ಜಾರ್ಖಂಡ್ : ಎಲ್ಲೆಡೆ ದೀಪಗಳನ್ನು ಹಚ್ಚಿ ದೀಪಾವಳಿ ಸಂಭ್ರಮಿಸುತ್ತಿದ್ದರೆ ರಾಂಚಿಯಲ್ಲಿ ಬಸ್ ಚಾಲಕ ಮತ್ತು ನಿರ್ವಾಹಕ ಹಬ್ಬದ ಖುಷಿಯಲ್ಲಿ ಹಚ್ಚಿದ ದೀಪ ಇಬ್ಬರ ಜೀವವನ್ನೇ ಬಲಿಪಡೆದುಕೊಂಡಿದೆ.
ಹೌದು ರಾಂಚಿಯ ಲೋವರ್ ಬಜಾರ್ ಪೊಲೀಸ್ ಠಾಣಾ ವ್ಯಾಪ್ತಿಯ ಖಡ್ಗರಹಾದಲ್ಲಿ ಮಧ್ಯರಾತ್ರಿ ಬಸ್ ಚಾಲಕ ಹಾಗೂ ನಿರ್ವಾಹಕ ದೀಪಾವಳಿ ಹಬ್ಬದ ಸಲುವಾಗಿ ದೇವರಿಗೆ ಪೂಜೆ ಮಾಡಿದ್ದಾರೆ ಈ ವೇಳೆ ದೇವರಿಗೆ ಇಟ್ಟ ದೀಪ ಬಸ್ಸಿಗೆ ತಗುಲಿ ಇಡೀ ಬಸ್ಸು ಬೆಂಕಿಗಾಹುತಿಯಾಗಿದೆ.
ದುರಾದೃಷ್ಟವಶಾತ್ ಬಸ್ಸಿನ ಚಾಲಕ ನಿರ್ವಾಹಕ ಮನೆಗೆ ತೆರಳಲು ತಡವಾದ ಕಾರಣ ಬಸ್ಸಿನಲ್ಲೇ ನಿದ್ರೆಗೆ ಜಾರಿದ್ದಾರೆ. ದೀಪದ ಕಿಡಿ ಬಸ್ಸಿಗೆ ತಗುಲಿ ಬಸ್ಸು ಹೊತ್ತಿ ಉರಿದಿದೆ, ಈ ವೇಳೆ ಗಾಢ ನಿದ್ರೆಯಲ್ಲಿದ್ದ ಚಾಲಕ ನಿರ್ವಾಹಕ ಸಜೀವ ದಹನಗೊಂಡಿದ್ದಾರೆ, ವಿಚಾರ ತಿಳಿದು ಘಟನಾ ಸ್ಥಳಕ್ಕೆ ಬಂದ ಸ್ಥಳೀಯರು ಬೆಂಕಿ ನಂದಿಸಲು ಹರಸಾಹಸಪಟ್ಟರೂ ಯಾವುದೇ ಪ್ರಯೋಜನವಾಗಲಿಲ್ಲ, ಬಳಿಕ ಅಗ್ನಿಶಾಮಕ ಸಿಬ್ಬಂದಿಗಳು ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರೂ ಬಸ್ಸಿನೊಳಗಿದ್ದ ಚಾಲಕ, ನಿರ್ವಾಹಕ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಸಾವನ್ನಪ್ಪಿದ್ದರು.
ಮೃತರನ್ನು ಮದನ್ ಮತ್ತು ಖಲಾಸಿ ಇಬ್ರಾಹಿಂ ಎಂದು ಗುರುತಿಸಲಾಗಿದೆ.
ರಾತ್ರಿ ಹಬ್ಬದ ಖುಷಿಯಲ್ಲಿದ್ದ ಚಾಲಕ ನಿರ್ವಾಹಕ ಬೆಳಗಾಗುವುದರೊಳಗೆ ದಹನಗೊಂಡಿರುವುದು ವಿಪರ್ಯಾಸವೇ ಸರಿ.
ಎಚ್ಚರವಿರಲಿ : ಹಬ್ಬದ ಸಂಭ್ರಮದಲ್ಲಿ ದೀಪ ಹಚ್ಚುವಾಗ ಅಕ್ಕಪಕ್ಕದಲ್ಲಿ ಇರುವ ವಸ್ತುಗಳ ಬಗ್ಗೆ ಎಚ್ಚರವಿರಲಿ, ಸಂಭ್ರಮದ ಜೊತೆ ಎಚ್ಚರಿಕೆಯೂ ಅತೀ ಅಗತ್ಯ.
ಇದನ್ನೂ ಓದಿ : ಬೆಣ್ಣೆಹಳ್ಳ ಹಾವಳಿ ತಡೆಗೆ ಮೇಷ್ಟ್ರ ಪ್ಲ್ಯಾನ್; ಪ್ರಧಾನಿ ಕಚೇರಿಯಿಂದಲೂ ಜಾರಿ ಭರವಸೆ