ರಾಂಚಿ: ಜಾರ್ಖಂಡ್ ವಿಧಾನಸಭೆ ಚುನಾವಣೆ ಶುಕ್ರವಾರ ಮುಕ್ತಾಯವಾಗಿದ್ದು, ಮತಗಟ್ಟೆ ಸಮೀಕ್ಷೆಯಲ್ಲಿ ಬಿಜೆಪಿಗೆ ಹಿನ್ನಡೆಯಾಗಿದೆ.
ಇಂಡಿಯಾ ಟುಡೆ-ಆಕ್ಸಿಸ್ ಮೈ ಇಂಡಿಯಾ ಸಮೀಕ್ಷೆಯಲ್ಲಿ ಜೆಎಂಎಂ, ಕಾಂಗ್ರೆಸ್ ಮೈತ್ರಿಕೂಟಕ್ಕೆ 38-50, ಬಿಜೆಪಿ 22-32 ಸ್ಥಾನ ಪಡೆಯಲಿದೆ ಎಂದು ಹೇಳಲಾಗಿದೆ.
ಸಿ-ವೋಟರ್ ಸಮೀಕ್ಷೆಯಲ್ಲಿ ಮೈತ್ರಿಕೂಟ-35, ಬಿಜೆಪಿ-32 ಸ್ಥಾನ ಪಡೆಯುವ ಮೂಲಕ ಅತಂತ್ರ ಫಲಿತಾಂಶ ಬರಲಿದೆ ಎಂದು ತಿಳಿದು ಬಂದಿದೆ.
ಕಾಶಿಶ್ ನ್ಯೂಸ್ ಸಮೀಕ್ಷೆಯಲ್ಲಿ ಬಿಜೆಪಿ-25-30, ಮೈತ್ರಿಕೂಟ-37-49 ಸ್ಥಾನ ಗಳಿಲಿದೆ ಎಂದು ಪ್ರಕಟಿಸಿದೆ. 81 ಸದಸ್ಯ ಬಲದ ಈ ರಾಜ್ಯದಲ್ಲಿ ಸರಳ ಬಹುಮತಕ್ಕೆ 41 ಸ್ಥಾನ ಪಡೆಯಬೇಕಿದೆ.
2019ರ ಲೋಕಸಭೆ ಚುನಾವಣೆ ಬಳಿಕ ರಾಜ್ಯಗಳಿಗೆ ನಡೆದ ಚುನಾವಣೆಯಲ್ಲಿ ಜಾರ್ಖಂಡ್ 3ನೇ ರಾಜ್ಯವಾಗಿದ್ದು, ಪ್ರಸ್ತುತ ಅಧಿಕಾರದಲ್ಲಿರುವ ಬಿಜೆಪಿ ಈ ರಾಜ್ಯವನ್ನು ಕಳೆದುಕೊಳ್ಳುವ ಭೀತಿಯಲ್ಲಿದೆ. ಇದಕ್ಕೂ ಮುನ್ನ ಚುನಾವಣೆ ಎದುರಿಸಿದ ಎರಡು ರಾಜ್ಯಗಳ ಪೈಕಿ ಮಹಾರಾಷ್ಟ್ರದಲ್ಲೂ ಬಿಜೆಪಿ ಅಧಿಕಾರ ಕಳೆದುಕೊಂಡಿದೆ. ಹರ್ಯಾಣದಲ್ಲೂ ಹಿನ್ನಡೆಯಾಗಿದ್ದು, ಮೈತ್ರಿ ಸರ್ಕಾರ ರಚಿಸುವ ಮೂಲಕ ಅಧಿಕಾರ ಉಳಿಸಿಕೊಂಡಿದೆ.
ಶೇ.70.83 ಮತದಾನ:
ಜಾರ್ಖಂಡ್‌ನಲ್ಲಿ ಶುಕ್ರವಾರ 5ನೇ ಹಾಗೂ ಕೊನೇ ಹಂತದ ಮತದಾನ ಶಾಂತಿಯುತವಾಗಿ ನಡೆದಿದ್ದು, ಒಟ್ಟಾರೆ ಶೇ.70.83ರಷ್ಟು ಮತ ಚಲಾವಣೆಯಾಗಿವೆ. ಡಿ.23ರಂದು ಫಲಿತಾಂಶ ಪ್ರಕಟವಾಗಲಿದೆ.