ರಾಂಚಿ: ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೋರೆನ್ ಸೋಮವಾರ (ಸೆಪ್ಟೆಂಬರ್ 05) ವಿಧಾನಸಭೆಯಲ್ಲಿ ನಡೆದ ಕಲಾಪದಲ್ಲಿ ಬಹುಮತ ಸಾಬೀತುಪಡಿಸಿದ್ದು, ಇದರೊಂದಿಗೆ ಸೋರೆನ್ ಸರ್ಕಾರ ರಾಜಕೀಯ ಬಿಕ್ಕಟ್ಟಿನಿಂದ ಪಾರಾದಂತಾಗಿದೆ.
ಇದನ್ನೂ ಓದಿ:ನಿಮ್ಮ ಮನೆ ಮೊದಲು ಸರಿಪಡಿಸಿಕೊಳ್ಳಿ: ಕಾಂಗ್ರೆಸ್ ಗೆ ಸೋಮಶೇಖರ್ ತಿರುಗೇಟು
ಇಂದು ನಡೆದ ವಿಧಾನಸಭೆ ಕಲಾಪದಲ್ಲಿ,ವಿಶ್ವಾಸಮತ ಯಾಚನೆಯಲ್ಲಿ ಸೋರೆನ್ ಸರ್ಕಾರದ ಪರ 48 ಮತಗಳು ಚಲಾವಣೆಗೊಂಡಿದ್ದು, ಈ ಮೂಲಕ ವಿಶ್ವಾಸಮತ ಸಾಬೀತುಪಡಿಸಿರುವುದಾಗಿ ವರದಿ ವಿವರಿಸಿದೆ. ಸಿಎಂ ಸೋರೆನ್ ಜೆಎಂಎಂನ 33 ಶಾಸಕರು ಹಾಗೂ ಯುಪಿಎನ ಶಾಸಕರ ಜತೆಗೂಡಿ ವಿಧಾನಸಭೆ ಕಲಾಪಕ್ಕೆ ಆಗಮಿಸಿದ್ದರು.
ಕಲಾಪದಲ್ಲಿ ಸೋರೆನ್ ವಿಶ್ವಾಸಮತ ಯಾಚನೆಯ ಸಂದರ್ಭದಲ್ಲಿ ವಿಪಕ್ಷ ಬಿಜೆಪಿ ಸದಸ್ಯರು ಕಲಾಪ ಬಹಿಷ್ಕರಿಸಿ ಹೊರ ನಡೆದಿದ್ದರು. ಇಂದು ವಿಧಾನಸಭೆ ಕಲಾಪ ನಿಗದಿಯಾಗಿದ್ದ ಹಿನ್ನೆಲೆಯಲ್ಲಿ ಎಲ್ಲಾ 33 ಶಾಸಕರು ರಾಯ್ ಪುರ್ ನಿಂದ ರಾಂಚಿಗೆ ಬೆಳಗ್ಗೆ ಬಂದಿಳಿದಿದ್ದರು.
“ ಪ್ರಜಾಪ್ರಭುತ್ವವನ್ನು ರಕ್ಷಿಸುವ ನಿಟ್ಟಿನಲ್ಲಿ ನಾವು ವಿಧಾನಸಭೆ ಕಲಾಪವನ್ನು ಕರೆದಿರುವುದಾಗಿ ವಿಶ್ವಾಸಮತ ಯಾಚನೆಗೂ ಮುನ್ನ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೋರೆನ್” ಸುದ್ದಿಗಾರರ ಜತೆ ಮಾತನಾಡುತ್ತ ತಿಳಿಸಿದ್ದರು.