Advertisement

ಏಸುಕ್ರಿಸ್ತ ಮತ್ತು ಸಮರಿಟನ್‌ ಹೆಣ್ಣು

11:24 AM Jan 27, 2018 | |

ನಾಟಕ ನೋಡಿದವರು ನಾಟಕವನ್ನು ಅಳೆಯುವ ಮಾನದಂಡಗಳನ್ನು ಬೇರೆಬೇರೆಯಾಗಿರಿಸಿಕೊಂಡಿರುತ್ತಾರೆ. ನಾಟಕದಲ್ಲಿ ಕೇವಲ ಮಾತುಗಳಿದ್ದು ದೇಹಭಾಷೆ ಮತ್ತು ನಾಟಕೀಯತೆ ಇಲ್ಲದಿದ್ದರೆ ಅದನ್ನು ತಮಾಷೆಯಾಗಿ ರೇಡಿಯೊ ನಾಟಕ ಎಂದು ಗೇಲಿಮಾಡುತ್ತಾರೆ. ಕಾಮಿಡಿ ಪ್ರಧಾನವಾಗಿದ್ದು ಅದನ್ನು ಸ್ಟೈಲೈಸ್ಡ್ ಆಗಿ ನಿರೂಪಿಸಿರದಿದ್ದರೆ ‘ಕಾಮಿಡಿಬೇಕಾ ಹೋಗಿ….ಆದರೆ ನಾಟಕ ಅಂಥದ್ದು ಅಲ್ಲೇನೂ ಇಲ್ಲ’ ಎನ್ನುತ್ತಾರೆ.

Advertisement

ಕೆಲವರು ವಸ್ತುವಿಚಾರಕ್ಕಿಂತ ಅದನ್ನು ಕಟ್ಟುವ ಬಗೆಗೇ ಹೆಚ್ಚು ಒತ್ತು ನೀಡಿದ್ದರೆ ಅವರನ್ನು ಒಂದು ಸ್ಕೂಲ್‌ ಆಫ್ ಆರ್ಟ್‌ಗೆ ಕಟ್ಟಿಹಾಕಿ ನಗುತ್ತಾರೆ. ಹಳೆಯ ಜನಪ್ರಿಯ ರಂಗಪ್ರದರ್ಶನಗಳು ಮತ್ತೆ ರಂಗಕ್ಕೆ ಬಂದರೆ, ‘ಇವರು ಯಾವ ವಿನ್ಯಾಸದಲ್ಲಿ ಮಾಡಿಸಿದ್ದಾರೆಂದು ನೋಡುವ ಕುತೂಹಲದಲ್ಲಿ ಬಂದೆವು’ ಎಂದು ತಮ್ಮ ಪ್ರಭುತ್ವ ಮೆರೆಯುತ್ತಾರೆ. ರಂಗತಂಡಗಳು ಬೇರೆ ತಂಡಗಳ ನಾಟಕಗಳನ್ನು ನೋಡಿದಾಗ, ಆ ನಾಟಕಗಳನ್ನು ಪ್ರಮೋಟ್‌ ಮಾಡುವ ಬಗೆ ಹೀಗಿದೆ.

ತಮ್ಮ ಪ್ರಯೋಗ ಘನ ಎಂದುಕೊಳ್ಳುತ್ತಾ ಹಲವರನ್ನು ಗೇಲಿಮಾಡುತ್ತ ರಂಗರಾಜಕಾರಣದಲ್ಲಿ ಸಕ್ರಿಯರಾಗಿರುವ ಚಿತ್ರ ಇಂದು ನಮ್ಮ ಕಣ್ಮುಂದೆ ಇದೆ.
ಆದರೆ, ಮೇಲಿನ ಯಾವ ಗೇಲಿ, ಗೋಜಲುಗಳಿಗೂ ಸಿಕ್ಕಿಕೊಳ್ಳದ, ಅದರ ಚಿತ್ರಣ ಹೇಗಿದೆ ಎಂಬುದನ್ನೂ ಅರಿಯದವರೂ ಇದ್ದಾರೆ. ಅವರ ಮನಸ್ಸಿನಲ್ಲಿ ನಾಟಕವಿರುತ್ತದೆ. ಆದರೆ, ಹೊರಗಿನ ಚಿತ್ರಗಳಿರುವುದಿಲ್ಲ. ಅವುಗಳ ಹಂಗೂ ಬೇಕಾಗಿರುವುದಿಲ್ಲ.

ಮೌಂಟ್‌ ಕಾರ್ಮೆಲ್‌ ಕಾಲೇಜಿನ ಹೆಣ್ಣುಮಕ್ಕಳು ಈಚೆಗೆ ‘ಏಸುಕ್ರಿಸ್ತ ಮತ್ತು ಸಮರಿಟನ್‌ ಹೆಣ್ಣು’ ನಾಟಕ ಪ್ರದರ್ಶಿಸಿದರು. ಅವರಲ್ಲಿ ಮೇಲೆ ತಿಳಿಸಿದ ಸವಾಲುಗಳಿಗೆ ಮುಖಾಮುಖೀಯಾಬೇಕಾದ ಅನಿವಾರ್ಯ ಇರಲಿಲ್ಲ. ಹೀಗಿದ್ದಾಗ ನಾಟಕವೊಂದು ರೂಪುಗೊಳ್ಳುವ ಬಗೆ ಬೇರೆಯಾಗುತ್ತದೆ. ನಿರ್ದೇಶಕರು ಬೇರೆ ಮನಃಸ್ಥಿತಿಯಲ್ಲಿ ನಾಟಕ ಕಟ್ಟಬೇಕಾಗುತ್ತದೆ. ನಾಟಕ ಅನ್ನುವುದು ರೂಪಕದ ಮಾಧ್ಯಮ.

ಈ ಸೂತ್ರಕ್ಕೆ ಕಟ್ಟುಬಿದ್ದವರು ವಾಚ್ಯವನ್ನು ಸಹಿಸುವುದಿಲ್ಲ. ಥೀಮ್‌ ಮತ್ತು ಮೆಸೇಜ್‌ ಸಿದ್ಧಾಂತ ಅವರಿಂದ ದೂರ. ಏಸುಕ್ರಿಸ್ತ ಮತ್ತು ಸಮರಿಟನ್‌ ಹೆಣ್ಣು ಬೈಬಲ್‌ನಲ್ಲಿ ಬರುವ ಒಂದು ಪುಟ್ಟ ಕಥಾನಕ. ಸಮರಿಟನ್‌ ಹೆಣ್ಣೊಬ್ಬಳಲ್ಲಿದ್ದ ಅಳುಕು ಮತ್ತು ಆತಂಕವನ್ನು ಏಸುಪ್ರಭು ತನ್ನ ಮಹಿಮೆಯಿಂದ ಹೇಗೆ ದೂರ ಸರಿಸುತ್ತಾರೆ ಎನ್ನುವುದು ಇಲ್ಲಿಯ ಎಳೆ. ಜನರಲ್ಲಿದ್ದ ಕುಹಕ ಭಾವನೆಯನ್ನು ಹೋಗಲಾಡಿಸುವ ಬಗೆಯನ್ನು ಇಲ್ಲಿ ಚಿತ್ರಿಸಲಾಗಿತ್ತು. 

Advertisement

ಈ ಪ್ರಸಂಗವನ್ನು ಕಟ್ಟುವಾಗ ರಚನೆಯಲ್ಲಿ ಯಾವ ಅಂಶ ಪ್ರಧಾನವಾಗಿದೆ ಎನ್ನುವುದನ್ನು ಗುರುತಿಸಿಕೊಳ್ಳುವುದು ಮುಖ್ಯ. ಏಸುಪ್ರಭುವಿನ ಉದಾತತ್ತೆಯನ್ನು ಇಲ್ಲಿ ಪ್ರಧಾನವಾಗಿ ಚಿತ್ರಿಸಬೇಕಿತ್ತು. ಹಾಗೆ ನೋಡಿದರೆ, ಏಸುಕ್ರಿಸ್ತರ ಕಥಾನಕ ಕನ್ನಡಕ್ಕೆ ಹೊಸದೇನಲ್ಲ. ಗೋವಿಂದ ಪೈ ಅವರ ಗೋಲ್ಗೊàಥಾ, ದೇವುಡು ಅವರ ವಿಚಾರಣೆ ಏಸುವಿನ ಜೀವನಗಾಥೆಯನ್ನು ಕಾವ್ಯಾತ್ಮಕ ಲಯದಲ್ಲಿ ಹಾಗೂ ಚಿಂತನೆಯ ನೆಲೆಯಲ್ಲಿ ನಿಕಷಕ್ಕೆ ಒಡ್ಡಲಾಗಿತ್ತು.

ಅವುಗಳು ಸಾಹಿತ್ಯ ಕೃತಿಗಳಾಗಿ ಅರಳಿದಂಥವು. ಆದರೆ, ಇಲ್ಲಿ ಮನಪರಿವರ್ತನೆಯ ಅಂಶವನ್ನು ಕ್ಲುಪ್ತವಾಗಿ ಹೇಳಬೇಕಾದ ಸಂದರ್ಭವಿತ್ತು. ಹಾಗಾಗಿ, ಈ ಅಂಶಗಳಿಗೆ ಅನುಗುಣವಾಗಿ ನಿರ್ದೇಶಕಿ ಸೌಮ್ಯ ಪ್ರವೀಣ್‌ರವರು ತಮ್ಮ ವಿನ್ಯಾಸವನ್ನು ರೂಪಿಸಿಕೊಂಡಿದ್ದರು. ಏಸುವಿನ ಉದಾತ್ತತೆ ಮತ್ತು ಮಹಿಮೆಯನ್ನು ಭವ್ಯವಾಗಿ ಚಿತ್ರಿಸಲು ಬೇಕಾದ ವಿನ್ಯಾಸದ ಕಡೆಗೇ ಅವರು ಹೆಚ್ಚು ಒತ್ತು ನೀಡಿದ್ದು ಕಂಡುಬಂದಿತು.

ಹಾಡು, ಕುಣಿತಗಳಲ್ಲಿ ನಾಟಕವನ್ನು ಕಟ್ಟುತ್ತಲೇ ಏಸುಪ್ರಭುವಿನ ಮಹಿಮೆ ಕಾಣಿಸಿದ್ದು ನಾಟಕೀಯವಾಗಿ ಚೆಂದ ಅನಿಸಿತು. ವಸ್ತ್ರವಿನ್ಯಾಸ ಮತ್ತು ಪ್ರಸಾಧನ ಪೂರಕವಾಗಿತ್ತು. ಆದರೆ, ನಾಟಕದಲ್ಲಿ ಕ್ರೈಸ್ತ ಸಂವೇದನೆಯನ್ನು ಬಿಂಬಿಸಬೇಕಾಗಿತ್ತು. ಭಾಷೆಯನ್ನು ಆ ಸಂವೇದನೆಗೆ ಅನುಗುಣವಾಗಿ ಮಾರ್ಪಾಡಿಸಬೇಕಿತ್ತು. ಆದರೆ, ಇಲ್ಲಿ ಕನ್ನಡದ ಸಂವೇದನೆಗೆ ಕ್ರೈಸ್ತರ ಪೋಷಾಕು ತೊಡಿಸಿದಂತೆ ಕಾಣುತ್ತಿತ್ತು. 

* ಎನ್‌.ಸಿ. ಮಹೇಶ್‌

Advertisement

Udayavani is now on Telegram. Click here to join our channel and stay updated with the latest news.

Next