Advertisement

ಜಿಗಣಿ ಪುರಸಭೆ ವ್ಯಾಪಿ ಕಸದ ರಾಶಿ: ಆಕ್ರೋಶ

10:50 AM Nov 05, 2021 | Team Udayavani |

ಆನೇಕಲ್‌: ಜನಸಂಖ್ಯೆ ಹೆಚ್ಚಾದ ಗ್ರಾಪಂಗಳಲ್ಲಿ ಜನರ ಮೂಲಸೌಲಭ್ಯಗಳನ್ನು ಕಲ್ಪಿಸಲಾಗದೆಂದು ಗ್ರಾಪಂಗಳನ್ನು ಪುರಸಭೆಗಳನ್ನಾಗಿ ಮೇಲ್ದರ್ಜೆಗೆ ಏರಿಸಿ ಅವಶ್ಯಕತೆಗಳನ್ನು ಸಮರ್ಪಕವಾಗಿ ನಿರ್ವಹಿಸಲು ಸರ್ಕಾರ ಕ್ರಮ ಕೈಗೊಂಡಿದ್ದು. ಆದರೆ, ಪುರಸಭೆಗಳು ಜನತೆಯ ಅವಶ್ಯಕತೆ ಸರಿಯಾಗಿ ನಿರ್ವಹಿಸಲು ಮುಂದಾಗದಿದ್ದಾಗ ಜನರ ಆಕ್ರೋಶಕ್ಕೆ ಗುರಿಯಾಗುತ್ತದೆ. ಅಂತಹ ಒಂದು ಪರಿಸ್ಥಿತಿಗೆ ಆನೇಕಲ್‌ ತಾಲೂಕಿನ ಜಿಗಣಿ ಪುರಸಭೆ ಗುರಿಯಾಗಿದೆ.

Advertisement

ಪುರಸಭೆ ವ್ಯಾಪ್ತಿಯ ಕುಂಟ್ಲರೆಡ್ಡಿ ಬಡಾವಣೆಯಿಂದ ಜಿಗಣಿ ಕೈಗಾರಿಕಾ ಪ್ರದೇಶದ ದ್ವಿಪಥ ರಸ್ತೆಗೆ ಸೇರುವ ರಸ್ತೆಯ ಪಕ್ಕದಲ್ಲಿ ರಾಶಿ ಕಸ ಬಿದ್ದಿದೆ. ಸಮೀಪದಲ್ಲಿ ಅಂಗಡಿ, ಬೇಕರಿ, ಕೋಳಿ ಅಂಗಡಿಗಳಿವೆ. ಸಂಜೆ ಆಗುತ್ತಲೆ ನಾಲ್ಕು ಚಕ್ರದ ಗಾಡಿಗಳಲ್ಲಿ ಪಾನಿಪುರಿ, ಬೋಂಡಾ ಮಾರುವ ಅಂಗಡಿ ಇರುತ್ತವೆ. ಇಂತಹ ಜಾಗದ ಕೂಗಳೆತೆಯಲ್ಲಿ ಕೊಳೆತ ಕರಸದ ರಾಶಿ, ಪ್ಲಾಸ್ಟಿಕ್‌ ತ್ಯಾಜ್ಯ, ಇರುವುದು ಸಾಂಕ್ರಾಮಿಕ ರೋಗಗಳು ಹರಡುವುದಕ್ಕೆ ರಹದಾರಿಯಾದಂತೆ ಆಗಿದೆ. ಪ್ರತಿದಿನ ನೂರಾರು ಕಾರ್ಮಿಕರು ನಡೆದು ಕಾರ್ಖಾನೆಗಳಿಗೆ ಹೋಗಿ ಬರುತ್ತಿರುತ್ತಾರೆ. ಬಹುತೇಕರು ಮೂಗು ಮುಚ್ಚಿ ಹೋಗಿ ಬರುವಂತಾಗಿದೆ.

ಇದನ್ನೂ ಓದಿ:- ದೀಪಾವಳಿ ಹಬ್ಬ ಲಂಬಾಣಿ ಸಮುದಾಯಕ್ಕೆ ಹೊಸ ವರ್ಷ

ಸಾರ್ವಜನಿಕರ ಆಕ್ರೋಶ: ಆಯುಧ ಪೂಜೆಗೂ ಮೊದಲು ಎರಡು ದಿನ ಈ ಭಾಗದಲ್ಲಿ ಕಸ ವಿಲೇವಾರಿ ಆಗಿತ್ತು. ಅದಾದ ಬಳಿಕ 20 ದಿನಗಳಾದರೂ ಕಸ ವಿಲೇವಾರಿ ಆಗದೆ ರಾಶಿ ಬಿದ್ದಿದೆ. ಇಲ್ಲಿ ಹಲವು ಹಸು-ಕರುಗಳು ಓಡಾಡುತ್ತ ಕಸ, ಪ್ಲಾಸ್ಟಿಕ್‌ ತಿಂದು ಹಸುಗಳ ಆರೋಗ್ಯದ ಮೇಲೂ ವ್ಯತಿರಿಕ್ತ ಪರಿಣಾಮ ಬೀರಲಿದೆ. ಇಷ್ಟು ಅವ್ಯವಸ್ಥೆಯಾಗಿರುವುದರ ಬಗ್ಗೆ ಈ ಭಾಗದ ಜನ ಪ್ರತಿನಿಧಿಗಳಾಗಲಿ, ಪುರಸಭೆ ಅಧಿಕಾರಿಗಳು ಗಮನ ಹರಿಸದಿರುವುದರ ಬಗ್ಗೆ ಜನ ಆಕ್ರೋಶಗೊಂಡಿದ್ದಾರೆ.

ಅಧಿಕಾರಿಗಳ ನಿರ್ಲಕ್ಷ್ಯ: ಕಾರ್ಮಿಕ ಪ್ರವೀಣ್‌ ಮಾತನಾಡಿ, ಹಲವು ದಿನಗಳಿಂದ ಇಲ್ಲಿ ಕಸ ಬಿದ್ದಿದೆ. ಸಂಬಂಧಪಟ್ಟ ಅಧಿಕಾರಿಗಳು ಸ್ವತ್ಛತೆ ಬಗ್ಗೆ ಇಷ್ಟು ನಿರ್ಲಕ್ಷ್ಯ ವಹಿಸಿದರೆ ಇನ್ನು ಪ್ರಗತಿ ಕಾಮಗಾರಿಗಳ ಬಗ್ಗೆ ಎಷ್ಟರ ಮಟ್ಟಿಗೆ ಕೆಲಸ ಮಾಡುವರು ಎಂದು ಪುರಸಭೆ ಕಾರ್ಯವೈಖರಿ ಬಗ್ಗೆ ಬೇಸರ ವ್ಯಕ್ತ ಪಡಿಸಿದರು. ಕುಂಟ್ಲರೆಡ್ಡಿ ಬಡಾವಣೆ ವಾಸಿ ಪ್ರಶಾಂತ್‌ ಮಾತನಾಡಿ, ಅಧಿಕಾರಿಗಳು ಕಸದ ರಾಶಿಯನ್ನು ವಿಲೇವಾರಿ ಮಾಡಬೇಕು. ರಸ್ತೆ ಪಕ್ಕದಲ್ಲೇ ಕಸ ಹಾಕುತ್ತಿದ್ದಾರೆ. ಇಲ್ಲಿ ಕಸ ಹಾಕದಂತೆ ಬೋರ್ಡ್‌ ಹಾಕಬೇಕು. ಇಲ್ಲವಾದರೆ ಕಸದ ಪೆಟ್ಟಿಗಳನ್ನಾದರು ಇಡಬೇಕೆಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next