Advertisement

ದನದ ಕೊಟ್ಟಿಗೆಯಂತಾದ ಡಿಸಿಸಿ ಬ್ಯಾಂಕ್‌

10:03 AM Aug 23, 2019 | Team Udayavani |

ವಿಜಯಕುಮಾರ ಎಸ್‌. ಕಲ್ಲಾ
ಜೇವರ್ಗಿ:
ಪಟ್ಟಣದ ಜಿಲ್ಲಾ ಪಂಚಾಯತ್‌ ಕಚೇರಿ ಎದುರಿಗಿರುವ ಡಿಸಿಸಿ ಬ್ಯಾಂಕ್‌ ಸ್ಥಳದ ಅಭಾವ, ಮೂಲ ಸೌಕರ್ಯಗಳಿಂದ ವಂಚಿತವಾಗಿದ್ದು, ಬರುವ ರೈತರಿಗೆ ಕುಳಿತುಕೊಳ್ಳಲು ಸೂಕ್ತ ಆಸನದ ವ್ಯವಸ್ಥೆ ಇಲ್ಲದೇ ದನದ ಕೊಟ್ಟಿಗೆಯಾಗಿ ಮಾರ್ಪಟ್ಟಿದೆ.

Advertisement

ತಾಲೂಕಿನ ಸಾವಿರಾರು ರೈತರ ಖಾತೆಗಳಿರುವ ಪಟ್ಟಣದ ಕಲಬುರಗಿ -ಯಾದಗಿರಿ ಜಿಲ್ಲಾ ಸಹಕಾರ ಸಂಘದ ತಾಲೂಕು ಶಾಖೆ (ಡಿಸಿಸಿ ಬ್ಯಾಂಕ್‌) ಯನ್ನು ಕಳೆದ ಹತ್ತಾರು ವರ್ಷಗಳಿಂದ 15×15 ಅಡಿ ಜಾಗದಲ್ಲಿ ನಡೆಸಲಾಗುತ್ತಿದೆ.

ನಿತ್ಯ ಶಾಖೆಗೆ ಬರುವ ರೈತರು, ಮಹಿಳೆಯರು, ವೃದ್ಧರು, ಸಾರ್ವಜನಿಕರು ಒಂದಿಲ್ಲೊಂದು ಸಮಸ್ಯೆ ಎರುರಿಸು ವಂತಾಗಿದೆ. ಇಕ್ಕಟಾಗಿರುವ ಸ್ಥಳದಲ್ಲಿ ನಿತ್ಯ ಹಣಕಾಸಿನ ವ್ಯವಹಾರ ನಡೆಸಲು ಸಿಬ್ಬಂದಿ ಹೈರಾಣಾಗುತ್ತಿದ್ದಾರೆ.

ಈ ಶಾಖೆಯಲ್ಲಿ ವ್ಯವಸ್ಥಾಪಕ, ಕ್ಯಾಶಿಯರ್‌, ಕ್ಲರ್ಕ್‌, ಫಿಲ್ಡ್ ಆಫೀಸರ್‌, ಸೇವಕ ಕಾರ್ಯನಿರ್ವಹಿಸುತ್ತಿದ್ದಾರೆ. ಕುಡಿಯುವ ನೀರಿನ ಸಮಸ್ಯೆ, ಮಹಿಳಾ ಶೌಚಾಲಯ, ಬೆಳಕಿನ ವ್ಯವಸ್ಥೆ ಹೀಗೆ ಹಲವಾರು ಸಮಸ್ಯೆಗಳ ನಡುವೆ ಒಲ್ಲದ ಮನಸ್ಸಿನಿಂದ ಸಿಬ್ಬಂದಿ ಕೆಲಸ ಮಾಡಬೇಕಿದೆ. ಮಳೆಗಾಲದಲ್ಲಿ ಮಳೆ ನೀರು ಶಾಖೆ ಒಳಗೆ ನುಗ್ಗಿ ವಿದ್ಯುತ್‌ ಶಾರ್ಟ್‌ ಸರ್ಕ್ನೂಟ್ ಸಂಭವಿಸಿ ಕಂಪ್ಯೂಟರ್‌, ಫ್ಯಾನ್‌ ಸುಟ್ಟು ಹೋಗಿರುವಂತಹ ಘಟನೆ ಕೂಡ ನಡೆದಿವೆ. ಅದೃಷ್ಟವಶಾತ್‌ ಯಾವುದೇ ದುರ್ಘ‌ಟನೆ ಸಂಭವಿಸಿಲ್ಲ.

ಪರಿಸರದ ಕರೆಗೆ ಬ್ಯಾಂಕಿನ ಸಿಬ್ಬಂದಿಗೆ ಗಿಡಗಳ ಕಂಟಿಗಳೇ ಆಸರೆಯಾಗಿದೆ. ಶೌಚಾಲಯ ಇದ್ದರೂ ಅನೇಕ ವರ್ಷಗಳಿಂದ ಬೀಗವನ್ನೇ ತೆರೆದಿಲ್ಲ. ಇಕ್ಕಟಾಗಿರುವ ಸ್ಥಳದ ಈ ಬ್ಯಾಂಕಿಗೆ ನಿತ್ಯ ನೂರಾರು ರೈತರು ಬರುವುದರಿಂದ ಒಬ್ಬರ ಮೇಲೆ ಒಬ್ಬರು ಬಿದ್ದು ಕೆಲಸ ಮುಗಿಸಿಕೊಡು ಹೋಗಬೇಕು. ಅನೇಕ ಸಲ ಹಣ ಕಳ್ಳತನವಾಗಿರುವ ಘಟನೆಗಳು ನಡೆದಿವೆ. ಈ ಬಗ್ಗೆ ಹಲವಾರು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಶಾಖೆ ಸ್ಥಳಾಂತರ ಮಾಡುವಂತೆ ಮನವಿ ಮಾಡಿದರೂ ಯಾರೂ ಕ್ಯಾರೆ ಎಂದಿಲ್ಲ. ಕಳೆದ ಒಂದು ವರ್ಷದ ಹಿಂದೆ ಕರ್ನಾಟಕ ಬ್ಯಾಂಕ್‌ ಹತ್ತಿರದ ಕಟ್ಟಡವೊಂದಕ್ಕೆ ಬ್ಯಾಂಕ್‌ನ್ನು ಸ್ಥಳಾಂತರಿಸಲಾಗಿತ್ತು. ಆದರೆ ಅಕ್ಕ-ಪಕ್ಕದ ಮಳಿಗೆ ಮಾಲೀಕರು ತಕರಾರು ಎತ್ತಿದ ಪರಿಣಾಮ ಮರಳಿ ಹಳೆ ಕಟ್ಟಡಕ್ಕೆ ಸ್ಥಳಾಂತರಿಸಲಾಯಿತು.

Advertisement

ಶಾಖೆಯಲ್ಲಿ ಕೋಟ್ಯಂತರ ರೂ. ವಹಿವಾಟು ನಡೆಯುವುದರಿಂದ ಹಣ ಎಣಿಕೆ ಮಶೀನ್‌ ಇಲ್ಲದೇ ಕ್ಯಾಶಿಯರ್‌ ರಾತ್ರಿಯವರೆಗೂ ಕರ್ತವ್ಯ ನಿರ್ವಹಿಸಬೇಕಾಗಿದೆ. 10ಕ್ಕೂ ಹೆಚ್ಚು ದಲ್ಲಾಳಿಗಳು ಬ್ಯಾಂಕಿನ ಬಳಿ ರೈತರನ್ನು ವಂಚಿಸುತ್ತಿದ್ದರೂ ಸಂಬಂಧಿಸಿದವರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ರೈತರ ಬದಲು ದಲ್ಲಾಳಿಗಳು ವ್ಯವಹಾರಕ್ಕೆ ಆಗಮಿಸಿ ಸಿಬ್ಬಂದಿ ಕರ್ತವ್ಯಕ್ಕೆ ಅಡ್ಡಪಡಿಸುತ್ತಿದ್ದಾರೆ ಎನ್ನು ಆರೋಪ ಕೇಳಿಬರುತ್ತಿದೆ.

ಈ ಹಿಂದೆ ಕರ್ತವ್ಯ ಲೋಪ ಎಸಗಿದ ಆರೋಪದ ಮೇಲೆ ಈ ಶಾಖೆಯ ಮೂವರನ್ನು ಅಮಾನತು ಮಾಡಲಾಗಿತ್ತು. ಕೂಡಲೇ ಸಂಬಂಧಿಸಿದವರು ರೈತರ, ಸಿಬ್ಬಂದಿಯ ಹಿತದೃಷ್ಟಿಯಿಂದ ಬೇರೆ ಕಟ್ಟಡಕ್ಕೆ ಶಾಖೆ ಸ್ಥಳಾಂತರ ಮಾಡಿ ಅನುಕೂಲ ಕಲ್ಪಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಡಿಸಿಸಿ ಬ್ಯಾಂಕ್‌ಶಾಖೆಯಲ್ಲಿ ನಿತ್ಯ ರೈತರಿಗೆ, ಮಹಿಳೆಯರಿಗೆ, ಸಿಬ್ಬಂದಿಗೆ ತೊಂದರೆಯಾಗುತ್ತಿದೆ. ಕೂಡಲೇ ಬೇರೆ ಕಟ್ಟಡಕ್ಕೆ ಸ್ಥಳಾಂತರಿಸಿ, ಮೂಲ ಸೌಕರ್ಯ ಕಲ್ಪಿಸಬೇಕು. ದಲ್ಲಾಳಿಗಳ ಹಾವಳಿಗೆ ಕಡಿವಾಣ ಹಾಕಬೇಕು. ಇಲ್ಲದಿದ್ದರೆ ಆ. 23 ರಂದು ಹೋರಾಟ ಹಮ್ಮಿಕೊಳ್ಳಲಾಗುವುದು.
ವಿಶ್ವಾರಾಧ್ಯ ಬಡಿಗೇರ ಗಂವ್ಹಾರ,
 ಅಧ್ಯಕ್ಷರು ರೈತ ಸಂಘ, ಹಸಿರು ಸೇನೆ ತಾಲೂಕು ಘಟಕ

Advertisement

Udayavani is now on Telegram. Click here to join our channel and stay updated with the latest news.

Next