Advertisement

ಜಾರ್ಖಂಡ್ ಅಖಾಡ; ಈವರೆಗೆ ಯಾವುದೇ ಮುಖ್ಯಮಂತ್ರಿ ಎರಡನೇ ಬಾರಿ ಆಯ್ಕೆಯಾಗಿಲ್ಲ!

09:42 AM Dec 24, 2019 | Nagendra Trasi |

ನವದೆಹಲಿ: ಜಾರ್ಖಂಡ್ ನ 19 ವರ್ಷಗಳ ಚುನಾವಣಾ ಇತಿಹಾಸದಲ್ಲಿ ಈವರೆಗೂ ಯಾವ ಮುಖ್ಯಮಂತ್ರಿಯೂ ಎರಡನೇ ಬಾರಿ ಆಯ್ಕೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ಹಾಲಿ ಮುಖ್ಯಮಂತ್ರಿ ರಘಬರ್ ದಾಸ್ ಮತ್ತೆ ಆಯ್ಕೆಯಾಗುವ ಮೂಲಕ ಸಂಪ್ರದಾಯವನ್ನು ಮುರಿಯಲಿದ್ದಾರೆಯೇ ಎಂಬುದು ಫಲಿತಾಂಶದಿಂದ ಬಹಿರಂಗವಾಗಬೇಕಾಗಿದೆ.

Advertisement

ಜಾರ್ಖಂಡ್ ವಿಧಾನಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿಗೆ ಎರಡನೇ ಬಾರಿ ಗದ್ದುಗೆ ಏರಲು ಮತದಾರ ಅವಕಾಶ ಕೊಟ್ಟಿಲ್ಲ. 2014ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ರಘುಬರ್ ದಾಸ್ ಜೇಮ್ಶೆಡ್ ಪುರ್ ಪೂರ್ವ ವಿಧಾನಸಭಾ ಕ್ಷೇತ್ರದಲ್ಲಿ 70 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.

2000ನೇ ಇಸವಿಯಲ್ಲಿ ಜಾರ್ಖಂಡ್ ಪ್ರತ್ಯೇಕ ರಾಜ್ಯವಾಗಿ ರಚನೆಗೊಂಡ ನಂತರ ಮೂರು ವಿಧಾನಸಭಾ ಚುನಾವಣೆಗಳನ್ನು ಕಂಡಿದೆ. ಜಾರ್ಖಂಡ್ ರಾಜ್ಯ ರಾಜಕಾರಣದಲ್ಲಿ ಈವರೆಗೆ ಆರು ಮಂದಿ ಮುಖ್ಯಮಂತ್ರಿಗಳಾಗಿದ್ದಾರೆ. ಬಾಬುಲಾಲ್ ಮರಾಂಡಿ, ಅರ್ಜುನ್ ಮುಂಡಾ, ಶಿಬು ಸೋರೆನ್, ಮಧು ಕೋಡಾ, ಹೇಮಂತ್ ಸೋರೆನ್ ಹಾಗೂ ರಘಬರ್ ದಾಸ್ ಮುಖ್ಯಮಂತ್ರಿ ಗಾದಿಗೆ ಏರಿದ್ದರು.

2019ರಲ್ಲಿ ಜಾರ್ಖಂಡ್ ರಾಜ್ಯದಲ್ಲಿ 4ನೇ ವಿಧಾನಸಭಾ ಚುನಾವಣೆ ನಡೆಯುತ್ತಿದೆ. 2000ನೇ ಇಸವಿ ನವೆಂಬರ್ 15ರಂದು ಬಿಹಾರ ರಾಜ್ಯದೊಳಗಿದ್ದ ಜಾರ್ಖಂಡ್ ಅನ್ನು ಪ್ರತ್ಯೇಕಿಸಿ ನೂತನ ರಾಜ್ಯವನ್ನಾಗಿ ಮಾಡಲಾಗಿತ್ತು.

2008ರ ಆಗಸ್ಟ್ 27ರಂದು ಮಧು ಕೋಡಾ ಜಾರ್ಖಂಡ್ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ಕೊಟ್ಟಿದ್ದರು. ನಂತರ ಜಾರ್ಖಂಡ್ ಮುಕ್ತಿ ಮೋರ್ಚಾದ ಮುಖ್ಯಸ್ಥ ಶಿಬು ಸೋರೆನ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಸಂವಿಧಾನದ ಪ್ರಕಾರ ಸೋರೆನ್ ಆರು ತಿಂಗಳೊಳಗೆ ಟಾಮರ್ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದರು. ಆದರೆ ಜಾರ್ಖಂಡ್ ಪಾರ್ಟಿಯ ರಾಜಾ ಪೀಟರ್ 8,973 ಮತಗಳ ಅಂತರದಿಂದ ಶಿಬು ಸೋರೆನ್ ಅವರನ್ನು ಸೋಲಿಸಿದ್ದರು. ರಾಜಾ ಪೀಟರ್ 34, 127 ಮತ ಪಡೆದಿದ್ದರೆ, ಸೋರೆನ್ 25,154 ಮತ ಗಳಿಸಿದ್ದರು. ನಂತರ ಶಿಬು ಸೋರೆನ್ ಸಿಎಂ ಹುದ್ದೆಗೆ ರಾಜೀನಾಮೆ ಕೊಟ್ಟಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next