ಬಂಟ್ವಾಳ: ಬೆಂಗಳೂರಿನಿಂದ ಝಾರ್ಖಂಡ್‌ಗೆ ರೈಲು ಇದೆ ಎಂದು ಯಾರೋ ತಪ್ಪು ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಮಂಗಳವಾರ ರಾತ್ರಿ ಮಂಗಳೂರಿನಿಂದ ಹೆದ್ದಾರಿಯಲ್ಲಿ ಕಾಲ್ನಡಿಗೆಯಲ್ಲಿ ಹೊರಟ ಝಾರ್ಖಂಡ್ ಮೂಲದ 1,200 ಕಾರ್ಮಿಕರಿಗೆ ಬ್ರಹ್ಮರಕೂಟ್ಲು ಬಳಿಯ ಬಂಟ್ವಾಳದ ಬಂಟರ ಭವನದಲ್ಲಿ ವಸತಿ, ಊಟದ ವ್ಯವಸ್ಥೆ ಕಲ್ಪಿಸಲಾಗಿದೆ.
ಈ ಮಾಹಿತಿ ಪಡೆದ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಅವರು ಬಂಟ್ವಾಳ ಶಾಸಕ ರಾಜೇಶ್ ನಾೖಕ್ ಉಳಿಪ್ಪಾಡಿಗುತ್ತು ಅವರನ್ನು ಸಂಪರ್ಕಿಸಿದರು. ಬಳಿಕ ಬಂಟ್ವಾಳ ಬಂಟರ ಸಂಘದ ಅಧ್ಯಕ್ಷ ವಿವೇಕ್ ಶೆಟ್ಟಿ ನಗ್ರಿಗುತ್ತು ಹಾಗೂ ಕಾರ್ಯದರ್ಶಿ ಚಂದ್ರಹಾಸ ಶೆಟ್ಟಿ ಅವರ ಮೂಲಕ ಕಾರ್ಮಿಕರಿಗೆ ವ್ಯವಸ್ಥೆ ಮಾಡಲಾಯಿತು. ರಾಜೇಶ್ ನಾೖಕ್ ಬುಧವಾರದಿಂದ ಊಟೋಪಹಾರ ನೀಡುವ ಕುರಿತು ಭರವಸೆ ನೀಡಿದ್ದಾರೆ. 2 ದಿನಗಳೊಳಗೆ ರೈಲಿನ ವ್ಯವಸ್ಥೆ ಮಾಡುವ ಕುರಿತು ಕಾರ್ಮಿಕರಿಗೆ ಭರವಸೆ ನೀಡಲಾಗಿದೆ.
ತಡರಾತ್ರಿ ಎಸ್‌ಪಿ ಬಿ.ಎಂ. ಲಕ್ಷ್ಮೀ ಪ್ರಸಾದ್ ನೇತೃತ್ವದ ಬಂಟ್ವಾಳ ಪೊಲೀಸರು ಕಾರ್ಮಿಕರ ಮನವೊಲಿಸುವ ಕಾರ್ಯ ನಡೆಸಿದ್ದಾರೆ. ಬುಧವಾರ ಬೆಳಗ್ಗೆ ಸ್ಥಳಕ್ಕೆ ಶಾಸಕ ರಾಜೇಶ್ ನಾೖಕ್, ಮಂಗಳೂರು ಎಸಿ ಮದನ್ ಮೋಹನ್, ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್.ಆರ್, ಡಿವೈಎಸ್ಪಿ ವೆಲೆಂಟೈನ್ ಡಿ’ಸೋಜಾ, ತಾ.ಪಂ. ಇಒ ರಾಜಣ್ಣ, ತಾಲೂಕು ಆರೋಗ್ಯಾಧಿಕಾರಿ ಡಾ| ದೀಪಾ ಪ್ರಭು ಭೇಟಿ ನೀಡಿ ಕಾರ್ಮಿಕರ ಆರೋಗ್ಯ ತಪಾಸಣೆ ನಿರ್ವಹಿಸಿದ್ದಾರೆ.
ಬಂಟರ ಭವನಕ್ಕೆ ಸಂಸದ ನಳಿನ್ ಕುಮಾರ್ ಕಟೀಲು ಅವರೂ ಬುಧವಾರ ಭೇಟಿ ನೀಡಿ ಮಾಹಿತಿ ಪಡೆದರು.
ಬಂಟ್ವಾಳ ಗ್ರಾಮಾಂತರ ಠಾಣಾ ಪಿಎಸ್‌ಐ ಪ್ರಸನ್ನ ಕಾರ್ಮಿಕರನ್ನು ಕಳುಹಿಸುವ ಪ್ರಕ್ರಿಯೆ ಕುರಿತು ಮಾಹಿತಿ ನೀಡಿದರು. ಬುಡಾ ಅಧ್ಯಕ್ಷ ದೇವದಾಸ ಶೆಟ್ಟಿ ಸೇರಿದಂತೆ ಶಾಸಕರ ತಂಡ ಕಾರ್ಮಿಕರ ಊಟೋಪಹಾರದ ವ್ಯವಸ್ಥೆ ನಿರ್ವಹಿಸಿತು.
ಸ್ಥಳೀಯರಿಂದ ನೆರವು
ಗಂಟುಮೂಟೆ ಹಿಡಿದುಕೊಂಡು ಹೊರಟಿದ್ದ ಕಾರ್ಮಿಕರಿಗೆ ಫರಂಗಿಪೇಟೆ, ತುಂಬೆಯಲ್ಲಿ ಸ್ಥಳೀಯ ಯುವಕರು ನೀರು, ಹಣ್ಣಿನ ವ್ಯವಸ್ಥೆ ಕಲ್ಪಿಸಿದ್ದರು.