ಬೆಂಗಳೂರು: ರಾಮನಗರದ ಕಪಾಲಬೆಟ್ಟದ ಗೋಮಾಳದಲ್ಲಿ ಅನಧಿಕೃತವಾಗಿ ಯೇಸು ಕ್ರಿಸ್ತರ ಪ್ರತಿಮೆ ಸ್ಥಾಪಿಸಲಾಗುತ್ತಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ.
ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಯೇಸುಕ್ರಿಸ್ತರ ಪ್ರತಿಮೆ ನಿರ್ಮಾಣಕ್ಕೆ ಅನಧಿಕೃತವಾಗಿ ವಿದ್ಯುತ್ ಸಂಪರ್ಕ, ಬೋರ್‌ವೆಲ್ ಕೊರೆಯಲಾಗಿದೆ. 2ಕಿ. ಮೀ. ರಸ್ತೆಯನ್ನೂ ಸಹ ಮಾಡಲಾಗಿದೆ. ಎಲ್ಲವನ್ನೂ ಅನಧಿಕೃತವಾಗಿ ಮಾಡಲಾಗಿದೆ ಎಂದು ಅಶೋಕ್ ಹೇಳಿದ್ದಾರೆ.
ಈಗಾಗಲೇ ಅಲ್ಲಿನ ಚಟುವಟಿಕೆಗಳ ಬಗ್ಗೆ ರಾಮನಗರ ಜಿಲ್ಲಾಧಿಕಾರಿ ಮತ್ತು ತಹಶೀಲ್ದಾರ್ ಅವರಿಂದ ವರದಿ ಕೇಳಿದ್ದೇನೆ. ಅಧಿಕಾರಿಗಳು ನನ್ನನ್ನು ಭೇಟಿ ಮಾಡಿ ಮೌಖೀಕ ವರದಿ ನೀಡಿದ್ದಾರೆ. ಲಿಖೀತ ರೂಪದಲ್ಲಿ ವಿವರವಾದ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ವರದಿ ಬಂದ ಅನಂತರ ಯಾವ ಕ್ರಮ ಕೈಗೊಳ್ಳಬೇಕೆಂದು ಸರಕಾರ ನಿರ್ಧರಿಸಲಿದೆ. ಇನ್ನು ಯೇಸುಕ್ರಿಸ್ತರ ಪ್ರತಿಮೆ ನಿರ್ಮಾಣ ಕಾರ್ಯವನ್ನು ಟ್ರಸ್ಟ್‌ನವರೇ ಸ್ಥಗಿತಗೊಳಿಸಿದ್ದಾರೆ ಎಂದು ಹೇಳಿದರು.
ಮಹಾರಾಷ್ಟ್ರ ಗಡಿ ವಿಚಾರದಲ್ಲಿ ಮಹಾರಾಷ್ಟ್ರ ಸರಕಾರ ಅನಗತ್ಯ ಕ್ಯಾತೆ ತೆಗೆಯುತ್ತಿದೆ. ಗಡಿ ಸಮಸ್ಯೆ 30-40ವರ್ಷಗಳ ಹಿಂದೆಯೇ ತೀರ್ಮಾನ ಆಗಿದೆ. ಮಹಾರಾಷ್ಟ್ರದ್ದು ಹುಚ್ಚರ ಸರಕಾರ. ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಗೌರವಯುತವಾಗಿ ಆಡಳಿತ ನಡೆಸಲಿ. ಮಹಾರಾಷ್ಟ್ರದ ಗೊಡ್ಡು ಬೆದರಿಕೆಗೆ ನಾವು ಬೆದರುವುದಿಲ್ಲ. ಮಹಾರಾಷ್ಟ್ರ ಸರಕಾರ ಗೊಂದಲ ಸೃಷ್ಟಿಸುವ ಪ್ರಯತ್ನ ಮಾಡುತ್ತಿದೆ. ರಾಜ್ಯದ ಒಂದಿಂಚೂ ಜಾಗವನ್ನು ಮಹಾರಾಷ್ಟ್ರಕ್ಕೆ ಬಿಟ್ಟು ಕೊಡುವುದಿಲ್ಲ. ಮಹಾರಾಷ್ಟ್ರಕ್ಕೆ ಯಾವ ರೀತಿಯ ಉತ್ತರ ಕೊಡಬೇಕೋ ಕೊಡುತ್ತೇವೆ ಎಂದು ಅಶೋಕ್ ಹೇಳಿದರು.