ಜೇವರ್ಗಿ: ರಾಷ್ಟ್ರೀಯ ಹೆದ್ದಾರಿ 50ರ ಮೇಲೆ ಇನ್ನೊಂದು ವಾರದೊಳಗೆ ಟೋಲ್ಗೇಟ್ ಆರಂಭವಾಗಲಿದೆ.
ಈಗಾಗಲೇ ಶೇ.95ರಷ್ಟು ಹೆದ್ದಾರಿ ಕಾಮಗಾರಿ ಪೂರ್ಣವಾದ ಹಿನ್ನೆಲೆಯಲ್ಲಿ ವಿಜಯಪುರ ಕಡೆ ಹೋಗುವವರು ಶುಲ್ಕ ಕಟ್ಟುವುದು ಅನಿವಾರ್ಯವಾಗಿದೆ.
ತಾಲೂಕಿನ ಹರವಾಳ ಕ್ರಾಸ್-ಸೊನ್ನ ಕ್ರಾಸ್ ನಡುವೆ ಟೋಲ್ ಗೇಟ್ ಕಾಮಗಾರಿ ನಡೆಯುತ್ತಿದ್ದು, ವಾರದೊಳಗೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ.
ಬೀದರ ಜಿಲ್ಲೆ ಹುಮನಾಬಾದದಿಂದ ವಿಜಯಪುರ ವರೆಗಿನ ರಾಷ್ಟ್ರೀಯ ಹೆದ್ದಾರಿ-50ರ ಕಾಮಗಾರಿಯನ್ನು ಎಲ್ಆ್ಯಂಡ್‌ಟಿ ಕಂಪನಿ ಗುತ್ತಿಗೆ ಪಡೆದಿದ್ದು, ಶೇ. 95ರಷ್ಟು ಕಾಮಗಾರಿ ಪೂರ್ಣವಾಗಿದೆ. ಈ ಹಿನ್ನೆಲೆಯಲ್ಲಿ ವಿಜಯಪುರ ಹತ್ತಿರ ಹಾಗೂ ಜೇವರ್ಗಿ ತಾಲೂಕಿನ ಸೊನ್ನ ಕ್ರಾಸ್ ಹತ್ತಿರ ಟೋಲ್ ಗೇಟ್ ತೆರೆಯಲಾಗುತ್ತಿದೆ.
ಒಪ್ಪಂದದ ಪ್ರಕಾರ ಶೇ.75ರಷ್ಟು ಕಾಮಗಾರಿ ಮುಕ್ತಾಯವಾದ ನಂತರ ಶುಲ್ಕ ಆಕರಣೆ ಮಾಡುವ ಒಪ್ಪಂದವನ್ನು ಹೆದ್ದಾರಿ ನಿರ್ಮಾಣಕ್ಕೆ ಮುನ್ನ ಹೆದ್ದಾರಿ ಪ್ರಾಧಿಕಾರದೊಂದಿಗೆ ಎಲ್ಆ್ಯಂಡ್‌ಟಿ ಕಂಪನಿ ಮಾಡಿಕೊಂಡಿದೆ. ಆಗಸ್ಟ್ ತಿಂಗಳು ಪೂರ್ಣಗೊಳ್ಳುವುದರೊಳಗೆ ಹುಮನಾಬಾದದಿಂದ ವಿಜಯಪುರ ವರೆಗೆ ಕಾಮಗಾರಿ ಪೂರ್ಣಗೊಳ್ಳಲಿರುವ ಹಿನ್ನೆಲೆಯಲ್ಲಿ ಟೋಲ್ ಸಂಗ್ರಹಿಸಲು ಕಂಪನಿ ಸಿದ್ಧತೆ ನಡೆಸಿದೆ. ಟೋಲ್ ಸಂಗ್ರಹಕ್ಕೆ ಅಗತ್ಯ ಸಿದ್ಧತೆಯನ್ನು ಸೊನ್ನ ಕ್ರಾಸ್ ಹತ್ತಿರ ಕಂಪನಿ ಕೈಗೊಂಡಿದೆ.