Advertisement

ಅಂತಾರಾಜ್ಯ ಕಳ್ಳರಿಂದ ಚಿನ್ನಾಭರಣ ವಶ

12:08 PM Aug 22, 2017 | |

ಬೆಂಗಳೂರು: ನಾಲ್ವರು ಅಂತಾರಾಜ್ಯ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುವ ಆಗ್ನೇಯ ವಿಭಾಗದ ಪೊಲೀಸರು, ಆರೋಪಿಗಳಿಂದ ಬರೋಬ್ಬರಿ 20ಲಕ್ಷ ರೂ. ಮೌಲ್ಯದ 620 ಗ್ರಾಂ ಚಿನ್ನಾಭರಣ ಹಾಗೂ 4 ಕೆ.ಜಿ ಬೆಳ್ಳಿಯ ವಸ್ತುಗಳನ್ನು  ವಶಪಡಿಸಿಕೊಂಡಿದ್ದಾರೆ.

Advertisement

ತಮಿಳುನಾಡು ಮೂಲದ ಶಂಕರ್‌ರಾಮ್‌(21), ಸುಹೇಲ್‌(22) , ಅಸYರ್‌(21), ಆಂಧ್ರಪ್ರದೇಶ ಮದನಪಲ್ಲಿ ಮೂಲದ ಹರೀಶ(32)ಬಂಧಿತರು. ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ಜೈಲು ಸೇರಿದ್ದ ಆರೋಪಿಗಳು, ಅಲ್ಲಿಯೇ ಪರಸ್ಪರ ಪರಿಚತರಾಗಿದ್ದು ಜಾಮೀನಿನ ಮೇಲೆ ಹೊರಗಡೆ ಬಂದು ಮನೆ ದರೋಡೆ, ರಾತ್ರಿ ವೇಳೆ ಕ್ಯಾಬ್‌ ಚಾಲಕರ ದರೋಡೆ  ಸೇರಿದಂತೆ ಇನ್ನಿತರೆ ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದರು ಎಂದು ಪೊಲೀಸರು ತಿಳಿಸಿದರು.

ಪ್ರಕರಣದ ಪ್ರಮುಖ ಆರೋಪಿ  ಹರೀಶ್‌, ಕಳೆದ  20 ವರ್ಷಗಳಿಂದ ಬೆಂಗಳೂರು ನಗರದ ವಿವಿಧ ಕಡೆಗಳಲ್ಲಿ ಮನೆಗಳವು ಮಾಡಿದ್ದಾನೆ. ಕುಖ್ಯಾತ ಕಳ್ಳನಾದ ಕೊಮ್ಮಘಟ್ಟ ಮಂಜನೊಂದಿಗೆ ಜೊತೆಗೂಡಿ ನಗರದ ವಿವಿಧ ಠಾಣಾ ವ್ಯಾಪ್ತಿಯಲ್ಲಿ ನಡೆದ 10ಕ್ಕೂ ಅಪರಾಧಕೃತ್ಯಗಳಲ್ಲಿ ಭಾಗಿಯಾಗಿದ್ದಾನೆ. 2016ರಲ್ಲಿ ಕಾಡುಗೋಡಿ ಪೊಲೀಸ್‌ ಠಾಣೆಯಲ್ಲಿ ನಡೆದಿದ್ದ ಅಪ್ಪಿ ಎಂಬಾತನ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದು, ಈ ಕೃತ್ಯಕ್ಕೆ ಮಹಿಳೆಯೊಬ್ಬರಿಂದ 50 ಲಕ್ಷ ರೂ. ಸುಫಾರಿ ಪಡೆದುಕೊಂಡಿದ್ದ.

ಈತನ ತಂಡದಲ್ಲಿದ್ದ  ಇನ್ನೂ ಮೂರ್‍ನಾಲ್ಕು ಮಂದಿ  ತಲೆ ಮರೆಸಿಕೊಂಡಿದ್ದು ಅವರ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಆಗ್ನೇಯ ವಿಭಾಗದ ಡಿಸಿಪಿ ಡಾ. ಬೋರಲಿಂಗಯ್ಯ ತಿಳಿಸಿದರು. ಪ್ರಕರಣದ ಮತ್ತೋರ್ವ ಆರೋಪಿ ಶಂಕರ್‌ರಾಮ್‌, ಕೆಲ ತಿಂಗಳುಗಳ ಹಿಂದೆ ತಮಿಳುನಾಡಿನ ರಾಜಾಲಿ ಇಂಡಿಯನ್‌ ನೇವಿ ಕಾಂಪೌಂಡ್‌ ಕ್ಯಾಂಪಸ್‌(ಐಎನ್‌ಎಸ್‌) ಒಳನುಗ್ಗಿದ್ದ  ಕಾವಲು ಕಾಯುತ್ತಿದ್ದ  ನೌಕಾದಳ ಸಿಬ್ಬಂದಿಯ  ಪಿಸ್ತೂಲ್‌ ಕಿತ್ತುಕೊಂಡು ಸಿಬ್ಬಂದಿಯ ಮೇಲೆ ಗುಂಡುಹಾರಿಸಿ ಪರಾರಿಯಾಗಿದ್ದ.

ಈ ಸಂಬಂಧ  ಅಲ್ಲಿನ ಅರಕೋಣಂ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅದೇ ಠಾಣಾ ವ್ಯಾಪ್ತಿಯಲ್ಲಿ 2016ರಲ್ಲಿ ವೃದ್ದೆಯನ್ನು ಕೊಲೆಗೈದು ಮನೆ ಕಳ್ಳತನ ಮಾಡಿದ್ದಾನೆ. ಆರೋಪಿ ವಿರುದ್ದ ಮಡಿವಾಳ ಹಾಗೂ ಎಚ್‌ಎಸ್‌ಆರ್‌ ಲೇಔಟ್‌ ಠಾಣಾ ವ್ಯಾಪ್ತಿ ಸೇರಿ ಒಟ್ಟು ನಾಲ್ಕು ಮನೆಕಳವು ಪ್ರಕರಣಗಳು ದಾಖಲಾಗಿವೆ.

Advertisement

ಬೀಗ ಹಾಕಿದ ಮನೆಗಳೇ ಟಾರ್ಗೆಟ್‌!
ಹಲವು ವರ್ಷಗಳಿಂದ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿರುವ ಆರೋಪಿಗಳು  ದುಶ್ಚಟಗಳ ದಾಸರಾಗಿದ್ದಾರೆ. ಹಗಲು  ವೇಳೆ ನಗರದ ವಿವಿಧ ಭಾಗಗಳಲ್ಲಿ ಬೀಗ ಹಾಕಿದ ಮನೆಗಳನ್ನು ಗುರುತು ಹಾಕಿಕೊಳ್ಳುತ್ತಿದ್ದ ಆರೋಪಿಗಳು ಬಳಿಕ, ಬೀಗ ಒಡೆದು ಮನೆಗೆ ನುಗ್ಗಿ ಚಿನ್ನಾಭರಣ ದೋಚುತ್ತಿದ್ದರು. ರಾತ್ರಿ ವೇಳೆ ಕ್ಯಾಬ್‌ಗಳನ್ನು ಬುಕ್‌ ಮಾಡಿಕೊಂಡು,ಕೆಲ ದೂರ ಪ್ರಯಾಣಿಸಿದ ನಂತರ ಕ್ಯಾಬ್‌ ಚಾಲಕರಿಗೆ, ಮಾರಕಾಸ್ತ್ರಗಳನ್ನು ತೀರಿಸಿ ಮೊಬೈಲ್‌, ಹಣ, ಇನ್ನಿತರೆ ವಸ್ತುಗಳನ್ನು ಕಿತ್ತುಕೊಂಡು ಪರಾರಿಯಾಗುತ್ತಿದ್ದರು ಎಂದು ಪೊಲೀಸರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next