ಮುಳಬಾಗಿಲು: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜಾರಿಗೆ ತರುವ ಎಲ್ಲಾ ಸೌಲಭ್ಯಗಳನ್ನು ಗ್ರಾಮಸ್ಥರು ಬಳಸಿಕೊಳ್ಳಬೇಕು ಎಂದು ಶಾಸಕ ಎಚ್.ನಾಗೇಶ್ ತಿಳಿಸಿದರು.
ಶನಿವಾರ ತಾಲೂಕಿನ ಕಂದಾಯ ಇಲಾಖೆ ಯಿಂದ ಬೈರಕೂರು ಹೋಬಳಿ ನಾಗೇನಹಳ್ಳಿ ಗ್ರಾಮದಲ್ಲಿ ಏರ್ಪಡಿಸಲಾಗಿದ್ದ “ಜಿಲ್ಲಾಧಿಕಾರಿ ಗಳ ನಡೆ ಹಳ್ಳಿಯ ಕಡೆ’ ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಮಾತನಾಡಿದರು.
ಗ್ರಾಮ ವಾಸ್ತವ್ಯ ಕಾರ್ಯಕ್ರಮದ ಗುರಿ ಸರ್ಕಾರದ ಎಲ್ಲಾ ಸೌಲಭ್ಯಗಳು ಗ್ರಾಮಸ್ಥರ ಮನೆಬಾಗಿಲಿಗೆ ತಲುಪಿಸುವುದಾಗಿದ್ದು, ಪ್ರತಿ ಮಾಹೆಯ 3ನೇ ಶನಿವಾರದಂದು ಗ್ರಾಮಗಳಿಗೆ ಜಿಲ್ಲಾಧಿಕಾರಿಗಳು ಖುದ್ದು ಭೇಟಿ ನೀಡಿ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿ ಸ್ಥಳದಲ್ಲೇ ಅವುಗಳನ್ನು ವಿಲೇವಾರಿ ಮಾಡುವ ವಿಶಿಷ್ಟ ಕಾರ್ಯಕ್ರಮವಾಗಿದ್ದು ಜನರು ಸದ್ಬಳಕೆ ಮಾಡಿ ಕೊಳ್ಳಬೇಕು ಎಂದರು.
ಗುಡಿಪಲ್ಲಿಯಿಂದ ನಾಗೇನಹಳ್ಳಿಯವರೆಗೆ ರಸ್ತೆ ಅಭಿವೃದ್ಧಿ ಪಡಿಸಲಾಗುವುದು ಹಾಗೂ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಲಾಗುವುದು. ಗ್ರಾಮಕ್ಕೆ ಸ್ಮಶಾನ ಬಹು ಮುಖ್ಯ ಆದ್ದರಿಂದ ಸ್ಮಶಾನಕ್ಕೆ ಸಾರ್ವಜನಿಕ ಸ್ಥಳವನ್ನು ಗುರುತಿಸಲಾಗುವುದು. ಪ್ರಸ್ತುತ ಪಶುಪಾಲನೆ ಮತ್ತು ಪಶು ಸಂಗೋಪನೆ ಇಲಾಖೆ ವತಿಯಿಂದ ಗೋವು ಮತ್ತು ಕುರಿಗಳಿಗೆ ರೋಗ ನಿರೋಧಕ ಲಸಿಕೆಯನ್ನು ನೀಡಲಾಗಿದೆ. ಈ ಕಾರ್ಯಕ್ರಮದಲ್ಲಿ ರಕ್ತದಾನ ಶಿಬಿರವನ್ನು ಸಹ ಏರ್ಪಡಿಸಲಾಗಿದೆ ಎಂದರು.
ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಈ ಜಿಲ್ಲೆಯ ಪೂರ್ತಿ ಆಡಳಿತ ಬಂದು ನಿಮ್ಮ ಹಳ್ಳಿಯಲ್ಲಿ ವಾಸ್ತವ್ಯವಿದ್ದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದ್ದು ನಿಮ್ಮ ಸಮಸ್ಯೆಗಳು ಏನೇ ಇರಲಿ ಅರ್ಜಿ ಸಲ್ಲಿಸುವ ಮೂಲಕ ಅದನ್ನು ಅತೀ ಶೀಘ್ರದಲ್ಲಿ ಪರಿಹರಿಸಿಕೊಳ್ಳ ಬಹುದಾಗಿದೆ ಎಂದರು, ತಹಶೀಲ್ದಾರ್ ಆರ್.ಶೋಭಿತಾ ಮಾತನಾಡಿ, ಕಳೆದ ಒಂದು ವಾರದಿಂದ ಈ ಗ್ರಾಮಸ್ಥರೊಂದಿಗೆ ಚರ್ಚೆ ಮಾಡಿ ಅವರ ಕುಂದುಕೊರತೆಗಳನ್ನು ಗುರುತಿಸಿ ಕೆಲವು ಬಗೆಹರಿಸಿದ್ದು, ಮುಂದಿನ ದಿನಗಳಲ್ಲಿ ಉಳಿದ ಎಲ್ಲವನ್ನೂ ಪರಿಹರಿಸಲಾಗುವುದು ಎಂದರು.
ಭಾಗ್ಯಲಕ್ಷ್ಮೀ ಬಾಂಡ್, ವೃದ್ದಾಪ್ಯ ವೇತನ, ವಿಧವಾ ಪಿಂಚಣಿ ಹಾಗೂ ಆಯುಷ್ಮಾನ್ ಭಾರತ್ ಕಾರ್ಡ್‌ಗಳನ್ನು ಗ್ರಾಮದ ಫಲಾನುಭವಿಗಳಿಗೆ ಜಿಲ್ಲಾಧಿಕಾರಿಗಳ ಮೂಲಕ ಸ್ಥಳದಲ್ಲಿ ವಿತರಿಸಲಾಯಿತು. ಕಂದಾಯ ಇಲಾಖೆಯ 47, ಗುಡಿಪಲ್ಲಿ ಗ್ರಾಪಂ 44, ಕೆಎಎಸ್‌ಆರ್‌ಟಿಸಿ 01, ಪಶು ಸಂಗೋಪನೆ 5, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ 01, ಬೆಳೆ ಪರಿಹಾರ( ಕೃಷಿ ಇಲಾಖೆ ) 03, ಅರಣ್ಯ ಇಲಾಖೆ 01 ಸೇರಿದಂತೆ 102 ಅರ್ಜಿಗಳು ವಿವಿಧ ಸಮಸ್ಯೆಗಳ ವಿಲೇವಾರಿಗಾಗಿ ಕಾರ್ಯದಲ್ಲಿ ಸಲ್ಲಿಕೆಯಾದವು.
ಅಪರ ಜಿಲ್ಲಾಧಿಕಾರಿ ಡಾ.ಸ್ನೇಹಾ, ಜಿಲ್ಲಾ ಅಂಧತ್ವಾಧಿಕಾರಿ ನಾರಾಯಣಸ್ವಾಮಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪ ನಿರ್ದೇಶಕ ಸೋಮಶಂಕರಪ್ಪ, ತಾಪಂ ಇಒ ಡಾ.ಕೆ.ಸರ್ವೇಶ್, ಡಿಡಿಪಿಐ ಕಚೇರಿಯ ವಿಷಯ ಪರಿವೀಕ್ಷಕ ಕೃಷ್ಣಪ್ಪ, ಬೈರಕೂರು ಹೋಬಳಿ ಉಪ ತಹಶೀಲ್ದಾರ್ ವೆಂಕಟೇಶಯ್ಯ, ಟಿಎಚ್‌ಒ ಡಾ.ವರ್ಣಶ್ರೀ, ಗುಡಿಪಲ್ಲಿ ಗ್ರಾಪಂ ಅಧ್ಯಕ್ಷೆ ಲಕ್ಷ್ಮೀ ವಿವಿಧ ಇಲಾಖೆ ಅಧಿಕಾರಿಗಳಿದ್ದರು.