಿನಲ್ಲಿ 186 ಮಕ್ಕಳು
ಹೊರಗುಳಿದು ದ್ವಿತೀಯ ಸ್ಥಾನ ಪಡೆದಿದೆ. ಚಳ್ಳಕೆರೆ 150, ಹೊಳಲ್ಕೆರೆ 147, ಹೊಸದುರ್ಗ ತಾಲೂಕಿನಲ್ಲಿ 73 ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ. 

ಅಲ್ಲದೆ 22 ಮಕ್ಕಳು ಶಾಲೆಗೇ ದಾಖಲಾಗಿಲ್ಲ. ಇದರಲ್ಲಿ 19 ಮಕ್ಕಳು ಚಿತ್ರದುರ್ಗ ತಾಲೂಕಿನಲ್ಲೇ ಇರುವುದು ಸೋಜಿಗ ಮೂಡಿಸಿದೆ. ಉಳಿದಂತೆ ಚಳ್ಳಕೆರೆ, ಹೊಳಲ್ಕೆರೆ ಮತ್ತು ಮೊಳಕಾಲ್ಮೂರು ತಾಲೂಕುಗಳಲ್ಲಿ ತಲಾ ಒಂದು ಮಕ್ಕಳು ಶಾಲೆಗೆ ದಾಖಲಾಗಿಲ್ಲ. ಕಳೆದ ಸಾಲಿನಲ್ಲಿ ಶಾಲೆಯಿಂದ ಹೊರಗುಳಿದಿದ್ದ 235 ಮಕ್ಕಳಿಗೆ ಪ್ರಸಕ್ತ ಸಾಲಿನಲ್ಲಿ ಪ್ರವೇಶಾತಿ
ನೀಡಿ ವಿದ್ಯಾರ್ಥಿ ಸಾಧನೆ ಟ್ರ್ಯೆಕಿಂಗ್‌ ವ್ಯವಸ್ಥೆಗೆ (ಎಸ್‌ಎಟಿಎಸ್‌) ಅಪ್‌ಡೇಟ್‌ ಮಾಡಲಾಗಿದೆ.

2019-20ನೇ ಸಾಲಿನ ಸಮಗ್ರ ಶಿಕ್ಷಣ ಅಭಿಯಾನವನ್ನು ಜಿಲ್ಲಾ ವಾರ್ಷಿಕ ಕ್ರಿಯಾ ಯೋಜನೆಯಲ್ಲಿ ಅಳವಡಿಸಿ ಶಿಕ್ಷಣ ನೀಡಲು ಕಾರ್ಯತಂತ್ರ ರೂಪಿಸಲಾಗುತ್ತದೆ. ಶಾಲೆಯಿಂದ ಹೊರಗುಳಿದ ಮಕ್ಕಳ ಪತ್ತೆ ಕಾರ್ಯದಲ್ಲಿ ಕಾರ್ಮಿಕ ಇಲಾಖೆ, ಆರೋಗ್ಯ ಇಲಾಖೆಯ ಆಶಾ ಕಾರ್ಯಕರ್ತರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಎರಡು ಸ್ವಯಂಸೇವಾ ಸಂಸ್ಥೆಗಳು ಶಿಕ್ಷಣ ಇಲಾಖೆಯೊಂದಿಗೆ ಕೈಜೋಡಿಸಿದ್ದವು.
 
ಗಡಿ ಭಾಗದ ಶಾಲೆಗಳ ಸ್ಥಿತಿ ಶೋಚನೀಯ: ಜಿಲ್ಲೆಯ ಮೊಳಕಾಲ್ಮೂರು, ಚಳ್ಳಕೆರೆ ಮತ್ತು ಹಿರಿಯೂರು ಗಡಿ ಭಾಗದ ತಾಲೂಕುಗಳ ಕನ್ನಡ ಶಾಲೆಗಳ ಸ್ಥಿತಿ ಶೋಚನೀಯವಾಗಿದೆ. ಶಾಲೆಗಳಿಗೆ ಶೌಚಾಲಯ, ಶುದ್ಧ ಕುಡಿಯುವ ನೀರು, ಸಾರಿಗೆ ಅವ್ಯವಸ್ಥೆ, ಕಟ್ಟಡ ಕೊರತೆ, ಶಿಕ್ಷಕರ ಕೊರತೆ ಸೇರಿದಂತೆ ಮೂಲ ಸೌಕರ್ಯಗಳಿಂದ ವಂಚಿತವಾಗಿವೆ. ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಿಗೆ ಹೋಗಿ ಬರಲು ಕನಿಷ್ಠ ಪಕ್ಷ ಸಾರಿಗೆ ಸಂಸ್ಥೆ ಬಸ್‌ ಸೌಲಭ್ಯವೂ ಇಲ್ಲ. 

Advertisement

ಮಕ್ಕಳು ಸಿಕ್ಕ ಸಿಕ್ಕ ವಾಹನದಲ್ಲಿ ಶಾಲೆಗೆ ತೆರಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನು ಶತಮಾನ ಕಂಡ ಹಳೆಯ ಶಾಲೆಯಲ್ಲಿ ಮೂಲ ಸೌಕರ್ಯ ಮರೀಚಿಕೆಯಾಗಿದೆ. ಮಕ್ಕಳಿಗೆ ಕುಳಿತುಕೊಳ್ಳಲು ಸೂಕ್ತ ಕೊಠಡಿಗಳಿಲ್ಲ. ಕೊಠಡಿಗಳು ಬಿರುಕು ಬಿಟ್ಟಿವೆ. ಗೋಡೆಗಳು ಯಾವಾಗ ಕುಸಿಯುತ್ತವೆಯೋ ಎಂಬ ಭೀತಿ ಶಿಕ್ಷಕರು, ಮಕ್ಕಳು ಮತ್ತು ಪಾಲಕರಲ್ಲಿದೆ. ಕೆಲವು ಶಾಲೆಗಳ ಆವರಣಕ್ಕೆ ಚರಂಡಿ ನೀರು ಹರಿದು ಬಂದು ಗಬ್ಬು ವಾಸನೆ ಬಡಿಯುತ್ತಿರುತ್ತದೆ. ಆ ಕೆಟ್ಟ ವಾಸನೆಯಲ್ಲೇ ಮಕ್ಕಳು ಶಿಕ್ಷಣ ಪಡೆಯಬೇಕಿದೆ. 

ಒಟ್ಟಿನಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮರಳಿ ಶಾಲೆಗೆ ಸೇರಿಸುವ ಜೊತೆಗೆ ಗಡಿ ಭಾಗದಲ್ಲಿರುವ ಸರ್ಕಾರಿ ಶಾಲೆಗಳ ಪುನಶ್ಚೇತನಕ್ಕೂ ಸಂಬಂಧಿಸಿದವರು ಗಮನ ನೀಡಬೇಕಿದೆ.  

„ಹರಿಯಬ್ಬೆ ಹೆಂಜಾರಪ್ಪ

Advertisement

Udayavani is now on Telegram. Click here to join our channel and stay updated with the latest news.

Next