ಜೇವರ್ಗಿ: ಶಾಲೆಯಲ್ಲಿ ಗಣಿತದ ಪಾಠ ಮಾಡುವಾಗ ವಿದ್ಯಾರ್ಥಿಗಳಿಗೆ ನೀವೇ ಡೈಜೆಸ್ಟ್ ನೋಡಿಕೊಂಡು ಲೆಕ್ಕ ಬಿಡಿಸಿಕೊಳ್ಳಿ ಎಂದರೆ ಹೇಗಾಗಬೇಡ. ಇಂತಹ ಶಿಕ್ಷಕರೊಬ್ಬರು ಕೋಳಕೂರ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿದ್ದು, ಇವರ ವರ್ತನೆಗೆ ಬೇಸತ್ತ ವಿದ್ಯಾರ್ಥಿಗಳು ರೊಚ್ಚಿಗೆದ್ದ ಪ್ರಸಂಗ ಶುಕ್ರವಾರ ನಡೆಯಿತು.
ಲೆಕ್ಕವೇ ಬಾರದ ಗಣಿತ ಶಿಕ್ಷಕ ನಮಗೆ ಬೇಡ, ಈ ಶಿಕ್ಷಕರನ್ನು ಕೂಡಲೇ ವರ್ಗಾವಣೆ ಮಾಡಿ ಮತ್ತೂಬ್ಬ ಗಣಿತ ಶಿಕ್ಷಕರನ್ನು ನೇಮಿಸಿ ಎಂದು ಒತ್ತಾಯಿಸಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ತರಗತಿ ಕೋಣೆಗೆ ಬೀಗ ಜಡಿದು, ಗ್ರಾಪಂ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಈ ಗಣಿತ ಶಿಕ್ಷಕರು ಕಳೆದ 12 ವರ್ಷಗಳಿಂದಲೂ ಇದೇ ರೀತಿಯಾಗಿ ಪಾಠ ಮಾಡುತ್ತಿದ್ದಾರೆ. ಪಾಠ ಮಾಡುವಾಗ ವಿದ್ಯಾರ್ಥಿಗಳು ಕೇಳುವ ಪ್ರಶ್ನೆಗೆ ಡೈಜೆಸ್ಟ್ ನೋಡಿ ನೀವೇ ಉತ್ತರ ಹುಡುಕಿಕೊಳ್ಳಿ ಎನ್ನುತ್ತಾರೆ. ವಿದ್ಯಾರ್ಥಿಗಳ ಜೀವನದಲ್ಲಿ ಎಸ್‌ಎಸ್‌ಎಲ್ಸಿ ಪ್ರಮುಖ ಘಟ್ಟ. ಗಣಿತ ವಿಷಯ ನಮಗೆ ಕಬ್ಬಿಣದ ಕಡಲೆ. ಈ ವಿಷಯದ ಬಗ್ಗೆ ನಮಗೆ ತಿಳಿಯುವಂತೆ ಪಾಠ ಮಾಡದೇ ಶಿಕ್ಷಕರು ಉಢಾಫೆ ಮಾಡುತ್ತಿದ್ದಾರೆ. ನಿತ್ಯ ಶಾಲೆಗೆ ಬಾರದೇ ರಾಜಕೀಯ ಮಾಡುತ್ತಿದ್ದಾರೆ. ಕಳೆದ ವರ್ಷ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 30 ವಿದ್ಯಾರ್ಥಿಗಳಲ್ಲಿ ಕೇವಲ 15 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಇಂತಹ ಶಿಕ್ಷಕರಿಂದ ನಮ್ಮ ಭವಿಷ್ಯ ರೂಪುಗೊಳ್ಳುವುದಿಲ್ಲ. ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು.
ಶಾಲೆಯಲ್ಲಿ ಕಸಗೂಡಿಸುವುದು, ನೀರು ತರುವುದು ಸೇರಿದಂತೆ ಎಲ್ಲ ಕೆಲಸಗಳನ್ನು ವಿದ್ಯಾರ್ಥಿಗಳಿಂದ ಮಾಡಿಸಲಾಗುತ್ತಿದೆ. ಈ ಬಗ್ಗೆ ಹಲವು ಬಾರಿ ಮುಖ್ಯ ಶಿಕ್ಷಕರಿಗೆ ತಿಳಿಸಿದರೂ ಪ್ರಯೋಜನವಾಗಿಲ್ಲ. ಆದ್ದರಿಂದ ತರಗತಿ ಕೋಣೆಗೆ ಬೀಗ ಜಡಿದು, ಪಂಚಾಯಿತಿ ಎದುರು ಪ್ರತಿಭಟನೆ ನಡೆಸುತ್ತಿದ್ದೇವೆ. ಕೂಡಲೇ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು, ಸಂಬಂಧಪಟ್ಟ ಶಿಕ್ಷಣ ಇಲಾಖೆ ಅಧಿಕಾರಿಗಳು ಗಣಿತ ಶಿಕ್ಷಕರನ್ನು ವರ್ಗಾವಣೆ ಮಾಡಿಸಬೇಕು. ಅಲ್ಲಿಯವರೆಗೂ ಶಾಲೆಗೆ ತೆರಳುವುದಿಲ್ಲ ಎಂದು ವಿದ್ಯಾರ್ಥಿಗಳು ಎಚ್ಚರಿಸಿದರು.