ಹನುಮಸಾಗರ: ಜೆಸ್ಕಾಂ ಶಾಖೆ ಕಚೇರಿ ಕಳೆದ 15 ದಿನಗಳಿಂದ ಸುರಿದ ಮಳೆಗೆ ಸಂಪೂರ್ಣ ಸೋರುತ್ತಿದ್ದು, ಶಾಖೆಯಲ್ಲಿರುವ ದಾಖಲೆಗಳು, ಕಂಪ್ಯೂಟರ್ ಯಂತ್ರದ ಬಿಡಿ ಭಾಗಗಳು ಕೆಟ್ಟು ಹೋಗುತ್ತಿವೆ.
ಹನುಮಸಾಗರ ಹಾಗೂ ಹನುಮನಾಳ ಹೋಬಳಿಯ 80ಕ್ಕೂ ಹೆಚ್ಚು ಗ್ರಾಮಗಳನ್ನು ಒಳಪಟ್ಟ ಶಾಖೆಯ ಕಟ್ಟಡವು 50 ವರ್ಷಗಳ ಹಿಂದಿನದ್ದಾಗಿದೆ. ಮಳೆ ಬಂತೆಂದರೆ ಶಾಖೆಯ ತುಂಬೆಲ್ಲಾ ನೀರೆ ನೀರು, ಶಾಖೆಯ ಮೇಲ್ಛಾವಣಿ ಸೋರಿ ಕಚೇರಿ ತುಂಬಾ ನೀರು ಹರಿದಾಡುತ್ತಿರುತ್ತದೆ. ಇದರಿಂದ ಆರ್‌ಆರ್ ದಾಖಲೆಗಳು ಸೇರಿದಂತೆ ಪ್ರಮುಖ ದಾಖಲೆಗಳು ತೊಯ್ದು ನಾಶವಾದರೂ ಅಧಿ ಕಾರಿಗಳು ವಿದ್ಯುತ್ ಕಚೇರಿ ಕಟ್ಟಡ ದುರಸ್ತಿಗೆ ಮುಂದಾಗುತ್ತಿಲ್ಲ. ಇದರಿಂದಾಗಿ ಗ್ರಾಹಕರು ಹಾಗೂ ವಿದ್ಯುತ್ ಗುತ್ತಿಗೆದಾರರು ಹಿಡಿ ಶಾಪ ಹಾಕುತ್ತಿದ್ದಾರೆ.
ಎರಡು ಹೋಬಳಿಗೆ ಒಂದೇ ಶಾಖೆ: ಹನುಮಸಾಗರದಲ್ಲಿ ಎರಡು ಹೋಬಳಿಗೆ ಒಳಪಡುವ ಜೆಸ್ಕಾಂ ಒಂದೇ ಶಾಖೆ ಇದೆ. ಎಲ್ಲ ಗ್ರಾಮಗಳ ಗ್ರಾಹಕರ ಹಾಗೂ ರೈತರ ಆರ್ ಆರ್ ನಂಬರ್ ದಾಖಲಾತಿಗಳು ಹಾಗೂ ಪ್ರಮುಖ ವಿದ್ಯುತ್ ಕಚೇರಿಗೆ ಸಂಬಂಧಪಟ್ಟ ದಾಖಲಾತಿಗಳು ಒಂದೇ ಕಚೇರಿಯಲ್ಲಿ ಶೇಖರಿಸಿಡಲಾಗುತ್ತದೆ. ದಾಖಲಾತಿಗಳು ನಾಶವಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಹೊರಬೇಕಿರುವ ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದಾಗಿ ವಿದ್ಯುತ್ ಗ್ರಾಹಕರು ಪರದಾಡುವಂತಾಗಿದೆ. ಕಂಪ್ಯೂಟರ್ ಸ್ಟಾರ್ಟ್ ಮಾಡಿ ಕೆಲಸ ಮಾಡಲು ಮುಂದಾದರೇ ವಿದ್ಯುತ್ ಶಾಕ್ ಹೊಡೆಯುತ್ತದೆ.
ಇದರಿಂದಾಗಿ ಸಿಬ್ಬಂದಿ ಭಯಗೊಂಡು ಕಂಪ್ಯೂಟರ್ ಮೂಲಕ ಕೆಲಸ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಸಿಬ್ಬಂದಿ ಶಾಖೆಯ ಮೇಲ್ಛಾವಣಿಯ ಪದರು ಬೀಳುತ್ತೇ ಎನ್ನುವ ಭಯದಲ್ಲೇ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಹನುಮನಾಳ ಹೋಬಳಿಯಲ್ಲಿ ಜೆಸ್ಕಾಂ ಶಾಖೆ ಇಲ್ಲದಿರುವ ಹಿನ್ನೆಲೆಯಲ್ಲಿ ನಮ್ಮ ಹೋಬಳಿಯ ಎಲ್ಲ ದಾಖಲಾತಿಗಳನ್ನು ಹನುಮಸಾಗರ ಶಾಖೆಯಲ್ಲಿ ಇಡಲಾಗಿದೆ ಎಂದು ಹನುಮನಾಳ ಶಾಖಾಧಿಕಾರಿ ಕಳಕಪ್ಪ ಕೊರಡಕೇರ ಹೇಳಿದರು.
ಆಕ್ರೋಶ: ಜೆಸ್ಕಾಂ ಗ್ರಾಹಕರು ಹಾಗೂ ಗುತ್ತಿಗೆದಾರರು ಮೀಟರ್ ಬದಲಾವಣೆ, ಆರ್‌ಆರ್ ನಂಬರ್‌ಗೆ ಸಂಬಂಧಿಸಿದ ದಾಖಲಾತಿ, ರೈತರ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸಂಪರ್ಕ ಒದಗಿಸಲು ವಿದ್ಯುತ್ ಕಂಬಗಳ ಪಡೆಯಲು ಪರವಾನಗಿ ಸೇರಿದಂತೆ ಹಲವು ದಾಖಲಾತಿಗಳನ್ನು ಕೇಳಿದರೇ ಅಧಿಕಾರಿಗಳು ಮಳೆಯಲ್ಲಿ ನೆನೆದು ಹೆಸರು, ಆರ್‌ಆರ್ ನಂಬರ್ ಅಳಿಸಿ ಹೋದ ದಾಖಲಾತಿ ನೀಡುತ್ತಾರೆ. ಈ ಬಗ್ಗೆ ಕೇಳಿದರೆ ನಾವೇನು ಮಾಡೋಣ, ಮಳೆಯಲ್ಲಿ
ತೊಯ್ದು ಹೋಗಿದೆ ಎಂದು ಬೇಜವಾಬ್ದಾರಿಯಿಂದ ಉತ್ತರಿಸುತ್ತಾರೆ ಎಂದು ಗ್ರಾಹಕರು ಹಾಗೂ ಗುತ್ತಿಗೆದಾರರು ಆಕ್ರೋಶವ್ಯಕ್ತಪಡಿಸುತ್ತಾರೆ.
ಪ್ರತಿಭಟನೆ ಎಚ್ಚರಿಕೆ: ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಎಚ್ಚೆತ್ತುಕೊಂಡು ತಾತ್ಕಾಲಿಕವಾಗಿ ಶಿಥಿಲಗೊಂಡ ವಿದ್ಯುತ್ ಶಾಖೆ ನವೀಕರಿಸಬೇಕು. ಇಲ್ಲವಾದರೆ ಎರಡು ಹೋಬಳಿಯ ವಿದ್ಯುತ್ ಗ್ರಾಹಕರು, ಗುತ್ತಿಗೆದಾರರು, ರೈತರು ಹಾಗೂ ಸಾರ್ವಜನಿಕರು ಸೇರಿದಂತೆ ವಿವಿಧ ಸಂಘಗಳು ಹನುಮಸಾಗರ ಜೆಸ್ಕಾಂ ಶಾಖೆಗೆ ಬೀಗ ಜಡಿದು ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಜೆಸ್ಕಾಂ ಶಾಖೆಯ ಕಟ್ಟಡವು 50 ವರ್ಷಗಳ ಹಿಂದಿನ ಕಟ್ಟಡವಾಗಿದ್ದು, ಮಳೆಗಾಲದಲ್ಲಿ ಕಟ್ಟಡ ಸೋರುತ್ತದೆ. ಕಟ್ಟಡ ಸಂಪೂರ್ಣ ಶಿಥಿಲಗೊಂಡಿದ್ದರಿಂದ ದಾಖಲಾತಿ, ಕಂಪ್ಯೂಟರ್ ಉಪಕರಣ ಸಂರಕ್ಷಿಸುವುದು ಕಷ್ಟಕರವಾಗಿದೆ. ಈ ಬಗ್ಗೆ ಈಗಾಗಲೇ ಹಲವು ಬಾರಿ ಲಿಖಿತ ಹಾಗೂ ಮೌಖೀಕವಾಗಿ ಮನವಿಯನ್ನು ನೀಡಿ ಗಮನಕ್ಕೆ ತರಲಾಗಿದೆ.
ಬಸವರಾಜ, ಜೆಸ್ಕಾಂ ಶಾಖಾಧಿಕಾರಿ
ಹನುಮಸಾಗರ
ವಸಂತಕುಮಾರ ವಿ ಸಿನ್ನೂರ