ಜೇವರ್ಗಿ: ತಾಲೂಕಿನ ಕಟ್ಟಿಸಂಗಾವಿ ಹತ್ತಿರ ಭೀಮಾನದಿಯಲ್ಲಿ 13 ಕೋಟಿ ರೂ. ವೆಚ್ಚದ ವೆಂಟೆಡ್ ಡ್ಯಾಂ ನಿರ್ಮಾಣಕ್ಕೆ ಟೆಂಡರ್ ಕರೆಯಲಾಗಿದ್ದು, ಬರುವ ಬೇಸಿಗೆಯೊಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಶಾಸಕ ಡಾ| ಅಜಯಸಿಂಗ್ ತಿಳಿಸಿದರು.
ತಾಪಂ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕೆಡಿಪಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದ ಅವರು, ಈಗಾಗಲೇ ಸಾಕಷ್ಟು ರಸ್ತೆ, ಸೇತುವೆ, ಭವನ ಸೇರಿದಂತೆ ಅನೇಕ ಕಾಮಗಾರಿಗಳು ಆಮೆಗತಿಯಲ್ಲಿ ನಡೆಯುತ್ತಿದ್ದು, ತ್ವರಿತಗತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ತಾಕೀತು ಮಾಡಿದರು.
ಮುಂಬರುವ ದಿನಗಳಲ್ಲಿ 100 ಹಾಸಿಗೆ ಆಸ್ಪತ್ರೆ ನಿರ್ಮಾಣಕ್ಕಾಗಿ ಪಟ್ಟಣದ ಸುತ್ತಮುತ್ತ ಸೂಕ್ತ ಸ್ಥಳ ಗುರುತಿಸಿ ಶೀಘ್ರವೇ ಕಾಮಗಾರಿ ಪ್ರಾರಂಭಿಸಲಾಗುವುದು. ಪಟ್ಟಣದಲ್ಲಿ ನಡೆಯುತ್ತಿರುವ ಅಂಬೇಡ್ಕರ್ ಭವನ ಮೂರು ತಿಂಗಳೊಳಗೆ ಪೂರ್ಣಗೊಳಿಸುವ ಜತೆಗೆ ರಂಗ ಮಂದಿರದ ಕಾಂಪೌಂಡ್ ಹಾಗೂ ಇತರೆ ಕೆಲಸಕ್ಕೆ ಹೆಚ್ಚುವರಿ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.
ಅವರಾದ ಬಳಿ ನಡೆಯುತ್ತಿರುವ ಕೆರೆ ಕಾಮಗಾರಿ ಹೂಳೆತ್ತುವ ಹಾಗೂ ಸೌಂದರ್ಯಿಕರಣಕ್ಕೆ ಇನ್ನೂ 1.5 ಕೋಟಿ ರೂ. ಬಿಡುಗಡೆ ಮಾಡಲಾಗುವುದು. ಪಟ್ಟಣಕ್ಕೆ ನೀರಿನ ಸಮಸ್ಯೆ ಶಾಶ್ವತವಾಗಿ ಬಗೆಹರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ತಾಲೂಕಿನ ಕೆಲ ಶಿಕ್ಷಕರು ಸರಿಯಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ, ಶಾಲೆಗಳಿಗೆ ಚಕ್ಕರ್ ಹಾಕಿ ಮಕ್ಕಳ ಭವಿಷ್ಯದ ಜೊತೆ ಆಟವಾಡುತ್ತಿರುವ ಬಗ್ಗೆ ಸಾಕಷ್ಟು ದೂರುಗಳು ಬಂದಿದ್ದು, ಅಂತಹ ಶಿಕ್ಷಕರನ್ನು ಕೂಡಲೇ ಅಮಾನತು ಮಾಡುವಂತೆ ಕ್ಷೇತ್ರಶಿಕ್ಷಣಾಧಿಕಾರಿಗೆ ಸೂಚಿಸಿದರು. ತಾಲೂಕಿನಲ್ಲಿ ನಡೆಯುತ್ತಿರುವ ಶಾಲಾ ಕೋಣೆ ನಿರ್ಮಾಣದ ಮೇಲೆ ನಿಗಾ ವಹಿಸಿ. ಅಲ್ಲದೇ ತಾಲೂಕಿನಲ್ಲಿ ಮೂರು ಮೊರಾರ್ಜಿ ವಸತಿ ಶಾಲೆ, ಮೂರು ಅಬ್ದುಲ್ ಕಲಾಂ ಆಜಾದ್, ಒಂದು ರೆಸಿಡೆನ್ಸಿ ಡಿಗ್ರಿ ಕಾಲೇಜು ಮಂಜೂರಿ ಮಾಡಲಾಗಿದೆ. ಬರುವ ಶೈಕ್ಷಣಿಕ ವರ್ಷದಲ್ಲಿ ಎಸ್‌ಎಸ್‌ಎಲ್ಸಿಯಲ್ಲಿ ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಪಡೆಯಲು ಶ್ರಮಿಸಿ ಎಂದು ಹೇಳಿದರು.
ಜಿಪಂ ಸದಸ್ಯ ಶಾಂತಪ್ಪ ಕೂಡಲಗಿ, ತಾಪಂ ಅಧ್ಯಕ್ಷೆ ಚಂದಮ್ಮ ಸಂಗಣ್ಣ ಇಟಗಾ, ಜೇವರ್ಗಿ ತಹಶೀಲ್ದಾರ್ ಸಿದ್ಧರಾಯ ಬೋಸಗಿ, ಯಡ್ರಾಮಿ ತಹಶೀಲ್ದಾರ್ ಬಸಲಿಂಗಪ್ಪ ನಾಯ್ಕೋಡಿ, ಬಿಸಿಎಂ, ಆರೋಗ್ಯ, ಲೋಕೋಪಯೋಗಿ, ಅರಣ್ಯ, ಕೃಷಿ, ಸಣ್ಣ ನೀರಾವರಿ, ಸಮಾಜ ಕಲ್ಯಾಣ, ತೋಟಗಾರಿಕೆ, ಕೈಗಾರಿಕೆ ಹಾಗೂ ತಾಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.