ವಾಡಿ: ಭೂಮಿ ಮೇಲಿನ ಮಾನವನ ಬದುಕು ಅನೇಕ ರೀತಿಯ ಶೋಷಣೆಗಳ ಬಲೆಗೆ ಸಿಲುಕಿ ಬಂಧನಕ್ಕೀಡಾಗಿದೆ. ಇದರಿಂದ ಮುಕ್ತಿ ಹೊಂದಲು, ಬಂಧನಗಳಿಂದ ನಮ್ಮನ್ನು ಬಿಡುಗಡೆಗೊಳಿಸಲು ಶಾಂತಿಪ್ರಿಯ ಯೇಸುವಿನಿ ಜನನವಾಗಿದೆ ಎಂದು ಕ್ರೈಸ್ತ ಧರ್ಮ ಪ್ರಚಾರಕ ಎಸ್.ಆರ್.ಆನಂದ ಹೇಳಿದರು.
ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಗುರುವಾರ ಪಟ್ಟಣದ ಸಂತ ಅಂಬ್ರೂಸ್ ಕಾನ್ವೆಂಟ್ ಶಾಲೆಯಲ್ಲಿ ಪ್ರೌಢ ಶಾಲೆ ವಿದ್ಯಾರ್ಥಿಗಳಿಂದ ಏರ್ಪಡಿಸಲಾಗಿದ್ದ ಕ್ರೈಸ್ತ ಸಂಪ್ರದಾಯದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಧರೆಯ ಮೇಲೆ ಕುರಿಗಾಹಿಯಾಗಿದ್ದ ಜೋಸೆಫ್ ಮತ್ತು ಮರಿಯಳು ದಂಪತಿಗೆ ಸಂದೇಶವೊಂದನ್ನು ರವಾನಿಸಿದ ದೇವಧೂತರು, ಪಾಪ ಕರ್ಮಗಳಿಂದ ಮಾನವ ಕುಲ ಬಿಡುಗಡೆಗೊಳಿಸುವ ಉದ್ದೇಶದಿಂದ ನಿಮಗೊಂದು ಮಗುವಿನ ಜನನವಾಗುತ್ತದೆ. ಆತನಿಗೆ ಯೇಸು ಎಂದು ನಾಮಕರಣ ಮಾಡಬೇಕು ಎನ್ನುತ್ತಾರೆ. ಪ್ರತಿಯೊಬ್ಬರ ತಪ್ಪುಗಳನ್ನು ಕ್ಷಮಿಸುವ ದಯಾಳು ನಮ್ಮ ಗೆಳೆಯನಾಗಿ ನಮ್ಮೊಂದಿಗೆ ಬದುಕಲು ಬರುತ್ತಿದ್ದಾನೆ ಎಂದು ಹೇಳಿ ಹೋಗುತ್ತಾರೆ. ಪರಿಣಾಮ ಕುರಿ ಕಾಯುವ ಕುರುಬರ ಕುಟುಂಬದ ಹಟ್ಟಿಯಲ್ಲಿ ಯೇಸು ಜನ್ಮವೆತ್ತುತ್ತಾರೆ ಎಂದು ಹೇಳಿದರು.
ಧರ್ಮ ಪ್ರಚಾರಕ ಜಾರ್ಜ್ ಪ್ರಕಾಶ ಮಾತನಾಡಿ, ಮನುಷ್ಯರ ತಪ್ಪುಗಳನ್ನು ಮನ್ನಿಸಿ ಹೊಸ ಬದುಕು ಕಟ್ಟಿಕೊಡುವಾತನೇ ದೇವರು. ಪ್ರೀತಿ, ಕರುಣೆ, ಮಮತೆ, ದಯೆ ತೋರುವ ಜತೆಗೆ ಕ್ಷಮಿಸುವ ಹೃದಯವಂತನೇ ದೇವರಾಗುತ್ತಾನೆ. ಅಂತಹ ಗುಣಗಳನ್ನು ಹೊತ್ತು ಭೂಮಿಗೆ ಬಂದ ಯೇಸುಸ್ವಾಮಿ ನಮ್ಮ ಬದುಕುಗೆ ಬೆಳಕು ನೀಡಿದ್ದಾರೆ ಎಂದರು.
ಸಂತ ಅಂಬ್ರೂಸ್ ಕಾನ್ವೆಂಟ್ ಶಾಲೆ ಮುಖ್ಯ ಶಿಕ್ಷಕರಾದ ಸಿಸ್ಟರ್ ಗ್ರೇಸಿ, ಸಿಸ್ಟರ್ ತೆಕಲಾಮೇರಿ, ಡಾನ್‌ಬಾಸ್ಕೋ, ಪ್ರಕಾಶ, ಇಮಾನ್ವೆಲ್, ನಾಸೀರ ಹುಸೇನ ಹಾಗೂ ಶಿಕ್ಷಕರು, ಪೋಷಕರು ಪಾಲ್ಗೊಂಡಿದ್ದರು. ಇದೇ ವೇಳೆ ವಿದ್ಯಾರ್ಥಿಗಳು ಯೇಸು ಜನನ ಪ್ರಸಂಗದ ಕುರಿತು ಕಿರು ನಾಟಕ ಪ್ರದರ್ಶಿಸಿದರು. ಕ್ರಿಸ್ಮಸ್ ಹಬ್ಬ ಬಂತು ಊರೆಗೆಲ್ಲ ಹರ್ಷ ತಂದಿತು ಎಂಬ ಹಾಡಿಗೆ ಮಕ್ಕಳು ಸಾಮೂಹಿಕವಾಗಿ ಹೆಜ್ಜೆಹಾಕಿ ಗಮನ ಸೆಳೆದರು.