ಜಾರ್ಖಂಡ್:ತನ್ನ ಒಪ್ಪಿಗೆ ಇಲ್ಲದೇ ಕುಟುಂಬ ಸದಸ್ಯರು ಗೊತ್ತುಪಡಿಸಿದ ಯುವಕನೊಂದಿಗೆ ಮದುವೆಯಾಗಬೇಕೆಂಬ ಊರ ಹಿರಿಯರ ಫರ್ಮಾನ್ ಅನ್ನು ಧಿಕ್ಕರಿಸಿದ ಯುವತಿಯನ್ನು ಥಳಿಸಿ, ಆಕೆಯ ತಲೆಕೂದಲನ್ನು ಬೋಳಿಸಿ ಮೆರವಣಿಗೆ ಮಾಡಿಸಿರುವ ಘಟನೆ ಜಾರ್ಖಂಡ್ ನ ಪಾಲಾಮು ಜಿಲ್ಲೆಯಲ್ಲಿ ನಡೆದಿದೆ.
ಇದನ್ನೂ ಓದಿ:WhatsApp: ವಾಟ್ಸಾಪ್ ನಲ್ಲಿ ಬಂತು ʼಚಾಟ್ ಲಾಕ್ʼ ಫೀಚರ್: ಬಳಕೆ ಹೇಗೆ?
ಯುವತಿಯ ಕೊರಳಿಗೆ ಚಪ್ಪಲಿ ಹಾರ ಹಾಕಿ, ಮೆರವಣಿಗೆ ಮಾಡಿ ಕೊನೆಗೆ ಕಾಡಿನಲ್ಲಿ ಬಿಡಲಾಗಿತ್ತು ಎಂದು ವರದಿ ತಿಳಿಸಿದೆ. ಈ ಬಗ್ಗೆ ದೂರು ಸ್ವೀಕರಿಸಿದ ಪೊಲೀಸರು, ಸ್ಥಳಕ್ಕೆ ಆಗಮಿಸಿ ಕಾಡಿನಲ್ಲಿದ್ದ ಯುವತಿಯನ್ನು ಕರೆತಂದು ಪಾಲಾಮುವಿನಲ್ಲಿರುವ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆಕೆಯ ದೇಹದ ತುಂಬಾ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಪ್ರಕರಣವನ್ನು ದಾಖಲಿಸಿಕೊಂಡ ಪೊಲೀಸರು, ಆರೋಪಿಗಳನ್ನು ಬಂಧಿಸಿರುವುದಾಗಿ ವರದಿ ತಿಳಿಸಿದೆ.
ಈ ಯುವತಿಗೆ ಪೋಷಕರಿಲ್ಲ, ಆಕೆಯ ಮೂವರು ಸಹೋದರಿಯರಿಗೆ ವಿವಾಹವಾಗಿದ್ದು, ಒಬ್ಬ ವಿಕಲಾಂಗ ಸಹೋದರ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದಾನೆ. ಈಕೆಯ ಒಬ್ಬ ಸಹೋದರಿ ಲಾಟೇಹರ್ ಜಿಲ್ಲೆಯ ಯುವಕನ ಜತೆ ವಿವಾಹ ಮಾಡಿಸುವ ಸಿದ್ಧತೆ ನಡೆಸಿದ್ದಳು. ಆದರೆ ಯುವತಿ ಆತನನ್ನು ವಿವಾಹವಾಗಲು ನಿರಾಕರಿಸಿದ್ದಳು.
ಈ ಪ್ರಕರಣ ಊರ ಪಂಚಾಯ್ತಿ ಕಟ್ಟೆ ಏರಿತ್ತು. ಅಲ್ಲಿ ಹಿರಿಯರು ಯುವಕನ ಜತೆ ವಿವಾಹವಾಗುವಂತೆ ಯುವತಿಗೆ ಕಟ್ಟಪ್ಪಣೆ ಹೊರಡಿಸಿದ್ದರು. ಆದರೆ ಆಕೆ ವಿವಾಹವಾಗಲು ಒಪ್ಪದ ಕಾರಣ, ಥಳಿಸಿ, ತಲೆಕೂದಲು ಬೋಳಿಸಿ ಮೆರವಣಿಗೆ ಮಾಡಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.