Advertisement

ಗಂಗಾಧರ ಶ್ರೀ ಪಾದಯಾತ್ರೆ

03:23 PM Jul 31, 2019 | Naveen |

ಜೇವರ್ಗಿ: ಲೋಕಕಲ್ಯಾಣ ಮತ್ತು ಮಾನವ ಸಮೃದ್ಧಿಗಾಗಿ ಯಾದಗಿರಿ ಜಿಲ್ಲೆ ಅಬ್ಬೆತುಮಕೂರು ವಿಶ್ವರಾಧ್ಯ ಸಿದ್ಧಸಂಸ್ಥಾನ ಮಠದ ಡಾ| ಗಂಗಾಧರ ಮಹಾಸ್ವಾಮೀಜಿ ಮಂಗಳವಾರ ಪವಾಡ ಪುರುಷ ವಿಶ್ವರಾಧ್ಯರ ಜನ್ಮ ಸ್ಥಳ ತಾಲೂಕಿನ ಸುಕ್ಷೇತ್ರ ಗಂವ್ಹಾರ ಗ್ರಾಮದಿಂದ ಅಬ್ಬೆತುಮಕೂರವರೆಗೆ ಸಹಸ್ರಾರು ಭಕ್ತರ ಜತೆ ಪಾದಯಾತ್ರೆ ಪ್ರಾರಂಭಿಸಿದರು.

Advertisement

ಶ್ರೀಗಳ ಪಾದಯಾತ್ರೆ ಹಿನ್ನೆಲೆಯಲ್ಲಿ ಗಂವ್ಹಾರ ಗ್ರಾಮದಲ್ಲಿ ಜಾತ್ರೆ ವಾತಾವರಣ ನಿರ್ಮಾಣವಾಗಿದೆ. ಮಂಗಳವಾರ ಬೆಳಗ್ಗೆ ಗಂವ್ಹಾರದ ಬನ್ನಿ ಬಸವೇಶ್ವರ ಕರ್ತೃ ಗದ್ದುಗೆಗೆ ವಿಶೇಷ ರುದ್ರಾಭಿಷೇಕ, ಪೂಜಾ ಕೈಂಕರ್ಯ ಮುಗಿಸಿದ ನಂತರ ಮಧ್ಯಾಹ್ನ 1:00ಕ್ಕೆ ಸಕಲ ವಾದ್ಯ ಮೇಳಗಳೊಂದಿಗೆ ಶ್ರೀಗಳ ಪಾದಯಾತ್ರೆ ಪ್ರಾರಂಭವಾಯಿತು. ಅಲ್ಲಿಂದ ಗ್ರಾಮದ ಸೀಮಾಂತರ ಪ್ರದೇಶದಲ್ಲಿ ಭಕ್ತರಾದ ಚನ್ನಪ್ಪಗೌಡ ಬಿರಾದಾರ ಅವರ ಹೊಲದಲ್ಲಿ ನಿರ್ಮಿಸಲಾಗಿರುವ ಗುರು ಮಂಟಪದಲ್ಲಿ ಪಾದಪೂಜೆ ನಂತರ ವಿಶ್ರಾಂತಿ ಪಡೆದು ಅಣಬಿ ಗ್ರಾಮಕ್ಕೆ ತೆರಳಿದರು. ಪಾದಯಾತ್ರೆ ಸಂದರ್ಭದಲ್ಲಿ ಕೇರಳದ ಚೆಂಡಮೇಳ, ಮಂಡ್ಯದ ವೀರಗಾಸೆ, ಪುರವಂತರ ಸೇವೆ, ಕೋಲಾಟ, ಭಜನಾ ತಂಡಗಳು ಹಾಗೂ ರಾಜ್ಯದ ವಿವಿಧ ಮೂಲೆಗಳಿಂದ ಆಗಮಿಸಿದ ಕಲಾತಂಡಗಳು ಎಲ್ಲರ ಗಮನ ಸೆಳೆಯಿತು. ಕಳೆದ 26 ವರ್ಷಗಳಿಂದ ಡಾ| ಗಂಗಾಧರ ಸ್ವಾಮೀಜಿ ನೇತೃತ್ವದಲ್ಲಿ ಪಾದಯಾತ್ರೆ ಕೈಗೊಳ್ಳಲಾಗುತ್ತಿದೆ. ಪ್ರತಿ ವರ್ಷವೂ ಭಕ್ತರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದೆ. ಪಾದಯಾತ್ರೆಯಲ್ಲಿ ಕರ್ನಾಟಕ ಸೇರಿದಂತೆ ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣದಿಂದ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು. ಈ ವರ್ಷ ಪಾದಯಾತ್ರೆಯಲ್ಲಿ ಸುಮಾರು 15ರಿಂದ 20 ಸಾವಿರ ಯಾತ್ರಿಗಳು ಪಾಲ್ಗೊಂಡಿದ್ದಾರೆ. ಮೂರು ದಿನಗಳ ವರೆಗೆ ನಡೆಯುವ ಯಾತ್ರೆ ದಾರಿಯುದ್ದಕ್ಕೂ ಅಲ್ಲಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ಪ್ರಸಾದ ವ್ಯವಸ್ಥೆ ಮಾಡಲಾಗಿದೆ.

ಸಂಜೆ ಪಾದಯಾತ್ರೆ ಶಹಾಪುರ ತಾಲೂಕಿನ ಶಿರವಾಳ ಗ್ರಾಮ ತಲುಪಿದ ಬಳಿಕ ಮಾಜಿ ಶಾಸಕ ಗುರುಗೌಡ ಪಾಟೀಲ ನೇತೃತ್ವದಲ್ಲಿ ಪಾದಪೂಜೆ ನಂತರ ಸಾಯಬಣ್ಣ ಶರಣರ ಹೊಲದಲ್ಲಿ ಪ್ರಸಾದ ಸ್ವೀಕರಿಸಿ ಉರಸುಂಡಗಿ ಮೂಲಕ ಸನ್ನತ್ತಿಯಲ್ಲಿ ವಾಸ್ತವ್ಯ ಮಾಡಲಾಗುತ್ತದೆ. ಎರಡನೇ ದಿನ ಬುಧವಾರ ಪಾದಯಾತ್ರೆ ಕನಗಾನಹಳ್ಳಿ ಮಾರ್ಗವಾಗಿ ಉಳವಂಡಗೇರಾ, ಬನ್ನೆಟ್ಟಿ, ತಳಕ ಮೂಲಕ ಹೆಡಗಿಮುದ್ರಾ ತಲುಪಿ ಅಲ್ಲಿಯೇ ವಾಸ್ತವ್ಯ. ಮೂರನೇ ದಿನ ಗುರುವಾರ ಹೋತಪೇಟ, ಠಾಣಾಗುಂದಿ ಮೂಲಕ ಸಂಜೆ 5:00ಕ್ಕೆ ಸುಕ್ಷೇತ್ರ ಅಬ್ಬೆತುಮಕೂರಿಗೆ ತಲುಪಲಿದೆ.

ಪಾದಯಾತ್ರೆಯಲ್ಲಿ ಮಾಜಿ ಶಾಸಕ, ಬಿಜೆಪಿ ಜಿಲ್ಲಾಧ್ಯಕ್ಷ ದೊಡ್ಡಪ್ಪಗೌಡ ಪಾಟೀಲ ನರಿಬೋಳ, ಯಾದಗಿರಿ ಮಾಜಿ ಶಾಸಕ ವೀರಬಸವಂತರೆಡ್ಡಿ ಮುದ್ನಾಳ, ಮಾಜಿ ಎಂಎಲ್ಸಿ ಚನ್ನಾರೆಡ್ಡಿ ಪಾಟೀಲ, ಮುಖಂಡರಾದ ರಮೇಶಬಾಬು ವಕೀಲ, ಸಿದ್ದಣ್ಣಗೌಡ ಪಾಟೀಲ ಮಳಗ, ರಾಮಶೆಟ್ಟೆಪ್ಪ ಸಾಹು ಹುಗ್ಗಿ, ಬಿಜೆಪಿ ತಾಲೂಕು ಅಧ್ಯಕ್ಷ ಸಾಯಬಣ್ಣ ದೊಡ್ಮನಿ, ತಾಪಂ ಸದಸ್ಯ ಗುರುಬಸಪ್ಪ ದೊಡ್ಮನಿ, ವಿಜಯಕುಮಾರ ಮಾಲಿಪಾಟೀಲ, ವಿಜಯಕುಮಾರ ಪೊಲೀಸ್‌ ಪಾಟೀಲ, ಸಮಾಜ ಸೇವಕ ಕಲ್ಯಾಣಕುಮಾರ ಸಂಗಾವಿ, ರಾಜು ವಾರದ ಬಿರಾಳ, ಸಾಯಬಣ್ಣ ಗುತ್ತೇದಾರ, ಈಶಪ್ಪಗೌಡ ಮಾಲಿಪಾಟೀಲ ತುಮಕೂರ, ಶಾಂತಮಲ್ಲಣ್ಣಗೌಡ ಪಾಟೀಲ ಸನ್ನತ್ತಿ, ಕೊಟ್ರೇಶ ಹಿರೇಮಠ, ಮಲ್ಲಿಕಾರ್ಜುನ ಶಾಸ್ತ್ರಿ ಐನಾಪುರ, ರಾಜಶೇಖರಸಾಹು ರೆಡ್ಡಿ, ಭೀಮರಾವ ಕುಲಕರ್ಣಿ, ಸಂಗಣ್ಣಗೌಡ ಹಂಚನಾಳ, ವಿಜಯಕುಮಾರ ಹರನೂರ, ನೀಲಲೋಹಿತ ಹಿರೇಮಠ, ಶರಣಗೌಡ ಹೊಸ್ಮನಿ, ನಿಂಗಣ್ಣಗೌಡ ನಂದೂರ ಹಾಗೂ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next