ರಾಂಚಿ: ಜಾರ್ಖಂಡ್‌ನಲ್ಲಿ ನಾಲ್ಕನೇ ಹಂತದ ವಿಧಾನಸಭಾ ಚುನಾವಣೆಯು ಡಿಸೆಂಬರ್ 16 ರಂದು ನಡೆಯಲಿದ್ದು, ನಾಲ್ಕು ಜಿಲ್ಲೆಗಳ 15 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಒಟ್ಟಾರೆ ಐದು ಹಂತಗಳಲ್ಲಿ ಜಾರ್ಖಂಡ್ ನಲ್ಲಿ ಚುನವಾಣೆ ನಡೆಯುತ್ತಿದ್ದು ಡಿಸೆಂಬರ್ 23 ರಂದು ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ.
ಗಮನಿಸಬೇಕಾದ ಸಂಗತಿಯೆಂದರೇ ನಾಲ್ಕನೇ ಹಂತದಲ್ಲಿ ಸ್ಪರ್ಧಿಸುತ್ತಿರುವ ಎಲ್ಲಾ ಅಭ್ಯರ್ಥಿಗಳ ಅಫಿಡೆವಿಟ್ಸ್ ಗಳನ್ನು ಚುನಾವಣಾ ಆಯೋಗ ಪರಿಶೀಲಿಸಿದ್ದು ಬೆಚ್ಚಿ ಬೀಳಿಸುವ ವರದಿಯನ್ನು ನೀಡಿದೆ. 4ನೇ ಹಂತದಲ್ಲಿರುವ 221 ಅಭ್ಯರ್ಥಿಗಳ ಪೈಕಿ 75 ಸ್ಪರ್ಧಿಗಳ (34%) ವಿರುದ್ಧ ಕ್ರಿಮಿನಲ್ ಮೊಕ್ಕದ್ದಮೆಗಳು ದಾಖಲಾಗಿವೆ. ಇದರಲ್ಲಿ : 48 (22%) ಅಭ್ಯರ್ಥಿಗಳು ತಮ್ಮ ವಿರುದ್ಧ ಗಂಭೀರ ಕ್ರಿಮಿನಲ್ ಪ್ರಕರಣಗಳಿವೆ ಎಂದು ಘೋಷಿಸಿಕೊಂಡಿದ್ದಾರೆ.
ರಾಷ್ಟ್ರೀಯ ಪಕ್ಷ ಬಿಜೆಪಿಯಲ್ಲಿ ಸ್ಪರ್ಧಿಸುತ್ತಿರುವ 8 ಮಂದಿ ವಿರುದ್ದ ಕ್ರಿಮಿನಲ್ ಪ್ರಕರಣ ದಾಖಲಾಗಿದ್ದರೆ, ಜೆವಿಎಂ(ಪಿ)ಯಲ್ಲಿ 7, ಬಿಎಸ್ ಪಿ ಯಲ್ಲಿ 4, ಎಜೆಎಸ್ ಯು ನಲ್ಲಿ 6 ಅಭ್ಯರ್ಥಿಗಳ ವಿರುದ್ಧ ಮೊಕ್ಕದ್ದಮೆ ದಾಖಲಾಗಿದೆ. ಮಾತ್ರವಲ್ಲದೆ ಬಿಜೆಪಿಯಲ್ಲಿ 5, ಜೆವಿಎಂ(ಪಿ) ಯಲ್ಲಿ 4, ಬಿಎಸ್ ಪಿ ಯಲ್ಲಿ 1, ಎಜೆಎಸ್ ಯು ನಲ್ಲಿ 5 ಮಂದಿ ವಿರುದ್ಧ ಗಂಭೀರ ಕ್ರಿಮಿನಲ್ ಪ್ರಕರಣಗಳಿವೆ.
ಇದರಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ಎಸಗಿದ ಆರೋಪದಡಿಯಲ್ಲಿ ನಾಲ್ಕು ಅಭ್ಯರ್ಥಿಗಳಿದ್ದರೆ, ಇಬ್ಬರು ತಮ್ಮ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ ಎಂದಿದ್ದಾರೆ. 16 ಅಭ್ಯರ್ಥಿಗಳ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಾಗಿದೆ.
ಕೋಟ್ಯಾಧೀಪತಿ ಅಭ್ಯರ್ಥಿಗಳು
4 ನೇ ಹಂತದಲ್ಲಿರುವ 221 ಅಭ್ಯರ್ಥಿಗಳ ಪೈಕಿ 60 ಜನರು ಕರೋಡ್ ಪತಿಗಳು. ಪ್ರಮುಖವಾಗಿ ಬಿಜೆಪಿಯ 12 ಮಂದಿ, ಜೆವಿಎಂ(ಪಿ)ಯ 9, ಜೆಎಂಎಂ ನ 6, ಎಜೆಎಸ್ ಯು ನ 5 ,ಐಎನ್ ಸಿಯ 3 ಮಂದಿ , 1 ಕೋಟಿಗಿಂತಲೂ ಹೆಚ್ಚಿನ ಆಸ್ತಿಯನ್ನು ಘೋಷಿಸಿಕೊಂಡಿದ್ದಾರೆ.