ಜೇವರ್ಗಿ: ಜೆಸ್ಕಾಂ ನಿರ್ಲಕ್ಷ್ಯದಿಂದ ಪಟ್ಟಣ ಸೇರಿದಂತೆ ತಾಲೂಕಿನ ಕೆಲ ಗ್ರಾಮಗಳಲ್ಲಿ ಅಸಮರ್ಪಕ ವಿದ್ಯುತ್ ಸರಬರಾಜಿನಿಂದಾಗಿ ಜನತೆ ಕತ್ತಲಲ್ಲೇ ಕಾಲ ಕಳೆಯುವಂತಾಗಿದೆ.
ಬಿರು ಬೇಸಿಗೆಯಲ್ಲಿ ಉಂಟಾಗದ ವಿದ್ಯುತ್ ಸಮಸ್ಯೆ ಮಳೆಗಾಲದಲ್ಲಿ ಸಾಕಷ್ಟು ತೊಂದರೆ ಮಾಡಿದೆ. ವಿದ್ಯುತ್ ಸಮಸ್ಯೆಯಿಂದ ಸರ್ಕಾರಿ ಕಚೇರಿಗಳಲ್ಲಿ ಸೂಕ್ತ ಸಮಯದಲ್ಲಿ ಕೆಲಸ ಕಾರ್ಯ ಆಗುತ್ತಿಲ್ಲ. ಮಕ್ಕಳ ವಿದ್ಯಾಭ್ಯಾಸಕ್ಕೂ ತೊಂದರೆಯಾಗುತ್ತಿದೆ.
ಪಟ್ಟಣದಲ್ಲಿ ಕಳೆದ 20 ದಿನಗಳಿಂದ ಗಂಭೀರವಾದ ವಿದ್ಯುತ್ ತೊಂದರೆಯಾಗುತ್ತಿದೆ. ಐಪಿಡಿಎಸ್ ಹಾಗೂ ಸೌಭಾಗ್ಯ ಯೋಜನೆ ಕಾಮಗಾರಿ ನಡೆಯುತ್ತಿರುವುದರಿಂದ ಸಮಸ್ಯೆ ಉಂಟಾಗುತ್ತಿದೆ ಎಂದು ಜೆಸ್ಕಾಂ ಅಧಿಕಾರಿಗಳು ಹೇಳುತ್ತಿದ್ದಾರೆ.
ಒಂದು ಕಡೆ ಕಾಮಗಾರಿ ನಡೆಯುತ್ತಿದ್ದರೆ ಪಟ್ಟಣದಲ್ಲಿ ಲೈನ್‌ಕಟ್ ಮಾಡಲಾಗುತ್ತಿದೆ. ಇದರಿಂದ ವ್ಯಾಪಾರ, ವ್ಯವಹಾರಕ್ಕೆ ತೊಂದರೆ ಉಂಟಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಮಳೆ-ಗಾಳಿಯಿಂದ ಮುಖ್ಯಲೈನ್ ತೊಂದರೆ, ಮರ ಬಿದ್ದಿದೆ ಎನ್ನುವ ಹಾರಿಕೆ ಉತ್ತರ ಅಧಿಕಾರಿಗಳಿಂದ ಕೇಳಿಬರುತ್ತಿದೆ. ಕಳೆದ 15-20 ದಿನಗಳಿಂದ ನಿತ್ಯ ಐದಾರು ಬಾರಿಗಿಂತ ಹೆಚ್ಚು ವಿದ್ಯುತ್ ಕಡಿತಗೊಳಿಸಲಾಗುತ್ತಿದೆ. ಒಂದೊಂದು ದಿನ 6 ರಿಂದ 8 ಗಂಟೆಗೂ ಅಧಿಕ ಕಾಲ ಸಂಪರ್ಕ ಕಡಿತಗೊಳಿಸಲಾಗುತ್ತಿದೆ. ಇದರಿಂದ ಸಾರ್ವಜನಿಕರು, ವಿದ್ಯಾರ್ಥಿಗಳು, ವೃದ್ಧರು ಪರದಾಡುವಂತಾಗಿದೆ.
ಮಳೆಗಾಲ ಇರುವುದರಿಂದ ಅಲ್ಲಲ್ಲಿ ಮಳೆ ನೀರು ನಿಂತು, ಸೊಳ್ಳೆ ಕಾಟ ಹೆಚ್ಚಾಗಿದೆ. ಇದರಿಂದ ಫ್ಯಾನ್ ಇಲ್ಲದೇ ಕಾಲ ಕಳೆಯುವಂತಿಲ್ಲ. ಇಂತಹ ಸಂದರ್ಭಗಳಲ್ಲಿ ಲೈನ್ ಕಟ್ನಿಂದ ಜನ ತೀವ್ರ ತೊಂದರೆ ಅನುಭವಿಸುವಂತಾಗಿದೆ. ಈ ಸಮಸ್ಯೆಯಿಂದ ತಹಶೀಲ್ ಕಚೇರಿಯಲ್ಲಿ ರೈತರ, ಸಾರ್ವಜನಿಕರ ಕೆಲಸ, ಕಾರ್ಯಗಳು ಆಗುತ್ತಿಲ್ಲ. ಈ ಬಗ್ಗೆ ಜೆಸ್ಕಾಂ ಅಧಿಕಾರಿಗಳಿಗೆ ಸಂಪರ್ಕಿಸಿದರೆ ಕರೆ ಸ್ವೀಕರಿಸುತ್ತಿಲ್ಲ. ತಾಲೂಕಿನ ಕೆಲ ಗ್ರಾಮಗಳಲ್ಲಿ ವಿದ್ಯುತ್ ಸಮಸ್ಯೆಯಿಂದ ಜನ ಕುಡಿಯುವ ನೀರಿಗೆ ಪರದಾಡುತ್ತಿದ್ದಾರೆ. ಸಮಸ್ಯೆ ಕುರಿತು ಸಾಕಷ್ಟು ಬಾರಿ ಸಂಬಂಧಪಟ್ಟವರಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸಾರ್ವಜನಿಕರು ದೂರುತ್ತಿದ್ದಾರೆ. ಇನ್ನಾದರೂ ಸಂಬಂಧಪಟ್ಟವರು ಪಟ್ಟಣದಲ್ಲಿ ಹಾಗೂ ಗ್ರಾಮೀಣ ಭಾಗದಲ್ಲಿ ತಲೆದೋರಿರುವ ವಿದ್ಯುತ್ ಸಮಸ್ಯೆ ಬಗೆಹರಿಸಬೇಕು. ಇಲ್ಲದಿದ್ದರೆ ಜೆಸ್ಕಾಂ ಕಚೇರಿ ಎದುರು ಹೋರಾಟ ಮಾಡಬೇಕಾಗುತ್ತದೆ ಎಂದು ಕರವೇ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಾಶಿನಾಥ ಸಾಹು ಮಂದೇವಾಲ ಆಗ್ರಹಿಸಿದ್ದಾರೆ.