Advertisement

Jewelery theft: ಚಿನ್ನಾಭರಣ ಕದ್ದು ಕ್ಯಾಸಿನೋದಲ್ಲಿ ಜೂಜಾಟ

10:00 AM Nov 08, 2023 | Team Udayavani |

ಬೆಂಗಳೂರು: ಪರಿಚಯಸ್ಥರ ಮನೆಯಲ್ಲಿ ಚಿನ್ನಾಭರಣ ದೋಚಿದ್ದ ಆರೋಪಿಯನ್ನು ಸಂಪಂಗಿರಾಮನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

Advertisement

ನಗರ್ತ್‌ಪೇಟೆ ನಿವಾಸಿ ಮೋಹನ್‌ ಲಾಲ್‌(32) ಬಂಧಿತ. ಆರೋಪಿಯಿಂದ 84 ಲಕ್ಷ ರೂ. ಮೌಲ್ಯದ 1 ಕೆ.ಜಿ. 399 ಗ್ರಾಂ ಚಿನ್ನಾಭರಣ ಮತ್ತು ಒಂದು ಚಿನ್ನದ ಗಟ್ಟಿ ವಶಕ್ಕೆ ಪಡೆಯಲಾಗಿದೆ.

ಆರೋಪಿ ವಿಚಾರಣೆಯಲ್ಲಿ ಕಳವು ಚಿನ್ನಾಭರಣದ ಪೈಕಿ ಒಂದಷ್ಟು ಗ್ರಾಂ ಅನ್ನು ಮಾರಾಟ ಮಾಡಿ ಕ್ಯಾಸಿನೋ ಜೂಜಾಟದಲ್ಲಿ ಹೂಡಿಕೆ ಮಾಡಿ ಕಳೆದುಕೊಂಡಿರುವುದು ಗೊತ್ತಾಗಿದೆ ಎಂದು ಪೊಲೀಸರು ಹೇಳಿದರು. ರಾಜಸ್ಥಾನ ಮೂಲದ ಮೋಹನ್‌ಲಾಲ್‌ ಮತ್ತು ರಾಮ್‌ಲಾಲ್‌ ನಗರದಲ್ಲಿ ಹಲವು ವರ್ಷಗಳಿಂದ ಚಿನ್ನಾಭರಣ ವ್ಯಾಪಾರ ಮಾಡಿಕೊಂಡಿದ್ದರು. ಸಗಟು ವ್ಯಾಪಾರಿಯಾಗಿರುವ ರಾಮ್‌ಲಾಲ್‌ ಬಳಿ ಆರೋಪಿ ಮೋಹನ್‌ ಲಾಲ್‌ ಚಿನ್ನಾಭರಣ ಖರೀದಿಸಿ ಮಾರಾಟ ಮಾಡುತ್ತಿದ್ದ.

ಕಳೆದ ವರ್ಷ ರಾಮ್‌ ಲಾಲ್‌ ಬಳಿ 2 ಕೆ.ಜಿ. 931 ಗ್ರಾಂ ಚಿನ್ನಾಭರಣ ಪಡೆದುಕೊಂಡಿದ್ದ ಆರೋಪಿ, ಹಲವು ತಿಂಗಳಾದರೂ ಹಣ ಕೊಟ್ಟಿರಲಿಲ್ಲ. ಈ ಬಗ್ಗೆ ಪ್ರಶ್ನಿಸಿದಾಗ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಈ ನಡುವೆ ಅ.25ರಂದು ಆರೋಪಿ ಚಿನ್ನಾಭರಣ ವ್ಯವಹಾರದ ಬಗ್ಗೆ ಮಾತನಾಡಲು ರಾಮ್‌ಲಾಲ್‌ ಮನೆಗೆ ಬಂದಿದ್ದು, ಶೌಚಾಲಯಕ್ಕೆ ರಾಮ್‌ಲಾಲ್‌ ಹೋಗಿ ಬರುವಷ್ಟರಲ್ಲಿ ದೇವರ ಕಪಾಟಿನಲ್ಲಿದ್ದ 155 ಗ್ರಾಂ ಚಿನ್ನಾಭರಣ ಕದ್ದು ಪರಾರಿಯಾಗಿದ್ದ. ಈ ಸಂಬಂಧ ಸಂಪಂಗಿರಾಮನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ಈ ಹಿನ್ನೆಲೆಯಲ್ಲಿ ಠಾಣಾಧಿಕಾರಿ ಎಂ.ಎ. ಹರೀಶ್‌ಕುಮಾರ್‌ ಮತ್ತು ಪಿಎಸ್‌ಐ ಅರಳನಗೌಡ, ಶಿವಕುಮಾರ್‌ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದೆ.

Advertisement

ಕೃತ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ: ಕೆಲ ಹೊತ್ತಿನ ಬಳಿಕ ರಾಮ್‌ ಲಾಲ್‌ ದೇವರ ಕಪಾಟಿನ ಹಿಂದೆ ಗಮನಿಸಿದಾಗ ಚಿನ್ನಾಭರಣ ಇಲ್ಲದಿರುವುದು ಕಂಡು ಬಂದಿದೆ. ಬಳಿಕ ಸಿಸಿ ಕ್ಯಾಮೆರಾ ದೃಶ್ಯಾವಳಿ ಪರಿಶೀಲಿಸಿದಾಗ ಮೋಹನ್‌ ಲಾಲ್‌ ಮನೆಯಿಂದ ಹೊರಗೆ ಹೋಗುವಾಗ ಕವರ್‌ ವೊಂದನ್ನು ಹಿಡಿದುಕೊಂಡು ಹೋಗುವುದು ಕಂಡು ಬಂದಿದೆ. ಈ ಬಗ್ಗೆ ಅನುಮಾನಗೊಂಡು ಸಂಪಂಗಿರಾಮನಗರ ಠಾಣೆಗೆ ದೂರು ನೀಡಿದ್ದರು. ಈ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದರು.

ಕ್ಯಾಸಿನೋದಲ್ಲಿ ಜೂಜಾಟ: ಆರೇಳು ತಿಂಗಳಿಂದ ಕ್ಯಾಸಿನೋ ಜೂಜಾಟ ಮತ್ತು ಡ್ರೀಮ್‌ 11 ಕ್ರಿಕೆಟ್‌ ಬೆಟ್ಟಿಂಗ್‌ನಲ್ಲಿ ಹೂಡಿಕೆ ಮಾಡುತ್ತಿದ್ದ ಮೋಹನ್‌ಲಾಲ್‌, ರಾಮ್‌ಲಾಲ್‌ ಬಳಿ ಪಡೆದ ಚಿನ್ನಾಭರಣ ಮಾರಾಟ ಮಾಡಿ ಕ್ಯಾಸಿನೋದಲ್ಲಿ ಹೂಡಿಕೆ ಮಾಡಿ ಸೋತಿದ್ದ. ಈ ನಡುವೆ ಆರೋಪಿ ಜೂಜಾಟದಲ್ಲಿ ಎರಡು ಕೋಟಿ ರೂ. ಗೆದ್ದಿದ್ದ. ಮತ್ತಷ್ಟು ಹಣ ಗೆಲ್ಲುವ ದುರಾಸೆಯಿಂದ ಆ ಎರಡೂ ಕೋಟಿ ರೂ. ಜೂಜಾಡಿ ಸೋತ್ತಿದ್ದ. ಈ ನಡುವೆ ರಾಮ್‌ಲಾಲ್‌ ಮನೆಗೆ ಮಾತುಕತೆಗೆ ಹೋಗಿದ್ದಾಗ ಚಿನ್ನಾಭರಣ ಕಳ್ಳತನ ಮಾಡಿದ್ದ ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next