ಜೇವರ್ಗಿ: ಒಂದೆಡೆ ಲೋಕಸಭೆ ಚುನಾವಣೆ ಕಾವು ಮುಗಿಯುತ್ತಿದ್ದರೂ ಬಿಸಿಲಿನ ಝಳ ಹೆಚ್ಚುವುದು ಮಾತ್ರ ಕಮ್ಮಿಯಾಗುತ್ತಿಲ್ಲ.
ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಕಳೆದ 15 ದಿನದಿಂದ ತಾಪಮಾನ ದಿನೇ ದಿನೇ ಏರುತ್ತಿದ್ದು, ಗರಿಷ್ಠ ತಾಪಮಾನ 40 ಡಿಗ್ರಿ ಸೆಲ್ಸಿಯಸ್ ದಾಟುತ್ತಿದೆ. ಬಿಸಿಲಿನ ಝಳ ಹೆಚ್ಚುತ್ತಿದ್ದು, ಸಾರ್ವಜನಿಕರು, ಮಹಿಳೆಯರು ಮಕ್ಕಳು ತತ್ತರಿಸಿದ್ದಾರೆ.
ಬಿಸಿಲಿನ ತಾಪದಿಂದ ತಪ್ಪಿಸಿಕೊಳ್ಳಲು ಮಹಿಳೆಯರು, ಮಕ್ಕಳು ಕೊಡೆಗಳ ಮೊರೆ ಹೋಗಿದ್ದು, ಪ್ರಾಣಿ-ಪಕ್ಷಿಗಳು ಬೀದಿಬದಿಯ ಮರದ ಆಶ್ರಯ ಬಯಸುವಂತಾಗಿದೆ.
ಜನರು ಬಿಸಿಲಿನ ಧಗೆಯಿಂದ ತಣಿಸಿಕೊಳ್ಳಲು ಯಂತ್ರಗಳ ಖರೀದಿಯಲ್ಲಿ ತೊಡಗಿದ್ದಾರೆ. ಫ್ಯಾನ್, ಏರ್ ಕೂಲರ್, ಎಸಿ ಸೇರಿದಂತೆ ಇತರ ಯಂತ್ರಗಳನ್ನು ಖರೀದಿಸುತ್ತಿದ್ದಾರೆ. ಫ್ಯಾನಿನ ದರ 2000ರೂ. ದಿಂದ 3000ರೂ. ಗಡಿ ದಾಟಿದೆ. ಏರ್ ಕೂಲರ್ ದರ 10,000 ರೂ.ದಿಂದ 15 ಸಾವಿರ ರೂ. ಗಡಿ ದಾಟಿದೆ. ಸಾರ್ವಜನಿಕರು ಯಂತ್ರಗಳ ಬೆಲೆ ಕೇಳಿ ಧಗೆಯಲ್ಲಿ ಬೆಂದಂತಾಗಿದೆ.
ಪಟ್ಟಣ ಸೇರಿದಂತೆ ತಾಲೂಕಿನಲ್ಲಿ ತಾಪಮಾನ 35ರಿಂದ 40 ಡಿಗ್ರಿ ಸೆಲ್ಸಿಯಸ್ ತಲುಪುತ್ತಿದ್ದು, ಸಾರ್ವಜನಿಕರು ಮನೆ ಬಿಟ್ಟು ಹೊರಬಾರದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಜನರು ತಂಪೊತ್ತಿನಲ್ಲಿಯೇ ತಮ್ಮ ಕೆಲಸ ಕಾರ್ಯ ಮುಗಿಸಿಕೊಂಡು ಮಧ್ಯಾಹ್ನದ ವೇಳೆ ಮನೆ ಸೇರುತ್ತಿದ್ದಾರೆ. ಹೆಚ್ಚಾದ ಝಳದಿಂದ ಜನರು ತಮ್ಮ ದೇಹ ತಂಪುಗೊಳಿಸಿಕೊಳ್ಳಲು ತಂಪು ಪಾನಿಯಗಳ ಮೊರೆ ಹೋಗುತ್ತಿದ್ದು, ಎಳನೀರು, ಲಿಂಬು ಶರಬತ್, ಜೀರಾ, ಕಬ್ಬಿನ ಹಾಲು ಸೇರಿದಂತೆ ಇತರ ತಂಪು ಪಾನೀಯಗಳಿಗೆ ಬೇಡಿಕೆ ಹೆಚ್ಚಾಗಿದೆ. ಐಸ್‌ಕ್ರೀಮ್ ವ್ಯಾಪಾರವೂ ಭರ್ಜರಿಯಾಗಿ ಸಾಗಿದೆ. ಜನರು ಕಲ್ಲಂಗಡಿ, ಕರಬೂಜ್, ಪಪ್ಪಾಯಿ, ಸೇಬಿನ ಹಣ್ಣುಗಳ ಸೇವಿಸುವುದು ಸರ್ವೇ ಸಾಮಾನ್ಯ. ಆದರೆ ಹಣ್ಣುಗಳ ಬೆಲೆ ಗಗನ ಮುಟ್ಟಿದ್ದು, ಒಂದು ಕೆಜಿ ಕಲ್ಲಂಗಡಿಗೆ 30ರೂ.ದಿಂದ 40ರೂ., ಕರಬೂಜ್ 60ರೂ. ದಿಂದ 70ರೂ. ಆಗಿದ್ದು, ಅನಿವಾರ್ಯವಾಗಿ ಹಣ್ಣನ್ನು ಸೇವಿಸುವಂತಾಗಿದೆ. ಪಟ್ಟಣದ ಬಸವೇಶ್ವರ ಸರ್ಕಲ್, ಅಖಂಡೇಶ್ವರ ವೃತ್ತ, ಹೊಸ ಬಸ್ ನಿಲ್ದಾಣದ ಎದುರು ಹಣ್ಣಿನ, ತಂಪುಪಾನೀಯಗಳ ಅಂಗಡಿಗಳು ಸಾರ್ವಜನಿಕರ ದಾಹ ತೀರಿಸುವ ತಾಣವಾಗಿವೆ.
ಹೆಚ್ಚುತ್ತಿರುವ ತಾಪಮಾನ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದ್ದು, ದೇಹವನ್ನು ತಂಪುಗೊಳಿಸುವ ಆಹಾರ, ನೀರು, ಪಾನೀಯ, ಹಣ್ಣುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಬೇಕು. ಇಲ್ಲವಾದರೆ ಅತಿಯಾದ ತಾಪಮಾನದಿಂದ ಅನಾರೋಗ್ಯ ಉಂಟಾಗಬಹುದು.
• ಡಾ| ಸಿದ್ಧು ಪಾಟೀಲ,
ತಾಲೂಕು ಆರೋಗ್ಯಾಧಿಕಾರಿ, ಜೇವರ್ಗಿ
ಬಿಸಿಲಿನ ತಾಪ ತಡೆಯಲಾಗುತ್ತಿಲ್ಲ, ಮನೆಯಲ್ಲೂ ಕೂರಲಾಗುತ್ತಿಲ್ಲ. ಗೆಳೆಯರ ಜತೆ ಕೂಡಿ ಹಣ್ಣನ್ನು ತಿನ್ನಲು ಬಂದಿದ್ದೇನೆ. ಬೇಸಿಗೆ ಕಳೆಯುವುದು ಸವಾಲಿನ ಕೆಲಸವಾಗಿದ್ದು, ಬಿಡುವಿನ ಸಮಯದಲ್ಲಿ ಬಾವಿ, ಕೆರೆಗಳಿಗೆ ಹೋಗಿ ಈಜಾಡುವ ಮೂಲಕ ಬಿಸಿಲಿನ ತಾಪ ಕಡಿಮೆ ಮಾಡಿಕೊಳ್ಳುತ್ತೇವೆ.
•ದೇವಿಂದ್ರ ಬನ್ನೆಟ್ಟಿ ,
ಸಾರ್ವಜನಿಕರು
ವಿಜಯಕುಮಾರ ಎಸ್.ಕಲ್ಲಾ