Advertisement

ಕಮಲದ ತೆಕ್ಕೆಯಿಂದ ಜಾರಿತೇಕೆ ಜಾರ್ಖಂಡ?

10:09 AM Dec 25, 2019 | sudhir |

ಸಂತಾಲ್‌ ಮತ್ತು ಛೋಟಾನಾಗ್ಪುರ್‌ ಕಾಯ್ದೆಗಳಲ್ಲಿ ತಿದ್ದುಪಡಿ ತರಲು ಪ್ರಯತ್ನಿಸುವ‌ ಮೂಲಕ ಬಿಜೆಪಿ, ಉದ್ಯಮಿಗಳ ತೆಕ್ಕೆಗೆ ಬುಡಕಟ್ಟು ಜನರ ಜಮೀನುಗಳನ್ನು ಹಾಕಲು ಮುಂದಾಗಿದೆ ಎಂದು ಪ್ರತಿಭಟನೆಗಳು ನಡೆದವು. ಪಕ್ಷದೊಳಗಿನ ಆದಿವಾಸಿ ನಾಯಕರೂ, ಸರಕಾರದ ಈ ಪ್ರಯತ್ನಕ್ಕೆ ಆತಂಕ ವ್ಯಕ್ತಪಡಿಸಿದರು. ಅವರ ಆತಂಕವನ್ನು ಮತ್ತಷ್ಟು ಹೆಚ್ಚಿಸುವಂತಿತ್ತು ರಘುಬರ್‌ದಾಸ್‌ ವೈಖರಿ.

Advertisement

“”ಅಬ್‌ ಕೀ ಬಾರ್‌ 65 ಪಾರ್‌(ಈ ಬಾರಿ 65ಕ್ಕೂ ಹೆಚ್ಚು ಸ್ಥಾನ ಗೆಲ್ಲುತ್ತೇವೆ)” ಎಂದು ಜಾರ್ಖಂಡ್‌ ಚುನಾವಣೆಯ ಪ್ರಚಾರಗಳಲ್ಲಿ ಬಿಜೆಪಿ ಘೋಷಣೆ ಮಾಡಿತ್ತು. ಆದರೆ, ಅದೀಗ ತಾನು ಘೋಷಿಸಿದ್ದಕ್ಕಿಂತ 40 ಸ್ಥಾನ ಕಡಿಮೆ ಪಡೆದಿದೆ. ರಘುಬರ್‌ ದಾಸ್‌ ನೇತೃತ್ವದಲ್ಲಿ ಪಕ್ಷ 25 ಸ್ಥಾನಕ್ಕೆ ಕುಸಿದು ಅಧಿಕಾರ ಕಳೆದುಕೊಂಡಿದೆ. ತನ್ಮೂಲಕ ಬುಡಕಟ್ಟೇತರ ವ್ಯಕ್ತಿಯೊಬ್ಬರ 5 ವರ್ಷದ ಆಡಳಿತಾವಧಿಯೂ ಕೊನೆಗೊಂಡಿದೆ.

19 ವರ್ಷದ ಹಿಂದೆ ಬಿಹಾರದಿಂದ ಬೇರ್ಪಟ್ಟು ಅಸ್ತಿತ್ವಕ್ಕೆ ಬಂದ ಜಾರ್ಖಂಡ್‌ನಲ್ಲಿ ಆರಂಭದಿಂದಲೇ ಬಿಜೆಪಿ ತನ್ನ ಶಕ್ತಿಯನ್ನು ವಿಸ್ತರಿಸಿಕೊಂಡು ಬೆಳೆದು ನಿಂತಿತ್ತು. ಆದರೆ ರಘುಬರ್‌ದಾಸ್‌ ಆಡಳಿತವು ಕಳೆದ ಐದು ವರ್ಷದಲ್ಲಿ ಪಕ್ಷದ ವರ್ಚಸ್ಸನ್ನು ಅಕ್ಷರಶಃ ನೆಲಕಚ್ಚುವಂತೆ ಮಾಡಿದ್ದು ಸುಳ್ಳಲ್ಲ. ಸತ್ಯವೇನೆಂದರೆ, ಚುನಾವಣಾ ಪೂರ್ವ ಬಹುತೇಕ ಸಮೀಕ್ಷೆಗಳು ಕಾಂಗ್ರೆಸ್‌-ಜಾರ್ಖಂಡ್‌ ಮುಕ್ತಿ ಮೋರ್ಚಾ ನೇತೃತ್ವದ ಮೈತ್ರಿಕೂಟಕ್ಕೇ ಮೇಲುಗೈ ಸಿಗುತ್ತದೆ ಎಂದೇ ಹೇಳಿದ್ದವು. ಆದರೆ, ಲೋಕಸಭಾ
ಚುನಾವಣೆ ಗೆಲುವಿನ ಗುಂಗಿನಲ್ಲಿದ್ದ ಬಿಜೆಪಿ ಎಚ್ಚೆತ್ತುಕೊಳ್ಳುವಲ್ಲಿ
ವಿಫ‌ಲವಾಯಿತು. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಜನರು ಬಿಜೆಪಿಗೆ 14ರಲ್ಲಿ 13 ಸ್ಥಾನ ಗೆಲ್ಲಿಸಿಕೊಟ್ಟಿದ್ದರು. ವಿಧಾನಸಭಾ ಚುನಾವಣೆಯಲ್ಲೂ ಅದೇ ಮ್ಯಾಜಿಕ್‌ ನಡೆಯುತ್ತದೆ ಎಂದೇ ಕೇಂದ್ರ ಬಿಜೆಪಿ
ಭಾವಿಸಿತ್ತು ಎನಿಸುತ್ತದೆ. ಹೀಗಾಗಿ, ಲೋಕಸಭಾ ಚುನಾವಣೆಯಂತೆ, ವಿಧಾನಸಭಾ ಚುನಾವಣೆಯ ಪ್ರಚಾರಗಳಲ್ಲೂ ರಾಷ್ಟ್ರೀಯ ಸಂಗತಿಗಳ ಬಗ್ಗೆಯಷ್ಟೇ ಮಾತನಾಡಿತು.

ಸತ್ಯವೇನೆಂದರೆ, ಜಾರ್ಖಂಡ್‌ ಜನತೆ ರಘುಬರ್‌ದಾಸ್‌ ಸರ್ಕಾರವನ್ನು ಕೆಳಕ್ಕುರುಳಿಸಬೇಕೆಂದು ವರ್ಷಗಳ ಹಿಂದೆಯೇ ನಿಶ್ಚಯಿಸಿಯಾಗಿತ್ತು ಎನಿಸುತ್ತದೆ. ರಾಜ್ಯದ 26 ಪ್ರತಿಶತದಷ್ಟಿರುವ ಬುಡಕಟ್ಟು ಸಮುದಾಯಗಳಲ್ಲಿ ಹಾಗೂ ಪಕ್ಷದ ಒಳಗಿನವರಿಗೆ ಮಡುಗಟ್ಟಿದ್ದ ಅತೀವ ಅಸಮಾಧಾನವೇ ಬಿಜೆಪಿ ಸೋಲಿಗೆ ಕಾರಣ. ಅದರಲ್ಲೂ ರಘುಬರ್‌ ವರ್ತನೆ(ಅಹಂ) ಬಿಜೆಪಿ ಮುಗ್ಗರಿಸಲು ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ. ಒಂದೆಡೆ ಜನರು, “”ಉನ್ಕಾ ರವಯ್ನಾ ಅಚ್ಚಾ ನಹೀ ಹೇಂ. ಬಹುತ್‌ ಅಕಡ್‌ ಹೇಂ ಉನ್ಕೋ. ಮಿಲೆ¤à ಹೀ ನಹೀಂ ಹೇಂ”(ಅವರ ಧೋರಣೆ ಸರಿಯಾಗಿಲ್ಲ. ಬಹಳ ಅಹಂಕಾರ ತೋರಿಸುತ್ತಾರೆ, ಅವರು ನಮಗೆ ಸಿಗುವುದೇ ಇಲ್ಲ)” ಎಂದು ಅಸಮಾಧಾನ ವ್ಯಕ್ತಪಡಿಸುತ್ತಲೇ ಇದ್ದರೆ, ಇನ್ನೊಂದೆಡೆ ಖುದ್ದು ಪಕ್ಷದ ಒಳಗಿನವರೂ ಇದೇ ಧಾಟಿಯಲ್ಲೇ ದೂರುತ್ತಾ ಬಂದರು- “”ಅವರು ನಮ್ಮ ಜತೆ ಬಹಳ
ಒರಟಾಗಿ ಮಾತನಾಡುತ್ತಾರೆ. ನಿರ್ಧಾರ ತೆಗೆದುಕೊಳ್ಳುವಾಗ ಬರೀ ಕೇಂದ್ರ ನಾಯಕರ ಜತೆ ಮಾತನಾಡುತ್ತಾರೆ, ನಮ್ಮನ್ನು ಕೇಳುವುದೇ ಇಲ್ಲ.

ಇದರಿಂದಾಗಿ, ನಮಗೆ ಅನೇಕ ಬಾರಿ ಅವಮಾನವಾಗಿದೆ. ಅವರನ್ನು ಸುಲಭವಾಗಿ ಭೇಟಿಯಾಗುವುದಕ್ಕೂ ನಮಗೆ ಸಾಧ್ಯವಿಲ್ಲ” ಎನ್ನುತ್ತಿದ್ದರು. ರಘುಬರ್‌ರ ಆಪ್ತರು ಮಾತ್ರ, ತಮ್ಮ ನಾಯಕ ಅಹಂಕಾರಿಯಲ್ಲ, ಇದೆಲ್ಲ ಬಲಿಷ್ಠ ನಾಯಕತ್ವದ ಗುಣಎಂದು ಸಮರ್ಥಿಸಿಕೊಳ್ಳುತ್ತಾ ಬಂದರು.

Advertisement

ಈ ಚುನಾವಣೆಯಲ್ಲಿ ಬಿಜೆಪಿಯ ಹೈಕಮಾಂಡ್‌ ರಘುಬರ್‌ದಾಸ್‌ರನ್ನೇ ಮುಖ್ಯಮಂತ್ರಿ ಅಭ್ಯರ್ಥಿ ಎಂದು ನಿರ್ಣಯಿಸಿದಾಗ, ಪಕ್ಷದಲ್ಲಿ ಅಪಸ್ವರ ಹುಟ್ಟಿಕೊಂಡಿತು. ಸೀಟು ಹಂಚಿಕೆ ವಿಚಾರದಲ್ಲೂ ರಘುಬರ್‌ ಪಕ್ಷದ ನಿಷ್ಠಾವಂತ, ಅರ್ಹ ನಾಯಕರನ್ನು ಕಡೆಗಣಿಸಿ ತಮ್ಮ ಆಪ್ತರಿಗಷ್ಟೇ ಟಿಕೆಟು ಕೊಟ್ಟಿದ್ದರು. ಕೇಂದ್ರ ಸಚಿವ ಅರ್ಜುನ್‌ ಮುಂಡಾರ ಆಪ್ತ ಶಾಸಕರೆನಿಸಿಕೊಂಡವರನ್ನೆಲ್ಲ ಕಡೆಗಣಿಸಿದರು. ಮುಖ್ಯವಾಗಿ ಜಾರ್ಖಂಡ್‌
ಬಿಜೆಪಿಯ ಹಿರಿಯ ನಾಯಕರಾಗಿದ್ದ ಸರಯೂ ರಾಯ್‌ರಿಗೆ ರಘುಬರ್‌ ದಾಸ್‌ ಟಿಕೆಟ್‌ ನಿರಾಕರಿಸಿದರು. ಟಿಕೆಟ್‌ ಸಿಗದಿದ್ದಾಗ ಸರಯೂ ರಾಯ್‌ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲು ನಿರ್ಧರಿಸಿದರು. ಇದರಿಂದ ಕುಪಿತರಾದ ರಘುಬರ್‌, ಸರಯೂ ರಾಯ್‌ರನ್ನು ಉಚ್ಚಾಟಿಸಿದರು. ಈಗ, ಇದೇ ಸರಯೂ ರಾಯ್‌ ರಘುಬರ್‌ ದಾಸ್‌ ವಿರುದ್ಧವೇ ಕಣಕ್ಕಿಳಿದು ಭರ್ಜರಿ ಗೆಲುವು ಸಾಧಿಸಿದ್ದಾರೆ! ಪಕ್ಷದ ಸೋಲಷ್ಟೇ ಅಲ್ಲದೆ, ಸ್ವಂತ ಕ್ಷೇತ್ರದಲ್ಲೂ ಮುಖಭಂಗ ಅನುಭವಿಸಿದ್ದಾರೆ ರಘುಬರ್‌.

ಬುಡಕಟ್ಟು ಸಮುದಾಯ ವರ್ಸಸ್‌ ಬಿಜೆಪಿ
ಜಾರ್ಖಂಡ್‌ ಬಿಜೆಪಿ ಕಳೆದ ಕೆಲವು ವರ್ಷಗಳಿಂದ ಬಹುಸಂಖ್ಯಾತ ಬುಡಕಟ್ಟು ಸಮುದಾಯಗಳ ಮುನಿಸಿಗೆ ಪಾತ್ರವಾಗುತ್ತಾ ಬಂದಿದೆ. ಅರ್ಜುನ್‌ ಮುಂಡಾರಂಥ ಬುಡಕಟ್ಟು ನಾಯಕರನ್ನು ಮೂಲೆಗುಂಪಾಗಿಸಿದ್ದಷ್ಟೇ ಅಲ್ಲದೇ, ತನ್ನ ಮಿತ್ರ ಪಕ್ಷ ಆಲ್‌ ಜಾರ್ಖಂಡ್‌ ವಿದ್ಯಾರ್ಥಿ ಒಕ್ಕೂಟವನ್ನೂ ಅದು ಕಡೆಗಣಿಸಿದ್ದು ಸುಳ್ಳಲ್ಲ.

ಇದೆಲ್ಲಕ್ಕಿಂತ ಹೆಚ್ಚಾಗಿ, 2016-17ರಲ್ಲಿ “”ಛೋಟಾನಾಗ್ಪುರ ಹಿಡುವಳಿ ಕಾಯ್ದೆ” ಮತ್ತು “”ಸಂತಾಲ್‌ ಪರಗಣಾಸ್‌ ಕಾಯ್ದೆ”ಯಲ್ಲಿ ರಘುಬರ್‌ ದಾಸ್‌ ನೇತೃತ್ವದ ಸರ್ಕಾರ ಕೆಲವು ತಿದ್ದುಪಡಿಗಳನ್ನು ತರಲು ನಡೆಸಿದ (ವಿಫ‌ಲ)ಪ್ರಯತ್ನ ಪಕ್ಷಕ್ಕೆ ಮಾರಕವಾಗಿ ಪರಿಣಮಿಸಿದವು. ದಶಕಗಳಿಂದಲೂ ಅಸ್ತಿತ್ವದಲ್ಲಿರುವ ಈ ಕಾಯ್ದೆಗಳು, ಬುಡಕಟ್ಟು ಸಮುದಾಯಗಳಿಗೆ ಸೇರಿದ ಜಮೀನನ್ನು ಬುಡಕಟ್ಟೇತರ ಸಮುದಾಯಗಳು ಖರೀದಿಸದಂತೆ ನಿರ್ಬಂಧ ಹೇರಿವೆ.

ಸತ್ಯವೇನೆಂದರೆ, ಈಗಲೂ ಜಾರ್ಖಂಡ್‌ನ‌ ನೈಸರ್ಗಿಕ ಸಂಪನ್ಮೂಲವು ದುರ್ಬಳಕೆಯಾಗದೇ ಇರುವುದಕ್ಕೆ ಈ ಕಾಯ್ದೆಗಳೇ ಕಾರಣ. ಆದರೆ ರಘುಬರ್‌ ತರಲು ಮುಂದಾದ ತಿದ್ದುಪಡಿಗಳು, ಬುಡಕಟ್ಟು ಸಮುದಾಯಗಳಿಗೆ ಸೇರಿದ ಜಮೀನುಗಳನ್ನು ಉದ್ಯಮಿಗಳ ತೆಕ್ಕೆಗೆ ಸಿಗುವಂತೆ ರೂಪಿತವಾಗಿದ್ದವು.

ಆಗ ಜಾರ್ಖಂಡ್‌ನಾದ್ಯಂತ, “”ಬಿಜೆಪಿ ಸರ್ಕಾರ, ಉದ್ಯಮಿಗಳ ಓಲೈಕೆಗಾಗಿ ಬುಡಕಟ್ಟು ಜನರನ್ನು ಬಲಿಗೊಡಲು ಮುಂದಾಗಿದೆ” ಎಂದು
ಪ್ರತಿಭಟನೆಗಳು ನಡೆದವು. ಪಕ್ಷದೊಳಗಿನ ಬುಡಕಟ್ಟು ಸಮುದಾಯಗಳ ನಾಯಕರೂ, ಸರ್ಕಾರದ ಈ ಪ್ರಯತ್ನಕ್ಕೆ ಆತಂಕ ವ್ಯಕ್ತಪಡಿಸಿದರು. ಅವರ ಆತಂಕಕ್ಕೆ ಇಂಬುಗೊಡುವಂತಿತ್ತು ರಘುಬರ್‌ದಾಸ್‌ರ ವೈಖರಿ. ಏಕೆಂದರೆ ಅವರು ಅಧಿಕಾರಕ್ಕೆ ಬಂದಾಗ ಕೋಲ್ಕತ್ತಾ, ಮುಂಬೈಗಳಲ್ಲಿ ರೋಡ್‌ಶೋ ನಡೆಸಿ, ತಮ್ಮ ರಾಜ್ಯಕ್ಕೆ ಬಂದು ಹೂಡಿಕೆ ಮಾಡುವಂತೆ ಹೂಡಿಕೆದಾರರನ್ನು ಆಹ್ವಾನಿಸಿದ್ದರು. ಜನಾಕ್ರೋಶ ಎದುರಾದಾಗಲೂ ಕೂಡ, “”ಬುಡಕಟ್ಟು ಜನರಿಗೆ ಈ ತಿದ್ದುಪಡಿಯಿಂದ ಲಾಭವಾಗಲಿದೆ” ಎಂದೇ ವಾದಿಸಿದರು. ನಿಜಕ್ಕೂ ರಾಜ್ಯವನ್ನು ಅಭಿವೃದ್ಧಿ ಪಥದಲ್ಲಿ ಒಯ್ಯಲು ರಘುಬರ್‌ ಈ ರೀತಿಯ ಕ್ರಮಕ್ಕೆ ಮುಂದಾಗಿರಲೂಬಹುದು, ಆದರೆ, ರೇಗುವ ಧಾಟಿಯಲ್ಲೇ ಇರುತ್ತಿದ್ದ ಅವರ ಉತ್ತರಗಳೆಲ್ಲ ಮೂಲನಿವಾಸಿಗಳಿಗೆ ಸಮಾಧಾನ ನೀಡುವ ಬದಲು, ಅನುಮಾನ ಹೆಚ್ಚಲು ಕಾರಣವಾದವು. ಈ ಅನುಮಾನಕ್ಕೆ ಜೆಎಮ್‌ಎಮ್‌ ಮತ್ತು ಕಾಂಗ್ರೆಸ್‌ ನೀರೆರೆದು ಪೋಷಿಸಿದವು. ಪಕ್ಷದಲ್ಲಿ ಬುಡಕಟ್ಟು ಸಮುದಾಯದ ನಾಯಕರೂ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಲಾರಂಭಿಸಿದ್ದರು.

ಇಲ್ಲಿ ಹೇಳಲೇಬೇಕಾದ ಸಂಗತಿಯೆಂದರೆ, ಇದಕ್ಕೂ ಮುನ್ನ ರಘುಬರ್‌ ದಾಸ್‌ ಸರ್ಕಾರ ತಂದಿದ್ದ ಡಾಮಿಸೈಲ್‌(ವಾಸಸ್ಥಳ) ನೀತಿಯೂ ಸ್ಥಳೀಯರಿಗೆ ಬೇಸರ ಮೂಡಿಸಿತ್ತು. ಜಾರ್ಖಂಡ್‌ನಲ್ಲಿ 30 ವರ್ಷಗಳಿಂದ ವಾಸಿಸುವವರಿಗೆಲ್ಲ “ಸ್ಥಳೀಯ ನಿವಾಸಿ’ಗಳ ಮಾನ್ಯತೆ ನೀಡುವಂಥ ನೀತಿ ಆದಾಗಿತ್ತು. ಜನಾಕ್ರೋಶ ಹೆಚ್ಚಾಗುತ್ತಿದ್ದಂತೆಯೇ, ಬುಡಕಟ್ಟು ಸಮುದಾಯದ ತಲಾ ಮರಂಡಿ ಎನ್ನುವವರನ್ನು ರಾಜ್ಯಾಧ್ಯಕ್ಷರನ್ನಾಗಿ ನೇಮಿಸಿ, ಜನರನ್ನು ಓಲೈಸಲು ಪ್ರಯತ್ನಿಸಿತ್ತು. ಆದರೆ ಮುಂದೆ, ಇದೇ ತಲಾ ಮರಂಡಿ, ತಮ್ಮ ಸರ್ಕಾರ ಪ್ರಯತ್ನಿಸಿದ ಕಾಯ್ದೆಯ ತಿದ್ದುಪಡಿಗಳನ್ನು ವಿರೋಧಿಸಲಾರಂಭಿಸಿದರು.

ಕೋಪಗೊಂಡ ರಘುಬರ್‌ ತಲಾ ಮರಂಡಿಯನ್ನು ಕೆಳಕ್ಕಿಳಿಸಿಬಿಟ್ಟರು! ಇದು ಮೂಲನಿವಾಸಿಗಳ ಆಕ್ರೋಶವನ್ನು ದುಪ್ಪಟ್ಟು ಮಾಡಿತು. ಕೊನೆಗೆ ಈ ತಿದ್ದುಪಡಿ ಮಸೂದೆಯನ್ನು ಸರ್ಕಾರ ಮೂಲೆಗೆ ತಳ್ಳಿತಾದರೂ, ಅಷ್ಟರಲ್ಲೇ ಪಕ್ಷದ ವಿರುದ್ಧ ಋಣಾತ್ಮಕ ಭಾವನೆ ನಿರ್ಮಾಣವಾಗಿತ್ತು. ಬುಡಕಟ್ಟು ಸಮುದಾಯಗಳನ್ನು ಸಮಾಧಾನ ಪಡಿಸುವ ಕೊನೆಯ ಪ್ರಯತ್ನವೆಂಬಂತೆ ಜಾರ್ಖಂಡ್‌ ಬಿಜೆಪಿಯು 2017ರಲ್ಲಿ ಮತಾಂತರ ನಿಷೇಧ ಕಾಯ್ದೆಯನ್ನು ತಂದಿತು. ರಾಜ್ಯದಲ್ಲಿ ಬುಡಕಟ್ಟು ಜನರು, ದಲಿತರನ್ನು ಮತಾಂತರ ಮಾಡಲಾಗುತ್ತಿರುವುದರಿಂದ ಈ ಕಾಯ್ದೆಯನ್ನು ತಂದಿರುವುದಾಗಿ ಹೇಳಿತಾದರೂ, ಇದರಿಂದ ಸ್ಥಳೀಯರ ಅಸಮಾಧಾನವೇನೂ ತಗ್ಗಲಿಲ್ಲ.

ಒಟ್ಟಲ್ಲಿ ಅಂದು ರಘುಬರ್‌ದಾಸ್‌ ಸರ್ಕಾರದ ವಿರುದ್ಧ ನಿರ್ಮಾಣವಾದ ಆಡಳಿತ ವಿರೋಧಿ ಅಲೆ, ಇಂದು ಅವರ ಸರ್ಕಾರವನ್ನು ಆಪೋಶನ ತೆಗೆದುಕೊಂಡಿದೆ.

ಎಚ್ಚೆತ್ತ ಕಾಂಗ್ರೆಸ್‌
ಕಾಂಗ್ರೆಸ್‌ ಪಕ್ಷ ಮಹಾರಾಷ್ಟ್ರ ಮತ್ತು ಹರ್ಯಾಣ ಚುನಾವಣೆಯ ನಂತರ ಕೆಲವು ಪಾಠಗಳನ್ನು ಕಲಿತಿದೆ ಎನ್ನುವುದು ಸ್ಪಷ್ಟ. ಅದು ಜೆಎಮ್‌ಎಮ್‌ ಮತ್ತು ಆರ್‌ಜೆಡಿಯೊಂದಿಗೆ ಚುನಾವಣಾ ಪೂರ್ವ ಮೈತ್ರಿ ಘೋಷಿಸಿದ್ದಷ್ಟೇ ಅಲ್ಲದೆ, ಚುನಾವಣೆಯಲ್ಲಿ ಜೆಎಮ್‌ಎಮ್‌ಗೆà ಹೆಚ್ಚಿನ ಸ್ಥಾನಗಳನ್ನು ಬಿಟ್ಟುಕೊಟ್ಟಿತು.  ಇದರಿಂದಾಗಿ ಜೆಎಮ್‌ಎಮ್‌ 43 ಸ್ಥಾನಗಳಲ್ಲಿ, ಕಾಂಗ್ರೆಸ್‌ 31ರಲ್ಲಿ ಹಾಗೂ ಆರ್‌ಜೆಡಿ 7 ಸ್ಥಾನಗಳಲ್ಲಿ ಸ್ಪರ್ಧಿಸಿದವು. ಅವು ಮುಖ್ಯವಾಗಿ ಪ್ರಾದೇಶಿಕ ಸಮಸ್ಯೆಗಳನ್ನೇ ಮುನ್ನೆಲೆಯಲ್ಲಿಟ್ಟು ಅಖಾಡಕ್ಕಿಳಿದವು. ಈ ಮೈತ್ರಿಕೂಟವನ್ನು ಗೆಲ್ಲಿಸಬೇಕು ಎನ್ನುವುದಕ್ಕಿಂತ ಹೆಚ್ಚಾಗಿ ರಘುಬರ್‌ ಸರ್ಕಾರವನ್ನು ಸೋಲಿಸಬೇಕು ಎಂದು ಮತದಾರ ಗಟ್ಟಿಯಾಗಿ ನಿರ್ಧರಿಸಿಯಾಗಿತ್ತು.

ಛೋಟಾನಾಗ್ಪುರ ಹಿಡುವಳಿ ಕಾಯೆ ಮತ್ತು ಸಂತಾಲ್‌ ಪರಗಣಾಸ್‌ ಕಾಯ್ದೆಯಲ್ಲಿ ಸರಕಾರ ಕೆಲವು ತಿದ್ದುಪಡಿಗಳನ್ನು ತರಲು ನಡೆಸಿದ (ವಿಫ‌ಲ)ಪ್ರಯತ್ನ ಪಕ್ಷಕ್ಕೆ ಮಾರಕವಾಗಿ ಪರಿಣಮಿಸಿದವು.

– ರಾಘವೇಂದ್ರ ಆಚಾರ್ಯ

Advertisement

Udayavani is now on Telegram. Click here to join our channel and stay updated with the latest news.

Next