ರಾಮನಗರ: ಯೋಜನೆಗಳ ಸವಲತ್ತುಗಳನ್ನು ಜನರ ಬಳಿಗೆ ತೆರಳಿ ವಿತರಣೆ ಮಾಡುವ ಮೂಲಕ ಜನರ ಮನೆ ಬಾಗಿಲಲ್ಲೇ ಸರ್ಕಾರವಿದೆ ಎಂಬ ಭಾವನೆಯನ್ನು ಸಾರ್ವಜನಿಕರಲ್ಲಿ ಮೂಡಿಸುವ ಪ್ರಾಮಾಣಿಕ ಪ್ರಯತ್ನವನ್ನು ಜಿಲ್ಲಾಡಳಿತ ಮಾಡುತ್ತಿದೆ ಎಂದು ಅಪರ ಜಿಲ್ಲಾಧಿಕಾರಿ ಶಿವಾನಂದ ಮೂರ್ತಿ ತಿಳಿಸಿದರು.
ತಾಲೂಕಿನ ಸಂತೆಮೋಗೇನಹಳ್ಳಿ ಗ್ರಾಮದಲ್ಲಿ ನಡೆದ ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪಹಣಿ, ಪಿಂಚಣಿ, ಮಾಸಾಶನ, ವಿಕಲಚೇತನರ ಮಾಸಾಶನ ಸೇರಿದಂತೆ ಸರ್ಕಾರದ ವಿವಿಧ ಸವಲತ್ತುಗಳನ್ನು ವಿತರಿಸಲು ಜಿಲ್ಲಾಡಳಿತವೇ ಫಲಾನುಭವಿಗಳನ್ನು ಹುಡುಕಿ ಅವರ ಮನೆಗೆ ತಲುಪಿಸುವಂತಹ ಕಾರ್ಯವನ್ನು ಪ್ರಾರಂಭಿಸಲಾಗಿದ್ದು, ಈ ನಿಟ್ಟಿನಲ್ಲಿ ಗ್ರಾಮವಾಸ್ತವ್ಯ ಕಾರ್ಯಕ್ರಮ ಪೂರಕವಾಗಿದೆ ಎಂದರು.
ಸೌಲಭ್ಯ ಮಂಜೂರು: ಗ್ರಾಮದಲ್ಲಿ ಅರ್ಹರು ಸವಲತ್ತಿನಿಂದ ವಂಚಿತರಾಗಿದ್ದಲ್ಲಿ ಅಂತಹವರಿಗೆ ಗ್ರಾಮವಾಸ್ತವ್ಯ ಸಂದರ್ಭದಲ್ಲಿ ಸೌಲಭ್ಯ ಮಂಜೂರು ಮಾಡಲಾಗುತ್ತಿದೆ. ಇವೆಲ್ಲವೂ ಮಧ್ಯವರ್ತಿಗಳ ಹಾವಳಿಯನ್ನು ತಪ್ಪಿಸಿ, ಅರ್ಹರಿಗೆ ಯೋಜನೆಯನ್ನು ತಲುಪಿಸುವ ಮೂಲಕ ಜನರ ಮನೆ ಬಾಗಿಲಲ್ಲೇ ಸರ್ಕಾರವಿದೆ ಎಂಬ ಭಾವನೆಯನ್ನು ಸಾರ್ವಜನಿಕರಲ್ಲಿ ಮೂಡಿಸುವ ಯತ್ನ ಮಾಡುತ್ತಿದ್ದೇವೆ ಎಂದರು.
ಗ್ರಾಮವಾಸ್ತವ್ಯ ಸಹಕಾರಿ: ಸರ್ಕಾರದ ಯೋಜನೆಗಳು ಯಾವ ರೀತಿ ಅನುಷ್ಠಾನವಾಗುತ್ತಿದೆ ಎಂಬುದನ್ನು ಪರಿಶೀಲಿಸಲು ಗ್ರಾಮವಾಸ್ತವ್ಯ ಸಹಕಾರಿಯಾಗಿದೆ. ಸಾರ್ವಜನಿಕರು ಕಾರ್ಯಕ್ರಮವನ್ನು ಸದ್ಬಳಕೆ ಮಾಡಿಕೊಳ್ಳುವಂತೆ ತಿಳಿಸಿದರು.
ಆರೋಗ್ಯ ಇಲಾಖೆ ವತಿಯಿಂದ ಉಚಿತ ಅರೋಗ್ಯ ಶಿಬಿರ ಹಾಗೂ ಸಾಂಕ್ರಾಮಿಕ ರೋಗಗಳ ಕುರಿತು ಅರಿವು ಮೂಡಿಸಲಾಯಿತು. ಕೋವಿಡ್ ಲಸಿಕಾ ಅಭಿಯಾನ, ಪೋಷಣ್ ಮಾಸಾಚರಣೆ ಅಭಿಯಾನ, ವಿವಿಧ ಇಲಾಖೆಗಳಿಂದ ದೊರೆಯುವ ಸವಲತ್ತು ಕುರಿತು ಅರಿವು ಮೂಡಿಸಲಾಯಿತು.
ತಹಶೀಲ್ದಾರ್ ಸುದರ್ಶನ್, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಶಿವಕುಮಾರ್, ಸಹಾಯಕ ನಿರ್ದೇಶಕ ಸಿದ್ದಲಿಂಗಯ್ಯ, ಎಡಿಎಲ್‌ಆರ್ ಪ್ರಖ್ಯಾತ್, ಟಿಎಚ್‌ಒ ರಾಜು, ಬಿಇಒ ಮರಿಗೌಡ, ಲಕ್ಷ್ಮೀದೇವಮ್ಮ, ಗ್ರೇಡ-2 ತಹಶೀಲ್ದಾರ್ ಲಕ್ಷ್ಮೀದೇವಮ್ಮ, ಗ್ರಾಪಂ ಪಿಡಿಒ ಪದ್ಮಮ್ಮ, ಗ್ರಾಪಂ ಅಧ್ಯಕ್ಷರು, ಸದಸ್ಯರು ಹಾಗೂ ತಾಲೂಕುಮಟ್ಟದ ಅಧಿಕಾರಿಗಳು ಹಾಗೂ ಆಶಾ ಕಾರ್ಯರ್ತೆಯರು ಇದ್ದರು.