Advertisement

ಗುಂಪು ಥಳಿತ ಖಂಡನೀಯ

02:57 AM Jun 27, 2019 | Team Udayavani |

ಹೊಸದಿಲ್ಲಿ: ಜಾರ್ಖಂಡ್‌ನ‌ಲ್ಲಿ ನಡೆದ ಥಳಿತದಿಂದ ವ್ಯಕ್ತಿ ಅಸುನೀಗಿರುವುದು ಖಂಡನೀಯ. ಇದರಿಂದ ತಮಗೆ ನೋವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ರಾಜ್ಯಸಭೆಯಲ್ಲಿ ಹೇಳಿದ್ದಾರೆ. ಆದರೆ ಈ ಘಟನೆಗಾಗಿ ಇಡೀ ರಾಜ್ಯವನ್ನೇ ದೂರುವುದು ಸರಿಯಲ್ಲ ಎಂದಿದ್ದಾರೆ. ರಾಜ್ಯಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣಕ್ಕೆ ಧನ್ಯವಾದ ಸಮರ್ಪಿಸುವ ಗೊತ್ತುವಳಿ ಮೇಲೆ ಬುಧವಾರ ಮಾತನಾಡಿ ಅವರು ಈ ಮಾತುಗಳನ್ನಾಡಿದ್ದಾರೆ. ಎರಡನೇ ಬಾರಿಗೆ ಅಧಿಕಾರಕ್ಕೇರಿದ ಅನಂತರದಲ್ಲಿ ರಾಜ್ಯಸಭೆಯಲ್ಲಿ ಮೊದಲ ಬಾರಿಗೆ ಮಾತನಾಡಿದ ಅವರು, ಜಾರ್ಖಂಡ್‌ ಘಟನೆಯ ಬಗ್ಗೆ ಮೌನ ಮುರಿದು, ಖಂಡನೆ ವ್ಯಕ್ತಪಡಿಸಿದ್ದಾರೆ.

Advertisement

ಜಾರ್ಖಂಡ್‌ ಗುಂಪು ಥಳಿತದ ರಾಜ್ಯವೆಂದು ರಾಜ್ಯಸಭೆಯಲ್ಲಿ ವಿಪಕ್ಷ ನಾಯಕ ಗುಲಾಂ ನಬಿ ಆಝಾದ್‌ 2 ದಿನಗಳ ಹಿಂದೆ ಟೀಕಿಸಿದ್ದಕ್ಕೆ ಆಕ್ಷೇಪ ಮಾಡಿದ ಪ್ರಧಾನಿ, ‘ಒಂದು ಘಟನೆಯನ್ನು ಆಧರಿಸಿ ಇಡೀ ರಾಜ್ಯವನ್ನೇ ಅವಮಾನಿಸುವ ಹಕ್ಕು ಯಾರಿಗೂ ಇಲ್ಲ’ ಎಂದಿದ್ದಾರೆ. ‘ಜಾರ್ಖಂಡ್‌, ಕೇರಳ, ಪಶ್ಚಿಮ ಬಂಗಾಲ ಸಹಿತ ದೇಶದ ಯಾವುದೇ ಭಾಗದಲ್ಲಿ ಇಂಥ ಘಟನೆ ನಡೆದರೂ ಅದು ಖಂಡನೀಯ. ಈ ನಿಲುವು ಹೊಂದಿದ್ದರೆ ಮಾತ್ರ ಇಂಥ ಹಿಂಸಾ ಕೃತ್ಯಗಳ ವಿರುದ್ಧ ಕಠಿನ ಕ್ರಮ ಕೈಗೊಳ್ಳಲು ಸಾಧ್ಯ’ ಎಂದು ಹೇಳಿದ್ದಾರೆ.

ತಗ್ಗದ ಅಹಂಕಾರ: ಲೋಕಸಭೆಯಲ್ಲಿ ಮಂಗಳವಾರ ಮಾತನಾಡಿದ್ದ ವೇಳೆ ಕಾಂಗ್ರೆಸ್‌ ವಿರುದ್ಧ ಮುಗಿಬಿದ್ದಿದ್ದ ಪ್ರಧಾನಿ, ರಾಜ್ಯಸಭೆಯಲ್ಲೂ ವಾಗ್ಧಾಳಿ ಮುಂದುವರಿಸಿದ್ದಾರೆ. ಬಿಜೆಪಿ ಪರವಾಗಿ ದೇಶದ ಮತದಾರರು ನೀಡಿದ ಜನಾದೇಶ ಪ್ರಶ್ನೆ ಮಾಡುವ ಮೂಲಕ ಜನರು ನೀಡಿದ ತೀರ್ಪಿಗೆ ಕಾಂಗ್ರೆಸ್‌ ಅವಮಾನ ಮಾಡಿದೆ. 17 ರಾಜ್ಯಗಳಲ್ಲಿ ಆ ಪಕ್ಷಕ್ಕೆ ಒಂದೇ ಒಂದು ಸ್ಥಾನ ಸಿಗದೇ ಇದ್ದರೂ ಅಹಂಕಾರ ತಗ್ಗಿಯೇ ಇಲ್ಲ ಎಂದಿದ್ದಾರೆ. ಕಾಂಗ್ರೆಸ್‌ ಸೋತರೆ ದೇಶವೇ ಸೋತಂತೆ ಎಂದು ಭಾವಿಸಿದ್ದೀರಾ ಎಂದು ಕಾಂಗ್ರೆಸ್ಸನ್ನು ಪಿಎಂ ಪ್ರಶ್ನಿಸಿದ್ದಾರೆ.

‘ವಯನಾಡ್‌ನ‌ಲ್ಲಿ ಭಾರತ ಸೋತಿತೇ? ರಾಯ್‌ಬರೇಲಿಯಲ್ಲಿ ಭಾರತ ಸೋತಿತೇ? ತಿರುವನಂತಪುರದಲ್ಲಿ ಭಾರತ ಸೋತಿತೇ? ಅಮೇಠಿಯಲ್ಲಿ ಏನಾಗಿದೆ? ಇದು ಎಂಥಾ ವಾದ? ಕಾಂಗ್ರೆಸ್‌ ಸೋತಿತು ಎಂದಾದರೆ ಭಾರತವೇ ಸೋತಂತೆ ಆಯಿತೇ? ಅಹಂಕಾರಕ್ಕೂ ಒಂದು ಮಿತಿ ಇದೆ. ಈ ಬಾರಿಯ ಚುನಾವಣೆಯಲ್ಲಿ 17 ರಾಜ್ಯಗಳಲ್ಲಿ ಒಂದು ಸ್ಥಾನ ಗಳಿಸಲೂ ಅದು ವಿಫ‌ಲವಾಗಿದೆ’ ಎಂದು ವಾಗ್ಧಾಳಿ ನಡೆಸಿದ್ದಾರೆ.

‘ಕೆಲವು ಮಂದಿ ಸಂಕುಚಿತ ಮತ್ತು ವಿಕೃತ ಮನೋಭಾವದಿಂದಾಗಿ ಜನರ ತೀರ್ಪು ಒಪ್ಪುತ್ತಿಲ್ಲ. ಚುನಾವಣೆಯಲ್ಲಿ ನೀವು ಗೆದ್ದಿರಬಹುದು, ಆದರೆ ದೇಶ ಸೋತಿದೆ ಎಂದು ಕೆಲವರು ಹೇಳುತ್ತಿದ್ದಾರೆ. ಪ್ರಜಾಪ್ರಭುತ್ವಕ್ಕೆ ಇದಕ್ಕಿಂತ ದೊಡ್ಡ ಅವಮಾನವಿಲ್ಲ’ ಎಂದು ಹೇಳಿದ್ದಾರೆ.

Advertisement

ಇವಿಎಂ ಬಗೆಗಿನ ಪ್ರಸ್ತಾವಕ್ಕೆ ಆಕ್ಷೇಪ: ವಿದ್ಯುನ್ಮಾನ ಮತಯಂತ್ರಗಳ (ಇವಿಎಂ)ಬಗ್ಗೆ 1977ರಲ್ಲಿಯೇ ಚರ್ಚಿಸಲಾಗಿತ್ತು. 1988ರಲ್ಲಿ ಚುನಾವಣಾ ವ್ಯವಸ್ಥೆಗೆ ಅದನ್ನು ಅಳವಡಿಸಿಕೊಳ್ಳುವ ಬಗ್ಗೆ ನಿರ್ಧಾರ ಕೈಗೊಳ್ಳುವ ವೇಳೆ ನಾವು ಇರಲಿಲ್ಲ. ಆ ವೇಳೆಗೆ ಇದ್ದದ್ದು ಕಾಂಗ್ರೆಸ್‌ ಮತ್ತು ಅದರ ಮೂಲಕವೇ ಅವರು ಚುನಾವಣೆಯನ್ನೂ ಗೆದ್ದರು. ಸೋತಾಗ ಮತ ಯಂತ್ರಗಳ ಮೇಲೆ ಆರೋಪ ಹೊರಿಸುತ್ತಾರೆ.

ಇವಿಎಂಗಳನ್ನು ಹ್ಯಾಕ್‌ ಮಾಡಲು ಸಾಧ್ಯ ಎಂಬ ಆರೋಪದ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಚರ್ಚೆಗೆ ಆಹ್ವಾನಿಸಿದ್ದಾಗ ಸಿಪಿಐ, ಸಿಪಿಎಂ ಮಾತ್ರ ತೆರಳಿದ್ದವು. ಅದಕ್ಕಾಗಿ ಆ ಪಕ್ಷದ ನಾಯಕರನ್ನು ಅಭಿನಂದಿಸುತ್ತೇನೆ. ಉಳಿದವರು ಯಾಕೆ ಹೋಗಿ ಅಭಿಪ್ರಾಯ ಮಂಡಿಸಲಿಲ್ಲ ಎಂದು ಪ್ರಧಾನಿ ನೇರವಾಗಿಯೇ ರಾಜ್ಯಸಭೆಯಲ್ಲಿ ಕಾಂಗ್ರೆಸ್‌ ನಾಯಕರನ್ನು ತರಾಟೆಗೆ ತೆಗೆದುಕೊಂಡರು.

ತಂತ್ರಜ್ಞಾನಕ್ಕೂ ಆಕ್ಷೇಪ: ಇವಿಎಂಗಳ ಬಗ್ಗೆ ತಕರಾರು ತೆಗೆಯುವವರು, ಡಿಜಿಟಲ್ ವ್ಯವಹಾರ, ಜಿಎಸ್‌ಟಿ, ಭೀಮ್‌ ಆ್ಯಪ್‌ ಬಗ್ಗೆ ಕೂಡ ಆಕ್ಷೇಪವೆತ್ತಿದ್ದಾರೆ. ಇಂಥ ಋಣಾತ್ಮಕ ಚಿಂತನೆಗಳೇಕೆ ಎಂದು ಮೋದಿ ಪ್ರಶ್ನೆ ಮಾಡಿದ್ದಾರೆ.

ಹಳೆಯ ಭಾರತ ಬೇಕೆ?
ಹೊಸ ಭಾರತ ಬೇಡ, ಹಳೆಯ ಭಾರತವನ್ನು ಹಿಂತಿರುಗಿ ಕೊಡಿ ಎಂದು ರಾಜ್ಯಸಭೆ ವಿಪಕ್ಷ ನಾಯಕ ಗುಲಾಮ್‌ ನಬಿ ಆಝಾದ್‌ ಟೀಕಿಸಿದ್ದಕ್ಕೆ ತಿರುಗೇಟು ನೀಡಿದ ಪ್ರಧಾನಿ ‘ಸಂಪುಟ ಸಭೆಯಲ್ಲಿ ಕೈಗೊಂಡ ನಿರ್ಣಯವನ್ನು ಸುದ್ದಿಗೋಷ್ಠಿಯಲ್ಲಿ ಹರಿದು ಎಸೆಯಲಾಗುತ್ತಿತ್ತು, ನೌಕಾಪಡೆಯನ್ನು ವೈಯಕ್ತಿಕ ಉಪಯೋಗಕ್ಕಾಗಿ ಬಳಕೆ ಮಾಡಲಾಗುತ್ತಿತ್ತು. ಹಲವು ರೀತಿಯ ಹಗರಣಗಳು ನಡೆದಿದ್ದವು. ಹಳೆಯ ಭಾರತಕ್ಕೆ ದೇಶವನ್ನು ತುಂಡು ತುಂಡು ಮಾಡಬೇಕು ಎಂಬ ಗುಂಪಿನ ಬೆಂಬಲ ಇತ್ತು. ಅದಕ್ಕೇ ಅವರು ಹೊಸ ಭಾರತ ಬೇಡವೆನ್ನುತ್ತಿದ್ದಾರೆಯೇ?’ ಎಂದು ಪ್ರಶ್ನಿಸಿದರು ಪ್ರಧಾನಿ.
Advertisement

Udayavani is now on Telegram. Click here to join our channel and stay updated with the latest news.

Next