ದೇಶದ ಎರಡನೇ ಅತಿ ದೊಡ್ಡ ವಾಯುಯಾನ ಸಂಸ್ಥೆಯಾಗಿರುವ ಜೆಟ್ ಏರ್‌ವೇಸ್ ಎದುರಿಸುತ್ತಿರುವ ತೀವ್ರ ಹಣಕಾಸಿನ ಬಿಕ್ಕಟ್ಟು ವಾಯುಯಾನ ಕ್ಷೇತ್ರದಲ್ಲಿ ತಳಮಳಕ್ಕೆ ಕಾರಣವಾಗಿದೆ. ಸುಮಾರು 6 ಸಾವಿರ ಕೋಟಿ ಸಾಲದ ಸುಳಿಯಲ್ಲಿ ಸಿಲುಕಿರುವ ಜೆಟ್ ಏರ್‌ವೇಸ್ ಈಗಾಗಲೇ 19 ಬೋಯಿಂಗ್ ದರ್ಜೆಯ ವಿಮಾನಗಳ ಸಂಚಾರ ರದ್ದುಗೊಳಿಸಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ವಿಮಾನಗಳು ವಿಶ್ರಾಮಗೃಹ ಸೇರುವ ಸಾಧ್ಯತೆಗಳು ಕಾಣಿಸುತ್ತಿದ್ದು, ಕಿಂಗ್‌ಫಿಶರ್ ಏರ್‌ಲೈನ್ಸ್‌ಗೆ ಆಗಿರುವ ಗತಿ ಜೆಟ್ ಏರ್‌ವೆàಸ್‌ಗೂ ಆಗಲಿದೆಯೇ ಎಂಬ ಆತಂಕ ಕಾಡುತ್ತಿದೆ. ಜೆಟ್ ಏರ್‌ವೆàಸ್ ಎಂದಲ್ಲ ದೇಶದ ವಾಯುಯಾನ ಕ್ಷೇತ್ರದ ಎಲ್ಲ ಪ್ರಮುಖ ಸಂಸ್ಥೆಗಳು ಈಗ ಬಿಕ್ಕಟ್ಟು ಎದುರಿಸುತ್ತಿವೆ. ಅತಿ ದೊಡ್ಡ ಸಂಸ್ಥೆ ಎಂಬ ಹಿರಿಮೆಯಿರುವ ಸರಕಾರಿ ಸ್ವಾಮ್ಯದ ಇಂಡಿಯನ್ ಏರ್‌ಲೈನ್ಸ್ ನಷ್ಟ ಅನುಭವಿಸಲು ತೊಡಗಿ ವರ್ಷಗಳೇ ಕಳೆದವು. ಸರಕಾರ ಆಗಾಗ ನೀಡುವ ನೆರನಿಂದಾಗಿ ಅದಿನ್ನೂ ಹಾರಾಡುತ್ತಿದೆ. ಆದರೆ ಖಾಸಗಿ ವಲಯದ ಸಂಸ್ಥೆಗಳಿಗೆ ಸರಕಾರ ಹೀಗೆ ನೇರವಾಗಿ ಹಣಕಾಸಿನ ನೆರವು ನೀಡಲು ಅಸಾಧ್ಯವಾಗಿರುವ ಕಾರಣ ಅವುಗಳ ಭವಿಷ್ಯ ಡೋಲಾಯಮಾನವಾಗಿದೆ. ವಾಯುಯಾನ ಕ್ಷೇತ್ರದ ಈ ಗಂಭೀರ ಪರಿಸ್ಥಿತಿ ಒಂದಕ್ಕಿಂತ ಹೆಚ್ಚು ಕಾರಣಗಳಿಗೆ ಚಿಂತೆಗೆ ಕಾರಣವಾಗಿದೆ.
ವಾಯುಯಾನ ಕ್ಷೇತ್ರವನ್ನು ಖಾಸಗಿ ವಲಯಕ್ಕೆ ತೆರೆದುಕೊಂಡ ಬಳಿಕ ಈ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆಯಾಗಿರುವುದು ನಿಜ. ಶ್ರೀಮಂತರು ಮತ್ತು ಅತ್ಯುನ್ನತ ಸ್ಥಾನದಲ್ಲಿರುವವರಿಗೆ ಮಾತ್ರ ವಿಮಾನ ಪ್ರಯಾಣ ಭಾಗ್ಯ ಎಂಬಲ್ಲಿಂದ ಜನಸಾಮಾನ್ಯರು ಕೂಡಾ ವಿಮಾನದಲ್ಲಿ ಪ್ರಯಾಣಿಸಬಹುದು ಎಂಬಲ್ಲಿಗೆ ತಲುಪಲು ವಾಯುಯಾನ ಕ್ಷೇತ್ರಕ್ಕೆ ಖಾಸಗಿ ಸಂಸ್ಥೆಗಳು ಪ್ರವೇಶಿಸಿದ್ದೇ ಕಾರಣ. ಖಾಸಗಿಯವರಿಂದಾಗಿ ವಿಮಾನ ಸೇವೆಯ ಗುಣಮಟ್ಟದಲ್ಲೂ ಬಹಳ ಸುಧಾರಣೆಯಾಗಿದೆ. ಜೆಟ್, ಕಿಂಗ್‌ಫಿಶರ್‌ನಂಥ ಸಂಸ್ಥೆಗಳು ಯಾವ ವಿದೇಶಿ ವಿಮಾನ ಯಾನ ಸಂಸ್ಥೆಗಳಿಗೆ ಕಡಿಮೆಯಿಲ್ಲದ ಸೇವೆ ಮತ್ತು ಸೌಲಭ್ಯ ನೀಡಿ ಮೆಚ್ಚುಗೆಗೆ ಪಾತ್ರವಾಗಿದ್ದವು. ಇದೇ ವೇಳೆ ಗ್ರಾಹಕರನ್ನು ಆಕರ್ಷಿಸಲು ಅವುಗಳ ನಡುವೆ ತೀವ್ರ ದರ ಪೈಪೋಟಿಯೂ ಇದೆ. ಈ ದರ ಸಮರವೇ ಈಗ ವಿಮಾನಯಾನ ಸಂಸ್ಥೆಗಳಿಗೆ ಮುಳುವಾಗುತ್ತಿದೆ. ಜತೆಗೆ ಏರುತ್ತಿರುವ ಇಂಧನ ಬೆಲೆ, ಅಸ್ಥಿರ ಮಾರುಕಟ್ಟೆ, ಡಾಲರ್ ಎದುರು ಕುಸಿಯುತ್ತಿರುವ ರೂಪಾಯಿ ಮೌಲ್ಯ, ವಿದೇಶಿ ಕಂಪೆನಿಗಳಿಂದ ಎದುರಾಗಿರುವ ಸ್ಪರ್ಧೆ ಈ ಮುಂತಾದ ಅಂಶಗಳು ದೇಶೀ ಕಂಪೆನಿಗಳು ಕಂಗೆಡುವಂತೆ ಮಾಡಿವೆ.
ಜೆಟ್ ಏರ್‌ವೆàಸ್ ವಿಚಾರದಲ್ಲೂ ಇದೇ ಆಗಿದೆ. ಭಾರೀ ಸಂಖ್ಯೆಯಲ್ಲಿರುವ ಸಿಬಂದಿ, ಅವರಿಗೆ ನೀಡುತ್ತಿರುವ ದೊಡ್ಡ ಮೊತ್ತದ ಸಂಬಳ, ಲಾಭದ ಪ್ರಮಾಣದಲ್ಲಿ ಇಳಿಕೆ ಈ ಮುಂತಾದ ಕಾರಣಗಳಿಂದ ಜೆಟ್ ಕುಂಟುತ್ತಿದೆ. ಪ್ರಸ್ತುತ ಕಂಪೆನಿಯಲ್ಲಿ 23,000 ಸಿಬಂದಿಗಳಿದ್ದು, ಇವರ ವೇತನ ವಿಲೇವಾರಿಯೇ ಕಂಪೆನಿಗೆ ದೊಡ್ಡ ಹೊರೆಯಾಗಿ ಪರಿಣಮಿಸಿದೆ. ಕಿಂಗ್‌ಫಿಶರ್ ಕೂಡಾ ಈ ಮಾದರಿಯ ಕಾರಣಗಳಿಂದಲೇ ನೆಲಕಚ್ಚಿರುವುದರಿಂದ ಜೆಟ್ ಭವಿಷ್ಯವೂ ಗೋಡೆ ಮೇಲಿನ ಬರಹದಂತೆ ಸ್ಪಷ್ಟವಾಗುತ್ತಿದೆ ಎನ್ನುತ್ತಿರುವ ಮಾರುಕಟ್ಟೆ ತಜ್ಞರ ಎಚ್ಚರಿಕೆಯನ್ನು ಈ ಹಂತದಲ್ಲಾದರೂ ಸರಕಾರ ಗಂಭೀರವಾಗಿ ಪರಿಗಣಿಸುವ ಅಗತ್ಯವಿದೆ. ಖಾಸಗಿ ವಲಯಕ್ಕೆ ಸಂಬಂಧಪಟ್ಟಂತೆ ಸರಕಾರದ್ದೇನಿದ್ದರೂ ನೀತಿ ರೂಪಣೆಯ ಪಾತ್ರವಷ್ಟೇ ಎಂದು ಹೇಳಿ ಕೈಕೊಡವಿಕೊಳ್ಳುವ ಸಂದರ್ಭ ಇದಲ್ಲ.
ಇದು ಚುನಾವಣಾ ಕಾಲವಾಗಿರುವುದರಿಂದ ಜೆಟ್ ನೆಲ ಕಚ್ಚದಂತೆ ನೋಡಿಕೊಳ್ಳುವುದು ಸರಕಾರದ ಪಾಲಿಗೆ ಅನಿವಾರ್ಯವೂ ಹೌದು. ಏಕೆಂದರೆ ದೇಶದ ವಾಯುಯಾನ ಕ್ಷೇತ್ರ 7.5 ದಶಲಕ್ಷ ಮಂದಿಗೆ ನೇರ ಮತ್ತು ಪರೋಕ್ಷವಾಗಿ ನೌಕರಿ ನೀಡಿದೆ. ವಾಯುಯಾನ ಕ್ಷೇತ್ರದಲ್ಲಾಗುವ ಯಾವುದೇ ಪಲ್ಲಟ ಈ ನೌಕರಿಗಳ ಮೇಲೆ ನೇರ ಪರಿಣಾಮ ಬೀರುತ್ತದೆ. ಹೀಗಾದರೆ ಸಹಜವಾಗಿಯೇ ಬಿಸಿ ತಟ್ಟಲಿದೆ. ಈಗಲೇ ನಿರುದ್ಯೋಗ ನಿವಾರಣೆ ಮಾಡಿಲ್ಲ ಎಂಬ ಆರೋಪ ಎದುರಿಸುತ್ತಿರುವ ಕೇಂದ್ರಕ್ಕೆ ಇದು ದುಬಾರಿಯಾಗಿ ಪರಿಣಮಿಸಬಹುದು. ವಾಯು ಯಾನ ಕ್ಷೇತ್ರದ ಹಿಂಜರಿಕೆ ಈ ಕ್ಷೇತ್ರದ ಮಾತ್ರವಲ್ಲದೆ ಒಟ್ಟಾರೆಯಾಗಿ ಎಲ್ಲ ವಿದೇಶಿ ಹೂಡಿಕೆಗಳ ಮೇಲೂ ಪ್ರತಿಕೂಲ ಪರಿಣಾಮ ಬೀರುವಂಥದ್ದು. ಹಾಗೆಂದು ಜೆಟ್ ಏರ್‌ವೆàಸನ್ನು ಸಾಲದ ಸುಳಿಯಿಂದ ಪಾರು ಮಾಡಲು ಬ್ಯಾಂಕ್‌ಗಳ ಒಕ್ಕೂಟ ರಚಿಸಿ ಹೊಸ ಸಾಲ ನೀಡುವುದು ತಾತ್ಕಾಲಿಕ ಉಪಶಮನವಾಗಬಹುದಷ್ಟೆ. ಕಿಂಗ್‌ಫಿಶರ್ ಏರ್‌ಲೈನ್ಸ್ ಹೀಗೆ ಸಾಲ ಪಡೆದು ಮುಳುಗಿಸಿ ಹೋದ ಉದಾಹರಣೆ ಕಣ್ಣೆದುರಿಗೇ ಇರುವಾಗ ಇನ್ನೊಂದು ದುಸ್ಸಾಹಸಕ್ಕೆ ಮುಂದಾಗುವುದು ಸರಿಯಲ್ಲ. ಇದರ ಬದಲಾಗಿ ಇಡೀ ವಾಯುಯಾನ ಕ್ಷೇತ್ರವನ್ನು ಕಾಪಾಡುವ ನಿಟ್ಟಿನಲ್ಲಿ ದೊಡ್ಡ ಮಟ್ಟದ ಸರ್ಜರಿಗೆ ಮುಂದಾಗಬೇಕು.