ಕನ್ನಡದಲ್ಲಿ ಈಗಾಗಲೇ ಕ್ರೀಡೆ ಕುರಿತಾದ ಹಲವು ಸಿನಿಮಾಗಳು ಬಂದಿವೆ. ಆದರೆ, ಹಾಕಿ ಕುರಿತಾಗಿ ಸಿನಿಮಾ ಬಂದಿಲ್ಲ. ಈ ವಾರ ತೆರೆಕಾಣುತ್ತಿರುವ “ಜರ್ಸಿ ನಂ.10′ ಆ ಕೊರತೆಯನ್ನು ನೀಗಿಸುವ ಸಿನಿಮಾ.
ಹೌದು, ಹಾಕಿ ಕ್ರೀಡೆಯನ್ನೇ ಮೂಲವಸ್ತುವಾಗಿಟ್ಟುಕೊಂಡು “ಜರ್ಸಿ ನಂ.10′ ಚಿತ್ರ ತಯಾರಾಗಿದೆ. ಈ ಸಿನಿಮಾ ಮೂಲಕ ಆದ್ಯ ತಿಮ್ಮಯ್ಯ ಹೀರೋ ಆಗಿ ಎಂಟ್ರಿಕೊಡುತ್ತಿದ್ದಾರೆ. ಈ ಹಿಂದೆ ಮೂರ್‍ನಾಲ್ಕು ಸಿನಿಮಾಗಳಲ್ಲಿ ನಟಿಸಿದ್ದ ಆದ್ಯಗೆ ಹೀರೋ ಆಗಿ “ಜರ್ಸಿ’ ಮೊದಲ ಸಿನಿಮಾ.
ಆದ್ಯ ಕೂಡಾ ಹಾಕಿ ಆಟಗಾರರಾಗಿರುವುದರಿಂದ ಸಿನಿಮಾಕ್ಕೂ ಅದೇ ಕಥೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ನಾಯಕರಾಗಿ ನಟಿಸುವ ಜೊತೆಗೆ ನಿರ್ದೇಶನ ಹಾಗೂ ನಿರ್ಮಾಣದ ಜವಾಬ್ದಾರಿ ಕೂಡಾ ಆದ್ಯ ಅವರದೇ.
ಚಿತ್ರದ ಬಗ್ಗೆ ಮಾತನಾಡುವ ಆದ್ಯ “ಜರ್ಸಿ ನಂ.10 ಚಿತ್ರ ಕ್ರೀಡಾ ಪ್ರೇಮಿಗಳಿಗೆ ಪ್ರೇರಣೆ ನೀಡುವಂತಹ ಒಂದು ಥ್ರಿಲ್ಲರ್ ಸಿನಿಮಾ. ನಾನು ಮೂಲತಃ ಕೂರ್ಗ್‌ನವನು. ನಮ್ಮ ಊರಿಗೂ ಕ್ರೀಡೆಗೂ ಅವಿನಾಭಾವ ಸಂಬಂಧ. ಹೀಗಿರುವಾಗ ನಾವ್ಯಾಕೆ ಇಂದಿನ ಯುವಕರಿಗೆ ಪ್ರೇರಣೆಯಾಗುವಂತಹ ನ್ಪೋರ್ಟ್ಸ್ ಹಿನ್ನೆಲೆಯ ಸಿನಿಮಾ ಮಾಡಬಾರದು ಎಂದುಕೊಂಡು ಮಾಡಿದ ಸಿನಿಮಾವೇ “ಜರ್ಸಿ ನಂ.10′. ಸಣ್ಣ ಊರಿನ ಹುಡುಗನೊಬ್ಬ ಅಡೆತಡೆಗಳನ್ನು ದಾಟಿ ಹೇಗೆ ತನ್ನ ಗುರಿಸಾಧಿಸುತ್ತಾನೆ ಎಂಬ ಅಂಶವನ್ನು ಹೇಳಲಾಗಿದೆ. ಚಿತ್ರದಲ್ಲಿ ಕ್ರೀಡೆ ಜೊತೆಗೆ
ಲವ್‌ಸ್ಟೋರಿಯೂ ಇದೆ. ಚಿತ್ರದಲ್ಲಿ ಮೂವರು ನಾಯಕಿಯರಿದ್ದು, ನಾಯಕ ಬೇರೆ ಬೇರೆ ಕಾಲಘಟ್ಟದಲ್ಲಿ ಆ ನಾಯಕಿಯರ ಜೊತೆ ಪ್ರೀತಿಗೆ ಬೀಳುತ್ತಾನೆ’ ಎಂದು ಚಿತ್ರದ ಬಗ್ಗೆ ವಿವರ ನೀಡುತ್ತಾರೆ.
ಚಿತ್ರದಲ್ಲಿ ಥ್ರಿಲ್ಲರ್ ಮಂಜು ಕೂಡಾ ಕೋಚ್ ಪಾತ್ರ ಮಾಡಿದ್ದು, ಭರ್ಜರಿಯಾದ ಫೈಟ್ ಸಂಯೋಜಿಸಿದ್ದಾರಂತೆ. ಉಳಿದಂತೆ ಹಿರಿಯ ನಟ ದತ್ತಣ್ಣ ಇಲ್ಲಿ ನಾಯಕನ ತಾತನ ಪಾತ್ರ ಮಾಡಿದ್ದಾರೆ. ಉಳಿದಂತೆ ಟೆನ್ನಿಸ್ ಕೃಷ್ಣ, ಮಂಡ್ಯ ರಮೇಶ್, ಚಂದನ್ ಆಚಾರ್ ಸೇರಿದಂತೆ ಅನೇಕರು ನಟಿಸಿದ್ದಾರೆ.