ಇಂಡಿ: ಪ್ರತಿಯೊಂದು ಜೀವಿಗೂ ಜೀವಿಸಲು ನೀರು ಬಹುಮುಖ್ಯ. ನೀರನ್ನು ಸಂರಕ್ಷಣೆ ಮಾಡುವುದು ಎಲ್ಲರ ಕರ್ತವ್ಯ. ನೀರಿನ ಮೂಲಗಳಲ್ಲಿ ಒಂದಾದ ಹಂಜಗಿ ಕೆರೆ ಅಭಿವೃದ್ಧಿ ಮಾಡಿ ಇತರೆ 31 ಗ್ರಾಮಗಳಿಗೆ ಬಹು ಹಳ್ಳಿಗಳ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.
ತಾಲೂಕಿನ ಹಂಜಗಿ ಕೆರೆ ವೀಕ್ಷಣೆ ಮಾಡಿ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಸ್ತುತ ವರ್ಷ ಬೇಸಿಗೆಯಲ್ಲಿ 31 ಗ್ರಾಮಗಳಲ್ಲಿ ಜನ ಮತ್ತು ಜಾನುವಾರುಗಳಿಗೆ ಅನುಕೂಲವಾಗಲು ಈಗಲೇ ನೀರು ಸಂಗ್ರಹಿಸಲಾಗುತ್ತಿದೆ ಎಂದರು.
ಹಂಜಗಿ ಕೆರೆಗೆ ಇಂಡಿ ಬ್ರಾಂಚ್ ಮುಖ್ಯ ಕಾಲುವೆಯಿಂದ ನೀರನ್ನು ಸಂಗ್ರಹಿಸಲಾಗುತ್ತಿದೆ. 2013-14ರಲ್ಲಿ ಮಜೂರಾತಿ ಪಡೆದು 2017ರಿಂದ 25 ಗ್ರಾಮಗಳು ಮತ್ತು 7 ತಾಂಡಾಗಳಿಗೆ ನೀರು ಪೂರೈಸಲಾಗುತ್ತಿದೆ ಎಂದರು. ಜಲಮೂಲ ಇಂಡಿ ಶಾಖಾ ಕಾಲುವೆಯ 118.43 ಕಿ.ಮೀ.ರಲ್ಲಿ ಹೆಡ್ ವರ್ಕ್ ನಿರ್ಮಿಸಿ 300 ಎಚ್‌ಪಿ 90 ಮೀ. ಹೆಡ್ 192.80 ಎಲ್‌ಪಿಎಸ್ ಸಾಮರ್ಥ್ಯದ 2 ಮೋಟಾರ್‌ಗಳನ್ನು ಅಳವಡಿಸಿ ಕಾಲುವೆಯಿಂದ ಹಂಜಗಿ ಕೆರೆಗೆ 450 ಮಿ.ಮೀ. ವ್ಯಾಸದ 12460 ಮೀ. ಉದ್ದದ ಡಿಐ ಪೈಪ್ ಕಚ್ಚಾ ನೀರು ಏರು ಕೊಳವೆ ಮಾರ್ಗ ಅಳವಡಿಸಿ ನೀರು ಹಂಜಗಿ ಕೆರೆಯ ಸಂಗ್ರಹಾಲಯದಲ್ಲಿ ಸಂಗ್ರಹಿಸಲಾಗುತ್ತಿದೆ ಎಂದರು.
ಅದಲ್ಲದೆ ನೀರು ಸಂಗ್ರಹಾಲಯ, ಜಾಕ್‌ವೆಲ್ ಹಂಜಗಿ ಕೆರೆಯ ಹತ್ತಿರ, ನೀರು ಶುದ್ಧೀಕರಣ ಘಟಕ, ಶುದ್ಧ ನೀರು ಸಂಗ್ರಹಾಲಯ, ಪಂಪ್ ಹೌಸ, ವಿತರಣಾ ಕೊಳವೆ ಮಾರ್ಗ, ಶುದ್ಧ ನೀರು ಸಂಗ್ರಹಣಾ ತೊಟ್ಟಿ ಮಾಡಲಾಗಿದೆ ಎಂದರು.
ಜಿಪಂ ಇಂಡಿ ಎಇಇ ಆರ್.ಎಸ್. ರುದ್ರವಾಡಿ, ಸಹಾಯಕ ಅಭಿಯಂತರ ಎಲ್.ಟಿ. ರಾಠೊಡ, ನಿವೃತ್ತ ಇಇ ಎಸ್.ಜಿ. ಕಗ್ಗೊಡ್, ನಿವೃತ್ತ ಎಇಇ ಕೆ.ಎಸ್. ಇಲ್ಯಾಳ ಮತ್ತಿರರಿದ್ದರು.