ವಿಜಯಕುಮಾರ ಎಸ್. ಕಲ್ಲಾ
ಜೇವರ್ಗಿ: ರಾಜ್ಯ ಸರ್ಕಾರ ಪ್ಲಾಸ್ಟಿಕ್ ವಸ್ತುಗಳ ಬಳಕೆ ಸಂಪೂರ್ಣವಾಗಿ ನಿಷೇಧಿಲು ಎಷ್ಟೇ ಜನಜಾಗೃತಿ ಜತೆಗೆ ಕ್ರಮ ತೆಗೆದುಕೊಳ್ಳುತ್ತಿದ್ದರೂ ಪಟ್ಟಣದ ಬಹುತೇಕ ಕಡೆಗಳಲ್ಲಿ ಪ್ಲಾಸ್ಟಿಕ್ ವಸ್ತುಗಳ ಬಳಕೆ ಇಂದಿಗೂ ನಿಯಂತ್ರಣಕ್ಕೆ ಬಂದಿಲ್ಲ.
ಜಿಲ್ಲಾ ಕೇಂದ್ರಕ್ಕೆ ಹೋಗುವ ಕಲಬುರಗಿ ರಸ್ತೆಯಲ್ಲಿ, ಶಹಾಪುರ ರಸ್ತೆ, ಹಳೆ ಬಸ್ ನಿಲ್ದಾಣ, ಎಪಿಎಂಸಿ ವೇಬ್ರಿಡ್ಜ್, ಮಳಿಗೆಗಳ ಹಿಂದೆ, ಷಣ್ಮುಖ ಶಿವಯೋಗಿ ಮಠದ ಹತ್ತಿರ, ಬುಟ್ನಾಳ ರಸ್ತೆಯಲ್ಲಿನ ಪುರಸಭೆ ಮಳಿಗೆಗಳ ಬಳಿ ಪ್ಲಾಸ್ಟಿಕ್ ವಸ್ತುಗಳು ರಾಶಿರಾಶಿಯಾಗಿ ಬಿದ್ದಿವೆ. ಈ ಬಗ್ಗೆ ಯಾರೊಬ್ಬರೂ ಧ್ವನಿ ಎತ್ತದಿರುವುದು ಅಚ್ಚರಿಗೆ ಕಾರಣವಾಗಿದೆ. ಪಟ್ಟಣ ಪ್ರವೇಶ ಮಾಡುತ್ತಿದ್ದಂತೆ ರಸ್ತೆ ಎರಡು ಬದಿಯಲ್ಲಿ ಪ್ಲಾಸ್ಟಿಕ್ ಹಾಳೆಗಳು, ನೀರಿನ, ಪಾನೀಯ ಸೇರಿದಂತೆ ಮದ್ಯದ ಬಾಟಲಿಗಳು ಬಿದ್ದಿದ್ದರೂ ಯಾರೊಬ್ಬರೂ ಚಕಾರ ಎತ್ತುತ್ತಿಲ್ಲ.
ಪಟ್ಟಣದ ಖಾಲಿ ನಿವೇಶನಗಳು ಮತ್ತು ಚರಂಡಿಗಳು, ರಾಷ್ಟ್ರೀಯ, ರಾಜ್ಯ ಹೆದ್ದಾರಿಗಳು ಸೇರಿದಂತೆ ಗ್ರಾಮೀಣ ರಸ್ತೆಗಳ ಅಕ್ಕ ಪಕ್ಕದಲ್ಲಿ ಪ್ಲಾಸ್ಟಿಕ್ ಹಾವಳಿ ಹೆಚ್ಚು ಕಂಡು ಬರುತ್ತಿದೆ. ಹೋಟೆಲ್, ಮಾಂಸದ ಅಂಗಡಿ ಮತ್ತು ಖಾನಾವಳಿಗಳಲ್ಲಿ ಬಳಕೆ ಮಾಡಲಾದ ಪ್ಲಾಸ್ಟಿಕ್ ಹಾಳೆಗಳು, ಗ್ಲಾಸ್‌ಗಳು ಮತ್ತು ಪ್ಲಾಸ್ಟಿಕ್ ನೀರಿನ ಬಾಟಲ್ ಗಳು ಸೇರಿದಂತೆ ಇತರೆ ಪ್ಲಾಸ್ಟಿಕ್ ವಸ್ತುಗಳನ್ನು ರಸ್ತೆ ಎರಡು ಬದಿಯಲ್ಲಿ ಎಸೆಯಸಲಾಗಿದೆ.
ಈ ಕುರಿತು ಪುರಸಭೆ ಅಧಿಕಾರಿಗಳ ಗಮನಕ್ಕೆ ತಂದರೂ ಇಲ್ಲಿಯವರೆಗೂ ಯಾವುದೇ ಕ್ರಮ ಕೈಗೊಳ್ಳದೇ ಇರುವುದು ಖಂಡನಾರ್ಹ ಎಂದು ಪರಿಸರ ಪ್ರೇಮಿಗಳು ಆರೋಪಿಸಿದ್ದಾರೆ.
ಕೆಲವರು ಬೆಳಗಿನ ಜಾವದಲ್ಲಿ ಪ್ಲಾಸ್ಟಿಕ್ ಹಾಳೆಗಳಿಗೆ ಬೆಂಕಿ ಹಚ್ಚಿ ಸುಡುತ್ತಿರುವುದರಿಂದ ವಾಯು ಮಾಲಿನ್ಯವಾಗಿ ಪಟ್ಟಣದ ಪ್ರಮುಖ ರಸ್ತೆಗಳ ಮೂಲಕ ವಿಹಾರಕ್ಕೆ ಹೋಗಿ ಬರುವ ಸಾರ್ವಜನಿಕರು ಮೂಗು ಮುಚ್ಚಿಕೊಳ್ಳುವಂತಾಗಿದೆ. ಪಟ್ಟಣದಲ್ಲಿ ಕೆಲ ದಿನಗಳ ಹಿಂದೆ ಪುರಸಭೆ ಮುಖ್ಯಾಧಿಕಾರಿ, ಪರಿಸರ ಅಭಿಯಂತರ, ನೈರ್ಮಲ್ಯ ನಿರೀಕ್ಷಕರ ನೇತೃತ್ವದಲ್ಲಿ ಕೆಲ ಅಂಗಡಿಗಳ ಮೇಲೆ ದಾಳಿ ಮಾಡಿರುವುದನ್ನು ಹೊರತುಪಡಿಸಿದರೆ ಇಲ್ಲಿಯವರೆಗೂ ಪ್ಲಾಸ್ಟಿಕ್ ನಿಯಂತ್ರಣಕ್ಕೆ ಕಠಿಣ ಕ್ರಮ ಕೈಗೊಳ್ಳುವಲ್ಲಿ ಮುಂದಾಗಿಲ್ಲ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಪಟ್ಟಣದ ಹೋಟೆಲ್, ಖಾನಾವಳಿ, ಮಾಂಸದ ಅಂಗಡಿ ಮಾಲೀಕರು ಬಹಿರಂಗವಾಗಿಯೇ ಪ್ಲಾಸ್ಟಿಕ್ ವಸ್ತುಗಳನ್ನು ಮಾರಾಟ ಮಾಡುತ್ತಿದ್ದಾರೆ.
ಸಂಬಂಧಿಸಿದ ಅಧಿಕಾರಿಗಳು ಕಠಿಣ ಕ್ರಮ ಕೈಗೊಂಡು ಪ್ಲಾಸ್ಟಿಕ್ ಹಾವಳಿಗೆ ನಿಯಂತ್ರಣ ಹಾಕಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.