ಜೇವರ್ಗಿ: ಬಲು ಅಪರೂಪದ ಕಂಕಣ ಸೂರ್ಯಗ್ರಹಣ ಹಿನ್ನಲೆಯಲ್ಲಿ ಪಟ್ಟಣ ಸೇರಿದಂತೆ ತಾಲೂಕಿನಲ್ಲಿ ಅಸ್ಪಷ್ಟವಾಗಿ ಗೋಚರಿಸಿತು. ಒಬ್ಬ ಗಂಡು ಪುತ್ರನಿರುವ ತಾಯಿಂದಿರು ಎಕ್ಕೆ ಗಿಡಕ್ಕೆ ಪೂಜೆ ಸಲ್ಲಿಸಿ ದೀಪ ಹಚ್ಚಬೇಕು. ಇಲ್ಲದಿದ್ದರೆ ಕೆಟ್ಟದಾಗುತ್ತದೆ ಎಂಬ ಗಾಳಿ ಸುದ್ದಿ ಬುಧವಾರ ರಾತ್ರಿಯೇ ಪಟ್ಟಣದಲ್ಲಿ ಹರಡಿತ್ತು. ಈ ಹಿನ್ನಲೆಯಲ್ಲಿ ಸಾಕಷ್ಟು ಜನ ತಾಯಿಂದಿರು ಬುಧವಾರ ರಾತ್ರಿ ಎಕ್ಕೆ ಗಿಡಕ್ಕೆ ಪೂಜೆ ಸಲ್ಲಿಸಿ ದೀಪ ಹಚ್ಚಿದ ದೃಶ್ಯ ಕಂಡು ಬಂತು.
ಅಲ್ಲದೇ ಗುರುವಾರ ಗಾಂಧಿನಗರದ ಮನೆಯೊಂದರಲ್ಲಿ ತಟ್ಟೆಯೊಳಗೆ ನೀರು ಹಾಕಿ ಒನಕೆ ಇಡಲಾಗಿತ್ತು. ಯಾವುದೇ ಆಧಾರವಿಲ್ಲದೇ ಒನಕ್ಕೆ ನಿಂತಿತ್ತು. ಗ್ರಹಣ ಸ್ಪರ್ಶ ಕಾಲದಲ್ಲಿ ಒನಕೆ ನಿಲ್ಲುತ್ತದೆ. ಗ್ರಹಣ ಮುಗಿಯುತ್ತಿದ್ದಂತೆ ಒನಕೆ ಬೀಳುತ್ತದೆ ಎಂದು ಹೇಳಲಾಗಿತ್ತು.
ಆದರೆ ಗ್ರಹಣ ಬಿಟ್ಟಾಗ ಒನಕೆ ಬೀಳದೆ ಇದ್ದುದು ಜನರ ಮೂಢನಂಬಿಕೆಗೆ ಸಾಕ್ಷಿಯಾಯಿತು. ಗುರುವಾರ ಬೆಳಗ್ಗೆ 8:04ಕ್ಕೆ ಆರಂಭವಾದ ಕಂಕಣ ಸೂರ್ಯ ಗ್ರಹಣ 11:04ಕ್ಕೆ ಅಂತ್ಯವಾಯಿತು. ಪಟ್ಟಣದಲ್ಲಿ ಮೋಡ ಕವಿದ ವಾತಾವರಣ ಇದ್ದ ಕಾರಣ ಸೂರ್ಯಗ್ರಹಣ ಅಸ್ಪಷ್ಟವಾಗಿ ಗೋಚರವಾಯಿತು.
ಬೆಳ್ಳಂಬೆಳಿಗ್ಗೆ ಬೇಗನೇ ಎದ್ದ ಪಟ್ಟಣದ ಬಹುತೇಕ ಜನರು 7:00ರೊಳಗೆ ಸ್ನಾನ, ಉಪಹಾರ ಸೇವನೆ ಮಾಡಿದರು. ಅಲ್ಲದೇ ಗ್ರಹಣ ಮುಗಿಯುವರೆಗೂ ಬಹುತೇಕ ಜನರು ಮನೆಯಿಂದ ಹೊರಬರಲೇ ಇಲ್ಲ. ಪಟ್ಟಣದ ಪ್ರಮುಖ ರಸ್ತೆಗಳು, ದತ್ತನಗರ, ಶಿಕ್ಷಕರ ಕಾಲೋನಿ, ಬಸವೇಶ್ವರ ಕಾಲೋನಿ, ಓಂ ನಗರ ಸೇರಿದಂತೆ ಬಹುತೇಕ ನಗರಗಳು ಬಿಕೋ ಎನ್ನುತ್ತಿತ್ತು. ಅದರಲ್ಲೂ ಗರ್ಭಿಣಿಯರು, ಮಕ್ಕಳು ಹೊರ ಬರಲೇ ಇಲ್ಲ. ಗ್ರಹಣ ಸಂದರ್ಭದಲ್ಲಿ ಸೂರ್ಯನ ಕಿರಣಗಳು ಗರ್ಭೀಣಿಯರ ಮೇಲೆ ಬಿದ್ದರೆ ಅಂಗವಿಕಲ ಮಕ್ಕಳು ಜನ್ಮತಾಳಬಹುದು ಎಂಬ ಆತಂಕದಿಂದ ಯಾರೂ ಹೊರಬರಲಿಲ್ಲ.
ಸದಾ ಜನಜಂಗುಳಿಯಿಂದ ಕೂಡಿರುತ್ತಿದ್ದ ಬಸ್ ನಿಲ್ದಾಣ, ಬಸವೇಶ್ವರ ಸರ್ಕಲ್ ಬಳಿಯೂ ಜನರ ಸಂಚಾರ ಕಾಣಲಿಲ್ಲ. ಗ್ರಹಣ ಮುಗಿಯುತ್ತಿದ್ದಂತೆ ಬಾವಿ, ಕೊಳವೆಬಾವಿಗೆ ತೆರಳಿ ಸ್ನಾನ ಮಾಡಿ ದೇವರಿಗೆ ಪೂಜೆ ಸಲ್ಲಿಸಿ ಊಟ ಮಾಡಿದರು.
ಪಟ್ಟಣದ ಮಹಾಲಕ್ಷ್ಮೀ ದೇವಸ್ಥಾನ, ಈಶ್ವರ ದೇವಾಲಯ, ಹನುಮಾನ ಮಂದಿರ, ವಿಶ್ವರಾಧ್ಯ ದೇವಾಲಯ, ದಂಡಗುಂಡ ಬಸವಣ್ಣ ದೇವಾಲಯ, ಸಂಪತ್ ಲಕ್ಷ್ಮೀ ದೇವಾಲಯಗಳನ್ನು ಶುಚಿಗೊಳಿಸಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಪಟ್ಟಣದ ಬಸವೇಶ್ವರ ಶಿಕ್ಷಕರ ತರಬೇತಿ ಕೇಂದ್ರದಲ್ಲಿ ಸೂರ್ಯಗ್ರಹಣ ವೀಕ್ಷಣೆಗೆ ಅವಕಾಶ ಮಾಡಲಾಗಿತ್ತು. ನೂರಾರು ಜನ ಮಕ್ಕಳು, ಮಹಿಳೆಯರು ಗ್ರಹಣದ ಕೌತುಕ ಕಣ್ತುಂಬಿಕೊಂಡರು.