ರಾಂಚಿ: ಈಗ ಝಾರ್ಖಂಡ್ ಸರದಿ. ಲಾಭದಾಯಕ ಹುದ್ದೆ ಆರೋಪದ ಹಿನ್ನೆಲೆ ಯಲ್ಲಿ ಅನರ್ಹತೆಯ ಭೀತಿ ಎದುರಿಸುತ್ತಿರುವ ಝಾರ್ಖಂಡ್ ಸಿಎಂ ಹೇಮಂತ್ ಸೊರೇನ್, ಸರಕಾರದ ಉಳಿವಿಗೆ ಹೊಸ ತಂತ್ರ ರೂಪಿಸಿ ದ್ದಾರೆ.
ರಾಜ್ಯಪಾಲರೇನಾದರೂ ತಮ್ಮ ಶಾಸಕತ್ವ ವನ್ನು ಅನರ್ಹಗೊಳಿಸಿದರೆ, ಸರಕಾರಕ್ಕೆ ಸಮಸ್ಯೆ ಆಗಬಾರದೆಂದು ಎಲ್ಲ ಜೆಎಂಎಂ ಮತ್ತು ಕಾಂಗ್ರೆಸ್ ಶಾಸಕರನ್ನು ರೆಸಾರ್ಟ್‌ಗೆ ಸ್ಥಳಾಂತರಿಸಿದ್ದಾರೆ.
ಹೇಮಂತ್ ಸೊರೇನ್ ಅವರ ಅನರ್ಹತೆ ಪ್ರಕರಣವನ್ನೇ ಮುಂದಿಟ್ಟುಕೊಂಡು ಬಿಜೆಪಿ, ಜೆಎಂಎಂ ಮತ್ತು ಕಾಂಗ್ರೆಸ್ ಶಾಸಕರ ಖರೀದಿಗೆ ಮುಂದಾಗಿದೆ ಎಂದು ಜೆಎಂಎಂ ನಾಯಕರು ಆರೋಪಿಸಿದ್ದಾರೆ. ಹೀಗಾಗಿ ಶನಿವಾರ ಎಲ್ಲ ಶಾಸಕರನ್ನು ಲಗೇಜ್ ಸಹಿತ ರಾಂಚಿಗೆ ಕರೆಸಿ ಕೊಂಡು ಸಭೆ ನಡೆಸಿ, ರಾಂಚಿಯಿಂದ 30 ಕಿ.ಮೀ. ದೂರದ ಖುಂತಿ ಎಂಬಲ್ಲಿಗೆ ಕಳುಹಿಸಿದ್ದಾರೆ.
ಮೂಲಗಳ ಪ್ರಕಾರ 43 ಮಂದಿ ರೆಸಾರ್ಟ್‌ಗೆ ಹೋಗಿದ್ದು, ಕೆಲವರು ಖುಂತಿಯ ಗೆಸ್ಟ್‌ಹೌಸ್ ಬಳಿಯ ಪ್ರವಾಸಿ ತಾಣಗಳಿಗೆ ಭೇಟಿ ನೀಡಿರುವ ಚಿತ್ರಗಳು ಬಿಡುಗಡೆಯಾಗಿವೆ. 81 ಸದಸ್ಯ ಬಲದ ಝಾರ್ಖಂಡ್ ವಿಧಾನಸಭೆಯಲ್ಲಿ ಜೆಎಂಎಂ 30, ಕಾಂಗ್ರೆಸ್ 18 ಶಾಸಕರನ್ನು ಹೊಂದಿದೆ. ಬಿಜೆಪಿ 26 ಶಾಸಕರು ಮತ್ತು ಆರ್‌ಜೆಡಿಯ ಒಬ್ಬರಿದ್ದಾರೆ.
ಜೆಎಂಎಂ ಮತ್ತು ನಮ್ಮ ಶಾಸಕರು ಒಟ್ಟಿಗೇ ಖುಂತಿಗೆ ಬಂದೆವು. ಸ್ಪೀಕರ್ ಸೇರಿದಂತೆ ಒಟ್ಟಾರೆ 50 ಮಂದಿ ಒಟ್ಟಿಗಿದ್ದು, ನಮ್ಮಲ್ಲಿ ಯಾರನ್ನೂ ಸೆಳೆಯಲಾಗದು ಎಂದಿದ್ದಾರೆ ಕಾಂಗ್ರೆಸ್ ನಾಯಕ ಮತ್ತು ಸಚಿವ ಆಲಂಗಿರ್ ಅಲಾಮ್.ಜೆಎಂಎಂ ಮತ್ತು ಕಾಂಗ್ರೆಸ್ ಶಾಸಕರ ರೆಸಾರ್ಟ್ ಪ್ರವಾಸದ ಬಗ್ಗೆ ಬಿಜೆಪಿ ಟೀಕಿಸಿದೆ.
ಕೆಲವರಿಗೆ ರೆಸಾರ್ಟ್‌ಗೆ ತೆರಳಲು ಇಷ್ಟವಿರದಿದ್ದರೂ ಬಲವಂತವಾಗಿ ಕರೆದೊಯ್ಯಲಾಗಿದೆ ಎಂದು ಬಿಜೆಪಿ ಸಂಸದ ನಿಶಿಕಾಂತ್ ದುಬೆ ಟೀಕಿಸಿದ್ದಾರೆ.
ಹೊರಬೀಳದ ಅನರ್ಹತೆ ಆದೇಶ
ಶನಿವಾರ ಸಂಜೆಯೊಳಗೆ ಸೊರೇನ್ ಅವರ ಅನರ್ಹತೆ ಆದೇಶವನ್ನು ರಾಜ್ಯಪಾಲರು ಪ್ರಕಟಿ ಸುವರು ಎನ್ನಲಾಗಿತ್ತು. ಆದರೆ ರಾತ್ರಿಯಾದರೂ ಆದೇಶ ಹೊರಬಿದ್ದಿಲ್ಲ. ಒಂದು ವೇಳೆ ಸೊರೇನ್ ಅನರ್ಹರಾದರೂ ಚುನಾವಣೆಗೆ ನಿಲ್ಲಲು ಯಾವುದೇ ಅಡ್ಡಿಗಳಿಲ್ಲ. ಹೀಗಾಗಿ ಸೊರೇನ್ ಬೆಂಬಲಕ್ಕೆ ನಿಲ್ಲುತ್ತೇವೆ ಎಂದು ಕಾಂಗ್ರೆಸ್ ಹೇಳಿದೆ.