ಜೇವರ್ಗಿ: ಕಳೆದ 2009ರಲ್ಲಿ ಭೀಮಾನದಿಗೆ ಪ್ರವಾಹ ಉಂಟಾಗಿ ಸಂತ್ರಸ್ತರಾದ ಜೇವರ್ಗಿ ತಾಲೂಕಿನ ನೂರಾರು ಕುಟುಂಬಗಳಿಗೆ ಉಡುಪಿ ಪೇಜಾವರ ಮಠದ ವಿಶ್ವೇಶತೀರ್ಥ ಶ್ರೀಗಳು ಸೂರು ಕಲ್ಪಿಸಿದ ಮಹಾನ್ ಸಂತರಾಗಿದ್ದಾರೆ.
2009ರಲ್ಲಿ ತಾಲೂಕಿನ ಭೀಮಾ ನದಿಗೆ ಪ್ರವಾಹ ಉಂಟಾಗಿ ನದಿ ಪಾತ್ರದ ಅನೇಕ ಹಳ್ಳಿಗಳ ಮನೆಗಳಿಗೆ ನೀರು ನುಗ್ಗಿತ್ತು. ಮನೆಗಳಲ್ಲದೇ ನೂರಾರು ಎಕರೆ ಜಮೀನುಗಳಲ್ಲಿ ಬೆಳೆದಿದ್ದ ಬೆಳೆ ನಾಶವಾಗಿತ್ತು. ಮನೆ, ಮಠ ಕಳೆದುಕೊಂಡು ನಿರಾಶ್ರಿತರಾಗಿದ್ದ ಜನರ ಕಣ್ಣೀರು ಒರೆಸಿ ಸಾಂತ್ವನ ಹೇಳಿ ಧೈರ್ಯ ತುಂಬಿದ್ದ ಮೊದಲ ಯತಿ ಪೇಜಾವರ ಶ್ರೀ.
ಬೀದಿ ಪಾಲಾದ ನೂರಾರು ಕುಟುಂಬಗಳಿಗೆ ನೆಲೆ ಒದಗಿಸುವ ನಿಟ್ಟಿನಲ್ಲಿ ಉಡುಪಿ ಪೇಜಾವರ ಶ್ರೀಗಳು ತಾಲೂಕಿನ ಕೂಡಿ ದರ್ಗಾ ಬಳಿಯ ಕೋಬಾಳ ರಸ್ತೆಯಲ್ಲಿ 2012ರಲ್ಲಿ ಶಿವರಾತ್ರಿ ದಿನದಂದು 125 ಮನೆಗಳನ್ನು ನಿರ್ಮಿಸಿಕೊಟ್ಟಿದ್ದರು. ಉಡುಪಿಯ ಶ್ರೀ ಪಲಿಮಾರು ಮಠ ಹಾಗೂ ಶ್ರೀ ಭಂಡಾರಕೇರಿ ಮಠಗಳ ಸಹಕಾರದೊಂದಿಗೆ ತಾಲೂಕಿನ ಕೂಡಿ, ಕೋಬಾಳ, ಕೋನಾ ಹಿಪ್ಪರಗಾ ಗ್ರಾಮಗಳ ನೆರೆ ಸಂತ್ರಸ್ತರಿಗೆ 125 ಮನೆಗಳನ್ನು ನಿರ್ಮಿಸುವ ಮೂಲಕ ಪ್ರವಾಹ ಸಂತ್ರಸ್ತರಿಗೆ ಸಹಾಯ ಹಸ್ತ ಚಾಚಿದ್ದರು.
ಪ್ರತಿ ಮನೆ ನಿರ್ಮಾಣಕ್ಕೆ ಅಂದಾಜು 1.20 ಲಕ್ಷ ರೂ. ವೆಚ್ಚ ಮಾಡಿ ಭವ್ಯವಾದ ಮನೆಗಳನ್ನು ನಿರ್ಮಿಸಲಾಗಿತ್ತು. ಹೊಸ ಬಡಾವಣೆಗೆ ಚರಂಡಿ, ಸಿಸಿ ರಸ್ತೆ, ಬೀದಿ ದೀಪ ಸೇರಿದಂತೆ ಮೂಲಭೂತ ಸೌಕರ್ಯ ಒದಗಿಸಲಾಗಿತ್ತು. ಅಂದಿನ ಜೇವರ್ಗಿ ಕ್ಷೇತ್ರದ ಶಾಸಕರಾಗಿದ್ದ ದೊಡ್ಡಪ್ಪಗೌಡ ಪಾಟೀಲ ನರಿಬೋಳ ನೇತೃತ್ವದಲ್ಲಿ ಕೂಡಿ ದರ್ಗಾ ಬಳಿ ಕಾರ್ಯಕ್ರಮ ಹಮ್ಮಿಕೊಂಡು
ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲಾಗಿತ್ತು. ಅದರಲ್ಲೂ ಮುಸ್ಲಿಂ ಕುಟುಂಬದ ಸದಸ್ಯನಿಗೆ ಮೊದಲ ಹಕ್ಕು ಪತ್ರ ವಿತರಣೆ ಮಾಡಿದ್ದು ವಿಶೇಷವಾಗಿತ್ತು.
ಅಂದು ಮಾತನಾಡಿದ್ದ ಶ್ರೀಗಳು, ನಾವು ದೀನ, ದಲಿತ, ಬಡವರ ಸೇವೆಗೆ ಸದಾ ಸಿದ್ಧರಿದ್ದೇವೆ. ಅವರ ಸೇವೆ ಭಗವಂತನ ಸೇವೆ ಎಂದು ನಾವು ಭಾವಿಸಿದ್ದೇವೆ. ಕೂಡಿ-ಕೋಬಾಳ ಎಂದರೆ ಕೂಡಿಕೊಂಡು ಬಾಳುವುದು ಎಂದರ್ಥ. ಎಲ್ಲರೂ ಭಗವಂತನ ಇಚ್ಛೆಯಂತೆ ಸಹಬಾಳ್ವೆಯಿಂದ ಬದುಕಬೇಕೆಂದು ಸಾಂತ್ವನ ಹೇಳಿದ್ದರು. ಉಡುಪಿಯ ಭಂಡಾರಕೇರಿ ಮಠದ ವಿದ್ಯೇಶ ತೀರ್ಥ ಶ್ರೀಪಾದರು, ಪೇಜಾವರ ಮಠದ ಕಿರಿಯ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಸಾನ್ನಿಧ್ಯ ವಹಿಸಿದ್ದರು.
ಕಾರ್ಯಕ್ರಮ ಮುಗಿಸಿಕೊಂಡು ರಾಸಣಗಿ ಗ್ರಾಮಕ್ಕೆ ಭೇಟಿ ನೀಡಿ ಬಲಭೀಮಸೇನ ದೇವರ ದರ್ಶನ ಪಡೆದುಕೊಂಡಿದ್ದರು.
ವಿಜಯಕುಮಾರ ಎಸ್.ಕಲ್ಲಾ