Advertisement
ಬಹುತೇಕರಿಗೆ ಇದು ನಂಬಲು ಸಾಧ್ಯವಾಗದ ವಿಷಯ. ಜಾರ್ಖಂಡ್ ರಣಜಿ ಆಟಗಾರ ಕನ್ನಡಿಗನಾಗುವುದು ಹೇಗೆ? ಎನ್ನುವ ಅನುಮಾನ ಮೂಡುವುದು ಸಹಜ. ಆದರೆ 25 ವರ್ಷದ ಹಿಂದೆ ಕರ್ನಾಟಕದ ಚಿಕ್ಕಮಗಳೂರಿನಲ್ಲಿ ತಮ್ಮ ಕುಟುಂಬ ನೆಲೆಸಿತ್ತು. ತಂದೆಯ ಉದ್ಯೋಗ ನಿಮಿತ್ತ ಕುಟುಂಬ ಸಮೇತರಾಗಿ ಅನಿವಾರ್ಯವಾಗಿ ಜಾರ್ಖಂಡ್‌ಗೆ ತೆರಳಬೇಕಾಯಿತು ಎನ್ನುವುದನ್ನು ಸ್ವತಃ “ಉದಯವಾಣಿ’ಗೆ ವರುಣ್ ಏರಾನ್ ತಿಳಿಸಿದ್ದಾರೆ. ಈ ಮೂಲಕ ತಾನು ಕನ್ನಡಿಗ ಎನ್ನುವುದನ್ನು ಅವರು ವರುಣ್ ಸಾರಿದ್ದಾರೆ.
ವರುಣ್ ಆತ್ಮವಿಶ್ವಾಸ ಹೆಚ್ಚಿದೆ. ಇದಕ್ಕೆ ಕಾರಣ ಇಂಗ್ಲಿಷ್ ಕೌಂಟಿ ಕ್ರಿಕೆಟ್‌ನಲ್ಲಿ ಒಟ್ಟಾರೆ 11 ವಿಕೆಟ್ ಕಿತ್ತಿರುವುದು. ಹೌದು, ವರುಣ್ ಫಾರ್ಮ್ನಲ್ಲಿರಲಿಲ್ಲ. ಹೀಗಾಗಿ ರಾಷ್ಟ್ರೀಯ ತಂಡದಲ್ಲಿ ಅವರಿಗೆ ಸ್ಥಾನ ಸಿಗಲಿಲ್ಲ. ಜತೆಗೆ 11ನೇ ಆವೃತ್ತಿ ಐಪಿಎಲ್‌ನಲ್ಲೂ ಇವರನ್ನು ಖರೀದಿಸಲು ಯಾವುದೇ ಫ್ರಾಂಚೈಸಿ ಮುಂದೆ ಬರಲಿಲ್ಲ. ಇದರಿಂದ ಅವರು ತೀವ್ರ ಬೇಸರಕ್ಕೂ ಒಳಗಾಗಿದ್ದರು. ತನ್ನ ಸಾಮರ್ಥ್ಯ ಪ್ರದರ್ಶಿಸಲು ಉತ್ತಮ ವೇದಿಕೆ ಬೇಕೆಂದು ಕೊಂಡವರೇ ಕೌಂಟಿ ಆಡಲು ನಿರ್ಧರಿಸಿದರು. ಇಂಗ್ಲೆಂಡ್‌ನ ಖ್ಯಾತ ಕೌಂಟಿ ಕ್ರಿಕೆಟ್ ತಂಡ ಲೀಸೆಸ್ಟರ್‌ಶೈರ್ ಇವರಿಗೆ ಆಹ್ವಾನವನ್ನೂ ನೀಡಿ ಸ್ವಾಗತಿಸಿತು. ನಾಲ್ಕು ಪಂದ್ಯ, 11 ವಿಕೆಟ್
ಸದ್ಯ 4 ಪಂದ್ಯ ಆಡಿರುವ ವರುಣ್ ಗಮನಾರ್ಹ ಪ್ರದರ್ಶನ ನೀಡಿದ್ದಾರೆ. ರಾಯಲ್ ಲಂಡನ್ ಏಕದಿನ ಟ್ರೋಫಿ ಪಂದ್ಯದಲ್ಲಿ ಆಡಿದ ವರುಣ್ ಡರ್ಹಮ್ ವಿರುದ್ಧ 86ಕ್ಕೆ 2, ಲೈಸೆಸ್ಟರ್‌ನಲ್ಲಿ ನಡೆದ ಕೌಂಟಿ ಚಾಂಪಿಯನ್‌ಶಿಪ್‌ನಲ್ಲಿ ಗ್ಲಾಮರ್ಗನ್ ತಂಡದ ವಿರುದ್ಧ ಮೊದಲ ಇನಿಂಗ್ಸ್‌ನಲ್ಲಿ 65ಕ್ಕೆ 4, 2ನೇ ಇನಿಂಗ್ಸ್‌ನಲ್ಲಿ 66ಕ್ಕೆ 2 ವಿಕೆಟ್ ಹಾರಿಸಿದ್ದಾರೆ. ಡರ್ಹಾಮ್ ವಿರುದ್ಧ ನಡೆದ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ 72ಕ್ಕೆ 2, ಎರಡನೇ ಇನಿಂಗ್ಸ್‌ನಲ್ಲಿ 22 ಓವರ್ ಎಸೆದು 102 ರನ್ ಬಿಟ್ಟುಕೊಟ್ಟು ನಿಯಂತ್ರಿತ ಬೌಲಿಂಗ್ ಪ್ರದರ್ಶಿಸಿದ್ದಾರೆ. ಡರ್ಬಿಶೈರ್ ವಿರುದ್ಧ ಪಂದ್ಯದಲ್ಲಿ 54ಕ್ಕೆ1 ವಿಕೆಟ್ ಪಡೆದಿದ್ದಾರೆ.
Related Articles
ಭಾರತ ಪರ 9 ಟೆಸ್ಟ್ ಮತ್ತು 9 ಏಕದಿನ ಪಂದ್ಯ ಸೇರಿದಂತೆ ಒಟ್ಟಾರೆ 18 ಪಂದ್ಯವನ್ನು ವರುಣ್ ಆಡಿದ್ದಾರೆ. ಇವರಿಗೆ ಕಳಪೆ ಫಾರ್ಮ್ನಿಂದಾಗಿ ಭಾರತ ತಂಡದಲ್ಲಿ ಸ್ಥಾನ ಸಿಗಲಿಲ್ಲ. 2011ರಲ್ಲಿ ಮುಂಬಯಿಯಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಆಡುವ ಮೂಲಕ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. 9 ಟೆಸ್ಟ್‌ನಿಂದ 53.61 ಸರಾಸರಿಯಲ್ಲಿ 18 ವಿಕೆಟ್ ಪಡೆದಿದ್ದಾರೆ. ಇನ್ನು 2011ರಲ್ಲಿ ಇಂಗ್ಲೆಂಡ್ ವಿರುದ್ಧ ಆಡುವ ಮೂಲಕ ಏಕದಿನ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. 9 ಪಂದ್ಯದಿಂದ 11 ವಿಕೆಟ್ ಪಡೆದಿದ್ದಾರೆ.
Advertisement
ಪ್ರತಿನಿಧಿಸಿರುವ ಪ್ರಮುಖ ತಂಡಗಳು: ಭಾರತ, ಆಸ್ಟ್ರೇಲಿಯ ಸೆಂಟರ್ ಎಕ್ಸೆಲೆನ್ಸ್, ಡೆಲ್ಲಿ, ಡೆಲ್ಲಿ ಡೇರ್‌ಡೆವಿಲ್ಸ್, ಇಂಡಿಯಾ ಎಮರ್ಜಿಂಗ್ ಪ್ಲೇಯರ್, ಜಾರ್ಖಂಡ್, ಅಂಡರ್-19 ಜಾರ್ಖಂಡ್, ಕಿಂಗ್ಸ್ ಇಲೆವೆನ್ ಪಂಜಾಬ್, ಕೋಲ್ಕತಾ ನೈಟ್‌ರೈಡರ್, ರಾಯಲ್ ಚಾಲೆಂಜರ್ ಬೆಂಗಳೂರು ಹಾಗೂ ಲೀಸೆಸ್ಟರ್‌ಶೈರ್ ಪರ ವರುಣ್ ಆಡಿದ್ದಾರೆ.
“ಕನ್ನಡ ಕನ್ನಡಿಗರು ನನಗಿಷ್ಟ’ತಂದೆ ಉದ್ಯೋಗ ನಿಮಿತ್ತ ಚಿಕ್ಕಮಗಳೂರಿನಿಂದ ಜಾರ್ಖಂಡ್‌ಗೆ ಬರಬೇಕಾಯಿತು. ಹೀಗಾಗಿ ಅನಿವಾರ್ಯವಾಗಿ ಕರ್ನಾಟಕದಿಂದ ದೂರವಾದೆ. ಜಾರ್ಖಂಡ್ ತಂಡವನ್ನು ರಣಜಿಯಲ್ಲಿ ಪ್ರತಿನಿಧಿಸಿದೆ. ಮುಂದೆ ಭಾರತ ತಂಡವನ್ನೂ ಪ್ರತಿನಿಧಿಸುವ ಭಾಗ್ಯ ನನದಾಯಿತು. ಹಾಗಂತ ಕನ್ನಡವನ್ನು ಮರೆತಿಲ್ಲ. ಮನೆಯಲ್ಲಿ, ಸ್ನೇಹಿತರ ಜತೆ ಕನ್ನಡ ಮಾತನಾಡುವೆ. ಕನ್ನಡ ಕನ್ನಡಿಗರು ನನಗಿಷ್ಟ. ಹೀಗಾಗಿಯೇ ಬೆಂಗಳೂರಿನಲ್ಲಿ ವಾಸಕ್ಕೆ ಮನೆಯನ್ನೂ ಖರೀದಿಸಿದ್ದೇನೆ.
– ವರುಣ್ ಏರಾನ್, ವೇಗದ ಬೌಲರ್ – ಹೇಮಂತ್ ಸಂಪಾಜೆ