ಬೆಂಗಳೂರು: ರಾಜ್ಯದ ಶೇ.20ರಷ್ಟು ದಲಿತ ಮತದಾರರ ಪೈಕಿ 20 ಮತಗಳೂ ಬಿಜೆಪಿಗೆ ಹೋಗದಂತೆ ನೋಡಿಕೊಳ್ಳಬೇಕಿದೆ. ಇದಕ್ಕಾಗಿ ನಾನು ಏಪ್ರಿಲ್‌ನಲ್ಲಿ ಮೂರು ವಾರ ಕರ್ನಾಟಕದಲ್ಲಿ ವಾಸ್ತವ್ಯ ಮಾಡಿ ಚುನಾವಣಾ ಪ್ರಚಾರ ಮಾಡುತ್ತೇನೆ ಎಂದು ದಲಿತ ಹೋರಾಟಗಾರ ಹಾಗೂ ಗುಜರಾತ್‌ನ ವಡ್‌ಗಾಂವ್ ಕ್ಷೇತ್ರದ ಶಾಸಕ ಜಿಗ್ನೇಶ್ ಮೇವಾನಿ ಹೇಳಿದ್ದಾರೆ.
ಗೌರಿ ಸ್ಮಾರಕ ಟ್ರಸ್ಟ್ ವತಿಯಿಂದ ದಿವಂಗತ ಪತ್ರಕರ್ತೆ ಗೌರಿ ಲಂಕೇಶ್ ಜನ್ಮ ದಿನದ ಪ್ರಯುಕ್ತ ಸೋಮವಾರ ಪುರಭವನದಲ್ಲಿ ಹಮ್ಮಿಕೊಂಡಿದ್ದ “ಗೌರಿ ದಿನ’ದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬಿಜೆಪಿಯಿಂದ ದಲಿತರಿಗೆ ಆಗಿರುವ ಅನ್ಯಾಯಗಳನ್ನು ಹೇಳಿ, ಕರ್ನಾಟಕದ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ದಲಿತರು ಆ ಪಕ್ಷಕ್ಕೆ ಮತ ಹಾಕದಂತೆ ಮಾಡುತ್ತೇನೆ ಎಂದರು.
ಕರ್ನಾಟಕದಲ್ಲಿ ಬಿಜೆಪಿ ಸೋಲಿಸಲು ಇಲ್ಲಿನ ನಾಗರಿಕ ಸಮಾಜ ಪಣ ತೊಡಬೇಕಾಗಿದೆ. “ಸೈದ್ಧಾಂತಿಕ ಶುದ್ಧತೆ’ ಸುತ್ತ ನಾವು ಸುತ್ತುತ್ತಿದ್ದರೆ, ಬಿಜೆಪಿಗೆ ಅಧಿಕಾರಕ್ಕೆ ಬರಲು ಅವಕಾಶ ಮಾಡಿಕೊಟ್ಟಂತಾಗುತ್ತದೆ. ಆದ್ದರಿಂದ ಸಂವಿಧಾನ, ಪ್ರಜಾಪ್ರಭುತ್ವದ ಉಳಿಯುವಿಕೆ, ದಲಿತ, ದಮನಿತ ಮತ್ತು ಅಲ್ಪಸಂಖ್ಯಾತರ ರಕ್ಷಣೆ ವಿಚಾರ ಬಂದಾಗ ನಾನು ಸೈದ್ಧಾಂತಿಕ ರಾಜಿ ಮಾಡಿಕೊಳ್ಳಲು ಸಿದ್ಧನಿದ್ದೇನೆ ಎಂದು ಮೇವಾನಿ ಹೇಳಿದರು.
ಜೆಎನ್‌ಯು ವಿದ್ಯಾರ್ಥಿ ನಾಯಕ ಕನ್ಹಯ್ನಾ ಮಾತನಾಡಿ, ನಮ್ಮನ್ನು “ತುಕಡಾ ಗ್ಯಾಂಗ್’ (ತುಂಡು ಗುಂಪು) ಎಂದು ಸಂಘಪರಿವಾರದವರು ಲೇವಡಿ ಮಾಡುತ್ತಾರೆ. ಹೌದು ! ನಾವು ದ್ವೇಷ ಮತ್ತು ಅಸಮಾನತೆಯನ್ನು ತುಂಡು ಮಾಡುತ್ತೇವೆ ಎಂದರು.
ಇದಕ್ಕೂ ಮೊದಲು ಗೌರಿ ಸ್ಮಾರಕ ಟ್ರಸ್ಟ್ ಉದ್ಘಾಟನೆ ಮತ್ತು ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ, ಕರ್ನಾಟಕಕ್ಕೆ ಗಂಡಾಂತರ ಬಂದಿದೆ. ಮುಂದಿನ ಚುನಾವಣೆಯಲ್ಲಿ ಇಲ್ಲಿ ಬಿಜೆಪಿ ಗೆದ್ದರೆ, ದೇಶದ ಎಲ್ಲ ರಾಜ್ಯಗಳಲ್ಲೂ ಅದು ಅಧಿಕಾರಕ್ಕೆ ಬರಲಿದೆ. ಕರ್ನಾಟಕದ ಜನರ ಪಾಲಿಗೆ ಮುಂದಿನ ವಿಧಾನಸಭೆ ಚುನಾವಣೆ ಅಗ್ನಿಪರೀಕ್ಷೆ ಇದ್ದಂತೆ. ಎಲ್ಲ ಪಕ್ಷಗಳ ಭ್ರಷ್ಟಾಚಾರದ ವಿರುದ್ಧ ನನ್ನ ರಾಜಕೀಯ ಹೋರಾಟ ಇದ್ದೇ ಇರುತ್ತದೆ ಎಂದರು.
ಗೌರಿ ಲಂಕೇಶ್ ಸಹೋದರಿ ಕವಿತಾ ಲಂಕೇಶ್, ಪತ್ರಕರ್ತ ದಿನೇಶ್ ಅಮಿನ್‌ಮಟ್ಟು, ಮಣಿಪುರದ ಮಾನವ ಹಕ್ಕು ಹೋರಾಟಗಾರ್ತಿ ಇರೋಮ್ ಶರ್ಮಿಳಾ, ನಟ ಪ್ರಕಾಶ್ ರೈ, ಮಾನವಹಕ್ಕು ಹೋರಾಟಗಾರ್ತಿ ತೀಸ್ತಾ ಸೆಟೆಲ್ವಾಡ್, ಜೆಎನ್‌ಯು ವಿದ್ಯಾರ್ಥಿ ನಾಯಕರಾದ ಶೆಹ್ಲಾ ರಶೀದ್, ಉಮರ್ ಖಾಲಿದ್, ಅಲಹಬಾದ್ ವಿವಿ ವಿದ್ಯಾರ್ಥಿ ನಾಯಕಿ ರೀಚಾ ಸಿಂಗ್, ಲೇಖಕ ವಿಕಾಸ್ ಮೌರ್ಯ, ಜನಶಕ್ತಿಯ ಡಾ. ವಾಸು, ಪತ್ರಕರ್ತ ಕುಮಾರ್ ಬರಡಿಕಟ್ಟಿ ಮತ್ತಿತರರು ಇದ್ದರು.