ಬೆಂಗಳೂರು: ರಾಮನಗರದ ಜಿಲ್ಲೆಯ ಕಪಾಲ ಬೆಟ್ಟದಲ್ಲಿ ಜಗತ್ತಿನ ಅತೀ ಎತ್ತರದ ಏಸು ಪ್ರತಿಮೆ ನಿರ್ಮಾಣಕ್ಕೆ ಮುಂದಾಗಿರುವುದನ್ನು ವಿರೋಧಿಸಿ ಸೋಮವಾರ ಹಿಂದೂ ಜಾಗರಣ ವೇದಿಕೆ ಕನಕಪುರ ಚಲೋ ಮೂಲಕ ಪ್ರತಿಭಟನೆ ನಡೆಸಿದ್ದು, ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಈ ಸಂದರ್ಭದಲ್ಲಿ ಸಾಥ್ ನೀಡಿದ್ದಾರೆ.
ಕಪಾಲಬೆಟ್ಟದಲ್ಲಿ ಏಸು ಪ್ರತಿಮೆ ನಿರ್ಮಾಣ ವಿರೋಧಿಸಿ ಹಿಂದೂ ಜಾಗರಣ ವೇದಿಕೆಯ ನೂರಾರು ಕಾರ್ಯಕರ್ತರು ಕನಕಪುರ ಅಯ್ಯಪ್ಪಸ್ವಾಮಿ ದೇವಾಲಯದಿಂದ ಕಾಲ್ನಡಿಗೆಯಲ್ಲಿ ಮೆರವಣಿಗೆ ಹೊರಟು ಪ್ರತಿಭಟನೆ ನಡೆಸಿದರು.
ಡಿಕೆ ಶಿವಕುಮಾರ್ ಕೋಟೆಯಲ್ಲಿ ಕಲ್ಲಡ್ಕ ಪ್ರಭಾಕರ್ ಭಟ್ ಗುಡುಗು:
ನಾವು ಶಾಂತಿ ಕದಡಲು ಇಲ್ಲಿಗೆ ಬಂದಿಲ್ಲ. ನಾನು ಶ್ರೀರಾಮುಲು ಮಗಳ ಮದುವೆಯಲ್ಲಿ ನಿಮ್ಮನ್ನು ಭೇಟಿಯಾಗಿದ್ದೆ. ಹಾಗಾದರೆ ನಾನು ಯಾರು ಅಂತ ನಿಮಗೆ ಗೊತ್ತಿಲ್ವಾ ಡಿಕೆ ಶಿವಕುಮಾರ್ ಅವರೇ. ಸುಳ್ಳು, ಮೋಸ ವಂಚನೆಯಿಂದ ಎಷ್ಟು ದಿನ ಇರುತ್ತೀರಿ? ವೋಟ್ ಬ್ಯಾಂಕ್ ಗಾಗಿ ಯೇಸು ಪ್ರತಿಮೆ ನಿರ್ಮಾಣಕ್ಕೆ ಮುಂದಾಗಿದ್ದೀರಾ? ಅಮೆರಿಕ, ಇಂಗ್ಲೆಂಡ್ ನಲ್ಲಿ ಬೇಕಾದರೆ ಪ್ರತಿಮೆ ನಿರ್ಮಾಣ ಮಾಡಿ. ಆದರೆ ಇಲ್ಲಿ ಅದಕ್ಕೆ ನಾವು ಅವಕಾಶ ಕೊಡುವುದಿಲ್ಲ ಎಂದು ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಕನಕಪುರ ಚಲೋ ರಾಲಿಯಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದರು.
ಬಲಿದಾನಕ್ಕೂ ಬೇಕಾದರೆ ನಾವು ಸಿದ್ದರಿದ್ದೇವೆ. ಸಂಸ್ಕೃತಿಗೆ ಕಲ್ಲು ಹಾಕಲು ಹೊರಟಿದ್ದೀರಲ್ಲಾ ಅದಕ್ಕೆ ನಮ್ಮ ವಿರೋಧವಿದೆ. ಹಿಂದೂ ಸಮಾಜವನ್ನು ಒಡೆಯುವ ಕೆಲಸಕ್ಕೆ ಮುಂದಾಗಿದ್ದೀರಿ. ಕಪಾಲ ಬೆಟ್ಟದಲ್ಲಿ ಬುದ್ಧ, ಪೇಜಾವರಶ್ರೀಗಳ ಪ್ರತಿಮೆ ನಿರ್ಮಾಣ ಮಾಡಿ. ದೇಶದಲ್ಲಿರುವ ಹಿಂದೂಗಳ ಜಾಗದಲ್ಲಿ ಚರ್ಚ್, ಮಸೀದಿ ನಿರ್ಮಾಣ ಮಾಡಲು ಅವಕಾಶ ಕೊಟ್ಟಿದ್ದೇವೆ ಎಂದು ಕಲ್ಲಡ್ಕ ಗುಡುಗಿದ್ದಾರೆ.
ಪ್ರತಿಭಟನೆಗೆ ತಲೆಕಡಿಸಿಕೊಳ್ಳಲ್ಲ:
ಕನಕಪುರದ ಕಪಾಲಬೆಟ್ಟದಲ್ಲಿ ಏಸು ಪ್ರತಿಮೆ ನಿರ್ಮಾಣ ವಿರೋಧಿಸಿ ಹಿಂದೂ ಜಾಗರಣ ವೇದಿಕೆಯ ಕನಕಪುರ ಚಲೋ ರಾಲಿಗೆ ಪ್ರತಿಕ್ರಿಯೆ ನೀಡಿರುವ ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಡಿಕೆ ಶಿವಕುಮಾರ್, ಪ್ರತಿಭಟನೆಗೆ ನಾನು ತಲೆ ಕೆಡಿಸಿಕೊಳ್ಳಲ್ಲ. ಅವರೆಲ್ಲ ಎಷ್ಟು ಬೇಕಾದ್ರೂ ಬೊಬ್ಬೆ ಹೊಡೆಯಲಿ. ನಾನು ನನ್ನ ಗ್ರಾಮದ ಜನರ ಜತೆಗೆ ಇದ್ದೇನೆ. ಬಿಜೆಪಿ, ಆರ್ ಎಸ್ ಎಸ್ ಎಷ್ಟು ಬೇಕಾದ್ರೂ ಪ್ರತಿಭಟನೆ ನಡೆಸಲಿ ಎಂದು ತಿಳಿಸಿದರು.