Advertisement

ನಷ್ಟದಿಂದ ನಲುಗಿದ ಸಂಸ್ಥೆ: ಜೆಟ್‌ ಕುಸಿತ ದುರದೃಷ್ಟಕರ

11:14 PM Apr 03, 2019 | mahesh |

ಜೆಟ್‌ ಏರ್‌ವೇಸ್‌ ಬಿಕ್ಕಟ್ಟು ದಿನ ಕಳೆದಂತೆ ಉಲ್ಬಣಿಸುತ್ತಿದೆ. ಇದೀಗ ಸಂಸ್ಥೆಯಲ್ಲಿ ಬರೀ 15 ವಿಮಾನಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ ಎಂದು ಸ್ವತಃ ವಾಯುಯಾನ ಇಲಾಖೆಯ ಕಾರ್ಯದರ್ಶಿಯೇ ಒಪ್ಪಿಕೊಂಡಿದ್ದಾರೆ. ಚುನಾವಣಾ ಸಮಯದಲ್ಲಿ ಸರಕಾರಕ್ಕಂತೂ ಇದು ಕಹಿಯಾದ ಸುದ್ದಿ. ಜೆಟ್‌ ಸಂಪೂರ್ಣ ಖಾಸಗಿ ಕಂಪೆನಿಯಾಗಿದ್ದರೂ ಅದರ ಅಧಃಪತನ ಸರಕಾರದ ಉದ್ಯಮ ಸ್ನೇಹಿ ಎಂಬ ಹಿರಿಮೆಗೆ ಇನ್ನಿಲ್ಲದ ಹಾನಿ ಉಂಟು ಮಾಡಲಿದೆ.

Advertisement

ಒಂದು ಕಾಲದಲ್ಲಿ 119 ಜೆಟ್‌ ವಿಮಾನಗಳು ಕಾರ್ಯ ನಿರ್ವಹಿಸುತ್ತಿದ್ದವು. ಆದರೆ ಹೆಚ್ಚುತ್ತಿರುವ ಸಾಲದ ಹೊರೆ ಮತ್ತು ನಷ್ಟದಿಂದಾಗಿ ಸಂಸ್ಥೆಯ ಬಳಿ ಈಗ ಸಿಬಂದಿಗಳಿಗೆ ವೇತನ ಪಾವತಿಸಲೂ ಹಣವಿಲ್ಲ. ಪ್ರತಿವಾರ 10-15ರಂತೆ ಜೆಟ್‌ ವಿಮಾನಗಳು ಹಾರಾಟ ಸ್ಥಗಿತಗೊಳಿಸುತ್ತಿವೆ. ಇದೇ ರೀತಿ ಮುಂದುವರಿದರೆ ಪರಿಸ್ಥಿತಿ ಏನಾಗಬಹುದು ಎನ್ನುವುದು ಗೋಡೆ ಮೇಲಿನ ಬರಹದಷ್ಟೇ ನಿಚ್ಚಳ. ಹೀಗಾಗಿ ಜೆಟ್‌ ಇನ್ನೊಂದು ಕಿಂಗ್‌ಫಿಶರ್‌ ಆಗಬಾರದೆಂದು ಸರಕಾರ ಮತ್ತು ಜೆಟ್‌ಗೆ ಸಾಲ ಕೊಟ್ಟಿರುವ ಬ್ಯಾಂಕ್‌ಗಳು ಈಗಾಗಲೇ ಕಾರ್ಯ ಪ್ರವೃತ್ತವಾಗಿವೆ. ಆದರೆ ಪ್ರಸಕ್ತ ಪರಿಸ್ಥಿತಿಯಲ್ಲಿ ಜೆಟ್‌ನ್ನು ಪಾರು ಮಾಡುವುದು ಎಣಿಸಿದಷ್ಟು ಸುಲಭವಲ್ಲ.

ಜೆಟ್‌ ಬಿಕ್ಕಟ್ಟಿನಿಂದ ಪ್ರತ್ಯಕ್ಷವಾಗಿ 16,000 ಮತ್ತು ಪರೋಕ್ಷವಾಗಿ ಲಕ್ಷಾಂತರ ನೌಕರಿಗಳ ಮೇಲೆ ಪ್ರತಿಕೂಲ ಪರಿಣಾಮವಾಗಲಿದೆ. ಜತೆಗೆ ಬ್ಯಾಂಕುಗಳು ನೀಡಿರುವ ಸುಮಾರು 6000 ಕೋ. ರೂ. ಸಾಲದ ಮರು ವಸೂಲಿ ಹೇಗೆ ಎಂಬ ಚಿಂತೆ ಸರಕಾರಕ್ಕೆ. ಕಿಂಗ್‌ಫಿಶರ್‌ ಇದೇ ರೀತಿಯ ಪರಿಸ್ಥಿಯನ್ನು ಎದುರಿಸಿ ಮಾಲಕ ವಿದೇಶಕ್ಕೆ ಪಲಾಯನ ಮಾಡಿದ ಕಹಿ ಅನುಭವ ಎದುರಿಗೇ ಇರುವುದರಿಂದ ಜೆಟ್‌ಗೆ ಹೀಗಾಗದಂತೆ ತಡೆಯಲು ನಾನಾ ರೀತಿಯ ಕ್ರಿಯಾ ಯೋಜನೆಗಳನ್ನು ರೂಪಿಸಲಾಗಿದೆ. ಆದರೆ ಇವುಗಳಲ್ಲಿ ಯಾವುದು ಸಫ‌ಲವಾಗಬಹುದು ಎನ್ನುವುದು ಸರಕಾರಕ್ಕೆ ಗೊತ್ತಿಲ್ಲ. ಜೆಟ್‌ ಸ್ಥಾಪಕ ನರೇಶ್‌ ಗೋಯಲ್‌ ಮತ್ತು ಅವರ ಪತ್ನಿ ಈಗಾಗಲೇ ನಿರ್ದೇಶಕ ಮಂಡಳಿಯಿಂದ ನಿರ್ಗಮಿಸಿ ಅಷ್ಟರಮಟ್ಟಿಗೆ ಸಂಸ್ಥೆಯನ್ನು ಪುನರುಜ್ಜೀವಗೊಳಿಸುವ ಪ್ರಯತ್ನಗಳಿಗೆ ಹಾದಿ ಮಾಡಿಕೊಟ್ಟಿದ್ದಾರೆ. ದಿವಾಳಿ ನಿಯಮವನ್ನು ಅನ್ವಯಿಸಿ ಕೋರ್ಟಿನಲ್ಲಿ ಪ್ರಕರಣವನ್ನು ಇತ್ಯರ್ಥಗೊಳಿಸುವ ಅವಕಾಶ ಇದ್ದರೂ ಚುನಾವಣಾ ಕಾಲದಲ್ಲಿ ಪ್ರತಿಷ್ಠಿತ ಸಂಸ್ಥೆಯೊಂದನ್ನು ದಿವಾಳಿ ಎಂದು ಘೋಷಿಸುವುದು ರಾಜಕೀಯವಾಗಿ ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೆ ಸಮ ಎಂಬ ಕಾರಣಕ್ಕೆ ಸರಕಾರ ಈ ದಿಕ್ಕಿನಲ್ಲಿ ಯೋಚಿಸಿಲ್ಲ.

ಈ ಮಧ್ಯೆ ಜೆಟ್‌ ಏರ್‌ವೆಸ್‌ನ್ನು ಪಾರು ಮಾಡುವ ಸಲುವಾಗಿ ಬ್ಯಾಂಕ್‌ಗಳ ಒಕ್ಕೂಟ ರಚನೆಯ ಪ್ರಸ್ತಾವ ಇಡಲಾಗಿದೆ. ಕಿಂಗ್‌ಫಿಶರ್‌ ಸಾಲದ ಸುಳಿಯಲ್ಲಿ ತತ್ತರಿಸುತ್ತಿರುವಾಗಲೂ ಇದೇ ರೀತಿ 17 ಬ್ಯಾಂಕುಗಳು ಒಕ್ಕೂಟವನ್ನು ರಚಿಸಿ 9000 ಕೋ. ರೂ. ಹೊಸ ಸಾಲ ಮಂಜೂರು ಮಾಡಲಾಗಿತ್ತು. ಅನಂತರ ಏನಾಯಿತು ಎನ್ನುವುದು ಎಲ್ಲರಿಗೂ ಗೊತ್ತಿದೆ. ಈ ಹಿನ್ನೆಲೆಯಲ್ಲಿ ಜೆಟ್‌ಗೆ ಹೊಸ ಸಾಲ ನೀಡುವಾಗ ಬ್ಯಾಂಕ್‌ಗಳು ಎಚ್ಚರಿಕೆಯ ಹೆಜ್ಜೆ ಇಡುತ್ತಿವೆ.

1990ರ ದಶಕದಲ್ಲಿ ವಾಯುಯಾನ ಕ್ಷೇತ್ರವನ್ನು ಖಾಸಗಿ ವಲಯಕ್ಕೆ ತೆರೆದ ಸಂದರ್ಭದಲ್ಲಿ ಪ್ರಾರಂಭವಾದ ಜೆಟ್‌ ದೇಶದ ಮೂರು ಅಗ್ರ ವಾಯುಯಾನ ಸಂಸ್ಥೆಗಳಲ್ಲಿ ಒಂದಾಗಿತ್ತು. ಆರಂಭದಲ್ಲಿ ಎಲ್ಲವೂ ಸುಸೂತ್ರವಾಗಿ ನಡೆಯುತ್ತಿತ್ತು. ಜೆಟ್‌ ಸೇವೆಯೂ ಅಂತಾರಾಷ್ಟ್ರೀಯ ದರ್ಜೆಗನು ಗುಣವಾಗಿತ್ತು. ಪ್ರಯಾಣಿಕರಿಗೂ ಜೆಟ್‌ ಮೇಲೆ ಆದರಾಭಿಮಾನವಿತ್ತು. ಆದರೆ ಕಿಂಗ್‌ಫಿಶರ್‌ ಮಾದರಿಯಲ್ಲೇ ಜೆಟ್‌ ಕೂಡಾ ವಿದೇಶಿ ವಾಯುಯಾನ ಕಂಪೆನಿಗಳ ಸ್ಪರ್ಧೆಯನ್ನು ಎದುರಿಸುವಲ್ಲಿ ಎಡವಿತು. ದುಬಾರಿ ವೇತನ, ಹೆಚ್ಚಿದ ಇಂಧನ ಬೆಲೆ ಮತ್ತು ತೆರಿಗೆ ಹಾಗೂ 2000 ಇಸವಿಯಿಂದೀಚೆಗೆ ಪ್ರಾರಂಭವಾದ ದರ ಸಮರ ಇವೆಲ್ಲ ಭಾರತದ ವಾಯುಯಾನ ಸಂಸ್ಥೆಗಳಿಗೆ ಮಾರಕವಾಗಿ ಪರಿಣಮಿಸುತ್ತಿದೆ. ಸರಕಾರಿ ಸ್ವಾಮ್ಯದ ಏರ್‌ ಇಂಡಿಯಾ ಕೂಡಾ ಆರ್ಥಿಕ ಬಿಕ್ಕಟ್ಟಿನಿಂದ ಬಸವಳಿಯುತ್ತಿದೆ. ಇನ್ನುಳಿದ ಖಾಸಗಿ ವಿಮಾನ ಯಾನ ಸಂಸ್ಥೆಗಳ ಆರ್ಥಿಕ ಸ್ಥಿತಿಯೂ ತೃಪ್ತಿಕರವಾಗಿಲ್ಲ ಎನ್ನುವ ಅಂಶ ಕಳವಳಕಾರಿಯಾದದ್ದು.

Advertisement

ದೇಶದ ಪ್ರತಿಷ್ಠಿತ ವಿಮಾನಯಾನ ಕಂಪೆನಿಯಾಗಿದ್ದ ಜೆಟ್‌ ಏರ್‌ವೆàಸ್‌ಗೆ ಈ ದುರ್ಗತಿ ಬಂದಿರುವುದು ನಿಜಕ್ಕೂ ಬೇಸರದ ಸಂಗತಿ. ಸಂಪೂರ್ಣ ದೇಶೀಯ ಬಂಡವಾಳದಲ್ಲಿ ಪ್ರಾರಂಭವಾದ ಈ ಕಂಪೆನಿ ಹೊಸ ಉದ್ಯಮಗಳನ್ನು ಪ್ರಾರಂಭಿಸುವವರಿಗೆ ಒಂದು ಸ್ಫೂರ್ತಿ ಕತೆಯಂತಿತ್ತು. ಅದುವೇ ಈಗ ನೆಲಕಚ್ಚುತ್ತಿರುವುದು ಒಟ್ಟಾರೆ ದೇಶದ ಆರ್ಥಿಕತೆ ಅಭಿವೃದ್ಧಿಯ ದೃಷ್ಟಿಯಿಂದಲೂ ನಕಾರಾತ್ಮಕವಾದ ಬೆಳವಣಿಗೆ. ಈ ಸಂದರ್ಭದಲ್ಲಿ ನಷ್ಟದಲ್ಲಿರುವ ವಿಮಾನ ಯಾನ ಸಂಸ್ಥೆಗಳನ್ನು ಪಾರು ಮಾಡಲು ಯಾವೆಲ್ಲ ಮಾರ್ಗೋಪಾಯಗಳನ್ನು ಕಂಡುಕೊಳ್ಳುವುದಕ್ಕಿಂತಲೂ ಒಟ್ಟಾರೆಯಾಗಿ ವಿಮಾನ ಯಾನ ಕ್ಷೇತ್ರವನ್ನು ಬಿಕ್ಕಟ್ಟಿನಿಂದ ಪಾರು ಮಾಡುವ ಸಮಗ್ರ ನೀತಿಯೊಂದನ್ನು ರಚಿಸುವುದು ಅಗತ್ಯ. ಮುಂಬರುವ ಸರಕಾರ ಈ ನಿಟ್ಟಿನಲ್ಲಿ ಚಿಂತನೆ ನಡೆಸಲಿ.

Advertisement

Udayavani is now on Telegram. Click here to join our channel and stay updated with the latest news.

Next