Advertisement

ರೈತರ ಪಂಪ್‌ಸೆಟ್‌ಗಳಿಗೆ ವಿದ್ಯುತ್‌ ಪೂರೈಸಿ: ನರಿಬೋಳ

05:46 PM Apr 22, 2020 | Naveen |

ಜೇವರ್ಗಿ: ತಾಲೂಕಿನ ಭೀಮಾ ನದಿ ತೀರದ ಗ್ರಾಮಗಳ ರೈತರಿಗೆ ಪ್ರತಿ ದಿನ 4 ಗಂಟೆಗಳ ಕಾಲ ಮೂರು ಫೇಸ್‌ ವಿದ್ಯುತ್‌ ಪೂರೈಸುವಂತೆ ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ ಆಗ್ರಹಿಸಿದ್ದಾರೆ.

Advertisement

ಪಟ್ಟಣದ ಮಿನಿ ವಿಧಾನಸೌಧಕ್ಕೆ ಮಂಗಳವಾರ ಕೂಡಿ ಭಾಗದ ರೈತರ ನಿಯೋಗದೊಂದಿಗೆ ತಹಶೀಲ್ದಾರ್‌ ಸಿದರಾಯ ಭೋಸಗಿ ಭೇಟಿ ಮಾಡಿ ಮಾತನಾಡಿದ ಅವರು, ತಾಲೂಕಿನ ಕೂಡಿ, ಕೋಬಾಳ, ಮಂದ್ರವಾಡ, ಬಣಮಿ, ಕೋನಾ ಹಿಪ್ಪರಗಾ, ಹಂದನೂರ, ರಾಸಣಗಿ ಗ್ರಾಮಗಳ ರೈತರು ಬೇಸಿಗೆ ಕಾಲದಲ್ಲಿ ಬಾಳೆ, ಕಲ್ಲಗಂಡಿ ಬೆಳೆ, ಕಬ್ಬು, ಈರುಳ್ಳಿ ಹಾಗೂ ತರಕಾರಿ ಬೆಳೆಯುತ್ತಿದ್ದಾರೆ. ಯಾವುದೇ ಮುನ್ಸೂಚನೆ ನೀಡದೇ ಜೆಸ್ಕಾಂ ಅಧಿಕಾರಿಗಳು ರೈತರ ಪಂಪ್‌ ಸೆಟ್‌ಗಳ ವಿದ್ಯುತ್‌ ಪೂರೈಕೆ ಕಡಿತಗೊಳಿಸಿದ್ದಾರೆ. ಇದರಿಂದ ರೈತರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ರೈತರ ಪಂಪ್‌ ಸೆಟ್‌ ಗಳಿಗೆ ವಿದ್ಯುತ್‌ ಸಂಪರ್ಕ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ತಹಶೀಲ್ದಾರ್‌ ಸಿದರಾಯ ಭೋಸಗಿ ಮಾತನಾಡಿ, ಕೋನಾ ಹಿಪ್ಪರಗಾ-ಸರಡಗಿ (ಬಿ) ಬ್ರಿಜ್‌ ಕಂ ಬ್ಯಾರೇಜ್‌ನಿಂದ ಕಲಬುರಗಿ ನಗರಕ್ಕೆ ಕುಡಿಯುವ ನೀರು
ಸರಬರಾಜುಗೊಳಿಸಲಾಗುತ್ತಿದ್ದು , ಬೇಸಿಗೆಯಿದ್ದ ಕಾರಣ ಕಲಬುರಗಿ ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡಲು ರೈತರ ಪಂಪ್‌ಸೆಟ್‌ಗಳ ವಿದ್ಯುತ್‌ ಸಂಪರ್ಕ ಕಡಿತಗೊಳಿಸಲಾಗಿದೆ. ಈ ಕುರಿತು ಗ್ರಾಮೀಣ ಕುಡಿಯುವ ಸರಬುರಾಜು ಇಲಾಖೆ ಅಧಿಕಾರಿಗಳೊಂದಿಗೆ ಮಾತನಾಡಿ  ಬ್ಯಾರೇಜ್‌ನಲ್ಲಿ ಶೇಖರಣೆಯಾದ ನೀರಿನ ಪ್ರಮಾಣ ಪರಿಶೀಲಿಸಿ ವರದಿ ಪಡೆದ ನಂತರ ಜೆಸ್ಕಾಂ ಅಧಿಕಾರಿಗಳೊಂದಿಗೆ ಚರ್ಚಿಸಿ ವಾರದಲ್ಲಿ ಮೂರು ದಿನ ವಿದ್ಯುತ್‌ ಸರಬುರಾಜು ಮಾಡಲು ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಕೂಡಿ ಭಾಗದ ಗ್ರಾಮಗಳ ರೈತರು ಕೋನಾ ಹಿಪ್ಪರಗಾ-ಸರಡಗಿ (ಬಿ) ಬ್ಯಾರೇಜ್‌ ನೀರಿನ ಮೇಲೆ ಅವಲಂಬಿತರಾಗದೇ ಪರ್ಯಾಯ ಮಾರ್ಗ ಕಂಡುಕೊಳ್ಳುವಂತೆ ತಹಶೀಲ್ದಾರ್‌ ರೈತರ ನಿಯೋಗಕ್ಕೆ ತಿಳಿಸಿದರು.

ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ ಅವರು ಜಿಲ್ಲಾ ಉಸ್ತವಾರಿ ಸಚಿವ ಗೋವಿಂದ ಕಾರಜೋಳ ಅವರೊಂದಿಗೆ ದೂರವಾಣಿ ಮುಖಾಂತರ
ಮಾತನಾಡಿ, ಕೂಡಿ ಭಾಗದ ಹತ್ತಾರು ಗ್ರಾಮಗಳ ರೈತರು ಬೇಸಿಗೆ ಸಮಯದಲ್ಲಿ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದು, ಭೀಮಾ ನದಿಯಲ್ಲಿ ನೀರಿದ್ದರೂ ರೈತರು ಬೆಳೆಗಳಿಗೆ ನೀರುಣಿಸಲು ಸಾಧ್ಯವಾಗುತ್ತಿಲ್ಲ. ಈ ಕುರಿತು ತಾವು ಜಿಲ್ಲಾ ಧಿಕಾರಿಗಳೊಂದಿಗೆ ಚರ್ಚಿಸಿ ರೈತರ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಮನವಿ ಮಾಡಿದರು.

ರೈತ ಮುಖಂಡರಾದ ಶರಣಗೌಡ ಪಾಟೀಲ ಕೋಬಾಳ, ಯಶವಂತರಾಯ ಸಂಕಾ, ಅರುಣಗೌಡ ಮಾಲಿಪಾಟೀಲ ಕೋನಾ ಹಿಪ್ಪರಗಾ, ಶರಣಗೌಡ ಕೋನಾ ಹಿಪ್ಪರಗಾ, ಮಲ್ಲಿನಾಥ ಕಶೆಟ್ಟಿ ಕೂಡಿ, ತಿಪ್ಪಣ್ಣ ತಳವಾರ ಬಣಮಿ, ಶಿವಪುತ್ರಪ್ಪ ಮೇಳಕುಂದಿ ರಾಸಣಗಿ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next