ಪಾಂಡವಪುರ: ತಾಲೂಕಿನ ಕುರಹಟ್ಟಿ ಗ್ರಾಮದಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮ ಶನಿವಾರ ನಡೆಯಿತು.
ತಾಲೂಕು ಆಡಳಿತದ ವತಿಯಿಂದ ನಡೆದ ಕಾರ್ಯಕ್ರಮಕ್ಕೆ ತಹಶೀಲ್ದಾರ್ ಎಸ್.ಎಲ್.ನಯನಾ ಚಾಲನೆ ನೀಡಿದರು. ತಾಲೂಕು ಮಟ್ಟದ ಅಧಿಕಾರಿಗಳು ಗ್ರಾಮದಲ್ಲಿ ಬೆಳಗ್ಗೆಯಿಂದ ಸಂಜೆವರೆಗೂ ಗ್ರಾಮಸ್ಥರ ಹಲವಾರು ಸಮಸ್ಯೆ ಬಗೆಹರಿಸುವ ಮೂಲಕ ಗ್ರಾಮೀಣರಿಗೆ ಅಲ್ಪಮಟ್ಟಿಗೆ ನಿರಾಳ ಮೂಡಿಸಿದರು.
ತಹಶೀಲ್ದಾರ್ ಎಸ್.ಎಲ್.ನಯನಾ ಬೆಳಗ್ಗೆಯೇ ಕುರಹಟ್ಟಿ ಸಮೀಪ ಹಾದು ಹೋಗುವ ವಿಸಿ ನಾಲೆ ಮೇಲ್ಸೇತುವೆ ಬಳಿಗೆ ತೆರಳಿ ಪರಿಶೀಲನೆ ನಡೆಸಿದರು. ಜತೆಗೆ ಮೇಲ್ಸೇತುವೆ ಕೆಳ ಭಾಗದಲ್ಲಿ ಹಾದುಹೋಗುವ ಲೋಕಪಾವನಿಯಲ್ಲಿ ದುಷ್ಕರ್ಮಿಗಳು ಮರಳುಗಾರಿಕೆ ನಡೆಸುತ್ತಿರುವುದರ ಬಗ್ಗೆ ಪರಿಶೀಲಿಸಿ ಮರಳು ತೆಗೆಯುತ್ತಿರುವುದರ ಬಗ್ಗೆ ಶಿಸ್ತುಕ್ರಮ ಜರುಗಿಸುವ ಎಚ್ಚರಿಸಿದರು.
ಗ್ರಾಮದಲ್ಲಿ ಶುದ್ಧ ನೀರಿನ ಘಟಕಕ್ಕೆ ವಿದ್ಯುತ್ ಸಂಪರ್ಕ ಇಲ್ಲದೆ ಇರುವ ಬಗ್ಗೆ ತಕ್ಷಣವೇ ಸೆಸ್ಕ್ ಅಧಿಕಾರಿಗಳಿಗೆ ಘಟಕಕ್ಕೆ ಸಂಪರ್ಕ ಕಲ್ಪಿಸಲು ಸೂಚಿಸಿದರು. ಗ್ರಾಮಕ್ಕೆ ಬಸ್ ಸಂಪರ್ಕವಿಲ್ಲ ಎಂದು ಕೇಳಿದಾಗ, ಕೆಎಸ್‌ಆರ್‌ಟಿಸಿ ಡೀಸಿ ಅವರಿಗೆ ಕರೆ ಮಾಡಿ ಚರ್ಚಿಸಿದರು. ಜತೆಗೆ ಈ ಬಗ್ಗೆ ಶಾಸಕರೊಂದಿಗೆ ಚರ್ಚಿಸಿ ಗ್ರಾಮಕ್ಕೆ ಸಾರಿಗೆ ಸಂಪರ್ಕ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.
ಗ್ರಾಮದಲ್ಲಿ ಪಡಿತರ ವಿತರಣೆ ಕೇಂದ್ರವಿಲ್ಲದೆ ಬೇರೆಡೆಗೆ ಹೋಗಬೇಕೆಂದು ಮನವಿ ಮಾಡಿದರು. ಈ ವೇಳೆ ಅಧಿಕಾರಿಗಳೊಂದಿಗೆ ಚರ್ಚಿಸಿ ಸೌಲಭ್ಯ ಕಲ್ಪಿಸಿದರು. ಇದೇ ವೇಳೆ ಸುಮಾರು 25ಕ್ಕೂ ಹೆಚ್ಚು ಫಲಾನುಭವಿಗಳಿಗೆ ಸಾಮಾಜಿಕ ಭದ್ರತಾ ಯೋಜನೆಯಡಿ ಪ್ರಮಾಣ ಪತ್ರ ವಿತರಣೆ ಮಾಡಿದರು. ಬಳಿಕ ಸುಮಾರು 30ಕ್ಕೂ ಅಧಿಕ ರೈತರಿಂದ ಪೌತಿಖಾತೆಗೆ ಅರ್ಜಿ ಸ್ವೀಕರಿಸಿದರು.
ತಹಶೀಲ್ದಾರ್ ನಯನಾ ಮಾತನಾಡಿ, ಇಡೀ ತಾಲೂಕು ಆಡಳಿತವೇ ಗ್ರಾಮಕ್ಕೆ ಬಂದು ಜನರ ಸಮಸ್ಯೆ ಆಲಿಸುವ ಕೆಲಸ ಮಾಡಲಾಗುತ್ತಿದೆ ಎಂದರು.
ತಾಪಂ ಇಒ ಆರ್.ಪಿ.ಮಹೇಶ್, ಬಿಇಒ ಲೋಕೇಶ್, ಸಿಡಿಪಿಒ ನಟರಾಜು, ಸೆಸ್ಕ್ ಎಇಇ ವಿ.ಪುಟ್ಟಸ್ವಾಮಿ, ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.