Advertisement

ಜೇವರ್ಗಿ ಪಟ್ಟಣದಲ್ಲಿ ಫ್ಲೆಕ್ಸ್‌ ಹಾವಳಿಗೇಕಿಲ್ಲ ಕಡಿವಾಣ

11:21 AM May 31, 2019 | Team Udayavani |

ಜೇವರ್ಗಿ: ಪ್ಲಾಸ್ಟಿಕ್‌ ಫ್ಲೆಕ್ಸ್‌ ಬಳಕೆ ನಿಷೇಧಿಸಿದ್ದರೂ ಪಟ್ಟಣದ ಬಹುತೇಕ ಖಾಸಗಿ ಶಾಲಾ-ಕಾಲೇಜುಗಳು ವಿದ್ಯಾರ್ಥಿಗಳನ್ನು ಸೆಳೆಯುವ ಉದ್ದೇಶದಿಂದ ನಿಯಮಬಾಹಿರವಾಗಿ ಫ್ಲೆಕ್ಸ್‌ ಮತ್ತು ಬ್ಯಾನರ್‌ಗಳನ್ನು ಅಳವಡಿಸಿವೆ. ಇದರಿಂದ ಪಟ್ಟಣದ ಸೌಂದರ್ಯ ಹಾಳಾಗುತ್ತಿದೆ.

Advertisement

ಖಾಸಗಿ ಶಿಕ್ಷಣ ಸಂಸ್ಥೆಗಳು ಎಸ್‌ಎಸ್‌ಎಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳ ಭಾವಚಿತ್ರ ಮತ್ತು ಅವರು ಪಡೆದ ಅಂಕಗಳನ್ನು ದೊಡ್ಡ ಫ್ಲೆಕ್ಸ್‌ನಲ್ಲಿ ಮುದ್ರಿಸಿ ಪಟ್ಟಣದ ಪ್ರಮುಖ ರಸ್ತೆ ಮತ್ತು ವೃತ್ತಗಳಲ್ಲಿ ಜಾಹೀರಾತು ಫಲಕಗಳಂತೆ ಪ್ರದರ್ಶಿಸುವ ಪರಿಪಾಠ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ.

ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಪಟ್ಟಣದಲ್ಲೆಡೆ ಶಿಕ್ಷಣ ಸಂಸ್ಥೆಗಳ ಫ್ಲೆಕ್ಸ್‌ಗಳು ರಾರಾಜಿಸುತ್ತಿವೆ. ಶಿಕ್ಷಣ ಸಂಸ್ಥೆಗಳು ಯಾವುದೇ ಅನುಮತಿ ಪಡೆಯದೇ ನಿಯಮಬಾಹಿರವಾಗಿ ಫ್ಲೆಕ್ಸ್‌ಗಳನ್ನು ಅಳವಡಿಸುತ್ತಿದ್ದರೂ ಪುರಸಭೆ ಸಿಬ್ಬಂದಿ ಕಣ್ಣುಮುಚ್ಚಿ ಕುಳಿತ್ತಿದ್ದಾರೆ.

ಬಯಲು ಪ್ರದೇಶ, ಸಾರ್ವಜನಿಕ ಸ್ಥಳ ವಿರೂಪ ತಡೆಕಾಯ್ದೆ 1981ರ ಅನ್ವಯ ಪುರಸಭೆ ಅನುಮತಿ ಇಲ್ಲದೇ ಫ್ಲೆಕ್ಸ್‌ಗಳನ್ನು ಅಳವಡಿಸುವುದು ಕ್ರಿಮಿನಲ್ ಅಪರಾಧವಾಗಿದೆ. ಇದಕ್ಕೆ ಆರು ತಿಂಗಳು ಜೈಲು ಶಿಕ್ಷೆ ವಿಧಿಸಲು ಅವಕಾಶವಿದೆ.

ನಾವು ಈ ಫ್ಲೆಕ್ಸ್‌ಗಳನ್ನು ವರ್ಷಪೂರ್ತಿ ಹಾಕುವುದಿಲ್ಲ, ವಿದ್ಯಾರ್ಥಿಗಳ ಚಿತ್ರ ಮತ್ತು ಅಂಕ ಗಳಿಕೆ ಮಾಹಿತಿ ಮಾತ್ರ ಹಾಕುತ್ತಿದ್ದೇವೆ. ಶಾಲೆಯ ಕಲಿಕಾ ಗುಣಮಟ್ಟದ ಬಗ್ಗೆ ಮಕ್ಕಳ ಪೋಷಕರಿಗೆ ಮನವರಿಕೆ ಮಾಡಿಕೊಡುವುದು ನಮ್ಮ ಉದ್ದೇಶವಾಗಿದೆ ಎಂಬುದು ಖಾಸಗಿ ಶಿಕ್ಷಣ ಸಂಸ್ಥೆಗಳ ಸಮರ್ಥನೆಯಾಗಿದೆ. ಪಟ್ಟಣದ ಶಿಕ್ಷಣ ಸಂಸ್ಥೆಗಳಲ್ಲದೇ ಬೇರೆ ತಾಲೂಕಿನ, ಜಿಲ್ಲೆಯ ಶಿಕ್ಷಣ ಸಂಸ್ಥೆಯವರು ತಮ್ಮ ಶಿಕ್ಷಣ ಸಂಸ್ಥೆಯ ಬಗ್ಗೆ ಫ್ಲೆಕ್ಸ್‌ ಅಳವಡಿಸುವುದು ಸಾಮಾನ್ಯವಾಗಿದೆ. ಇದರಿಂದಾಗಿ ಶಹಾಪುರ, ಕಲಬುರಗಿ, ಸಿಂದಗಿ, ಮೋರಟಗಿ, ವಿಜಯಪುರ ಮುಂತಾದ ನಗರಗಳ ಜಾಹೀರಾತು ಫ್ಲೆಕ್ಸ್‌ಗಳು ಪಟ್ಟಣದಲ್ಲಿ ರಾರಾಜಿಸುತ್ತಿವೆ.

Advertisement

ಸಾಧಕರ ಚಿತ್ರ ಮಾಹಿತಿಯಿಂದ ಶಾಲೆ-ಕಾಲೇಜು ಫಲಿತಾಂಶದ ಬಗ್ಗೆ ತಿಳಿಯುತ್ತದೆ. ಮಕ್ಕಳನ್ನು ಎಲ್ಲಿ ದಾಖಲಿಸಬೇಕು ಎಂದು ತೀರ್ಮಾನಿಸಲು ಪೋಷಕರಿಗೆ ಅನುಕೂಲವಾಗುತ್ತದೆ. ವಿದ್ಯಾರ್ಥಿಗಳ ಅಂಕಗಳೊಂದಿಗೆ ಭಾವಚಿತ್ರ ಹಾಕುವುದರಿಂದ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಖುಷಿಯಾಗುತ್ತದೆ ಎಂದು ಪೋಷಕರೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕೇವಲ 3 ರಿಂದ 5 ದಿನ ಫ್ಲೆಕ್ಸ್‌ಗಳನ್ನು ಅಳವಡಿಸಲು ಪರವಾನಗಿ ಪಡೆದ ಶಿಕ್ಷಣ ಸಂಸ್ಥೆಗಳು ಅವಧಿ ಮುಗಿದಿದ್ದರೂ ತೆರವುಗೊಳಿಸಲು ಮುಂದಾಗುತ್ತಿಲ್ಲ.

ವಿಜಯಕುಮಾರ ಎಸ್‌.ಕಲ್ಲಾ

Advertisement

Udayavani is now on Telegram. Click here to join our channel and stay updated with the latest news.

Next