ಸಾಮಾನ್ಯವಾಗಿ ಚಿತ್ರದ ನಾಯಕ ನಟ, ನಾಯಕ ನಟಿ, ಅದರ ನಿರ್ಮಾಪಕ, ನಿರ್ದೇಶಕರ ಹುಟ್ಟು ಹಬ್ಬದ ಪ್ರಯುಕ್ತ ಆ ಚಿತ್ರದ ಪೋಸ್ಟರ್ ಲಾಂಚ್, ಟೀಸರ್ – ಟ್ರೇಲರ್ ರಿಲೀಸ್, ಆಡಿಯೋ ಬಿಡುಗಡೆ, ಹೀಗೆ ಆ ಚಿತ್ರಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ನಡೆಸುವುದು ವಾಡಿಕೆ. ಆದರೆ ಇಲ್ಲೊಂದು ಚಿತ್ರತಂಡ, ತಮ್ಮ ನೆಚ್ಚಿನ ನಾಯಕ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಮೇಲಿನ ಅಭಿಮಾನದಿಂದ ದರ್ಶನ್ ಹುಟ್ಟುಹಬ್ಬದಂದೇ ತಮ್ಮ ಚಿತ್ರದ ಆಡಿಯೋ ಬಿಡುಗಡೆ ಮಾಡಿ, ತಮ್ಮ ನೆಚ್ಚಿನ ನಟನಿಗೆ ಅರ್ಪಿಸಿದೆ.
ಹೌದು, ಇಂಥದ್ದೊಂದು ಅಪರೂಪದ ಉದಾಹರಣೆಗೆ ಕಾರಣವಾಗಿದ್ದು “ಜರ್ಕ್’ ಚಿತ್ರತಂಡ. ಈಗಾಗಲೇ ತನ್ನ ಬಹುತೇಕ ಕೆಲಸಗಳನ್ನು ಪೂರ್ಣಗೊಳಿಸಿ ತೆರೆಗೆ ಬರಲು ಸಿದ್ಧವಿರುವ “ಜರ್ಕ್’ ಚಿತ್ರತಂಡ, ಫೆ. 16ರಂದು ನಡೆದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬರ್ತ್‌ಡೇಯಂದು ತಮ್ಮ ಚಿತ್ರದ ಆಡಿಯೋವನ್ನು ಬಿಡುಗಡೆಗೊಳಿಸಿದೆ.
ಕಲಾವಿದರ ಸಂಘದ ಆಡಿಟೋರಿಯಂನಲ್ಲಿ ನಡೆದ ಸಮಾರಂಭದಲ್ಲಿ ಹಿರಿಯ ಸಾಹಿತಿ ಪ್ರೊ. ದೊಡ್ಡರಂಗೇಗೌಡ, ನಿರ್ದೇಶಕ ಜಯತೀರ್ಥ, ಲಹರಿ ವೇಲು, ಮಜಾ ಟಾಕೀಸ್ ಪವನ್, ಗಡ್ಡಪ್ಪ, ಕುರಿರಂಗ, ನೃತ್ಯ ನಿರ್ದೇಶಕ ತ್ರಿಭುವನ್ ಮತ್ತಿತರರು ಹಾಜರಿದ್ದು ಚಿತ್ರದ ಹಾಡುಗಳನ್ನು ಬಿಡುಗಡೆಗೊಳಿಸಿ ಚಿತ್ರತಂಡಕ್ಕೆ ಶುಭ ಕೋರಿದರು. “ಜರ್ಕ್’ ಚಿತ್ರಕ್ಕೆ ಮಹಾಂತೇಶ್ ಮದಕರಿ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿದ್ದಾರೆ.
ಚಿತ್ರದ ಕಥಾಹಂದರದ ಬಗ್ಗೆ ಮಾತನಾಡಿದ ನಿರ್ದೇಶಕ ಮಹಾಂತೇಶ್ ಮದಕರಿ, “ಜೀವನ ಅನ್ನೋ ಜರ್ನಿಯಲ್ಲಿ ಹಲವು ತಿರುವುಗಳು ಬರುತ್ತವೆ, ವೇಗದಲ್ಲಿದ್ದ ಬದುಕು ಕಾರಣಾಂತರಗಳಿಂದ ಒಮ್ಮೆಲೇ ನಿಂತಂತಾಗುತ್ತದೆ. ಕೆಎಎಸ್ ಕೋಚಿಂಗ್‌ಗಾಗಿ ಬೆಂಗಳೂರಿಗೆ ಬರುವ ಹುಡುಗನಿಗೆ ಇಲ್ಲಿ ಆಗುವ ಅನುಭವಗಳ ಪರಿಕಲ್ಪನೆಯಲ್ಲಿ ಚಿತ್ರದ ಕಥೆಯನ್ನು ಹೆಣೆಯಲಾಗಿದೆ.
ಕಮರ್ಷಿಯಲ್ ಅಂಶಗಳ ಜೊತೆಗೆ ಸಂದೇಶ ಕೂಡಾ ಇರಬೇಕೆಂಬ ಆಸೆಯಿಂದ ಚಿತ್ರದಲ್ಲಿ ಸಾಮಾಜಿಕ ಸಂದೇಶವನ್ನು ಕೂಡಾ ಸೇರಿಸಲಾಗಿದೆ. ಸಸ್ಪೆನ್ಸ್-ಥ್ರಿಲ್ಲರ್ ಶೈಲಿಯಲ್ಲಿ ಚಿತ್ರ ಮೂಡಿಬಂದಿದೆ’ ಎಂದರು. “ಜರ್ಕ್’ ಚಿತ್ರದಲ್ಲಿ ಕೃಷ್ಣರಾಜ್ ಎಂಬ ಹೊಸ ಪ್ರತಿಭೆ ನಾಯಕನಾಗಿ, ನಿತ್ಯಾರಾಜ್ ಹಾಗೂ ಆಶಾ ಭಂಡಾರಿ ನಾಯಕಿಯರಾಗಿ ನಟಿಸುತ್ತಿದ್ದಾರೆ. ತಿಥಿ ಖ್ಯಾತಿಯ ಗಡ್ಡಪ್ಪ ಮೊದಲ ಬಾರಿಗೆ ಈ ಚಿತ್ರದಲ್ಲಿ ಡಬಲ್ ಶೇಡ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
ಉಳಿದಂತೆ ಬುಲೆಟ್ ಪ್ರಕಾಶ್, ಥ್ರಿಲ್ಲರ್ ಮಂಜು, ನೆ.ಲ ನರೇಂದ್ರ ಬಾಬು ಮೊದಲಾದವರು ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. “ಜರ್ಕ್’ ಚಿತ್ರದಲ್ಲಿ ಒಟ್ಟು ನಾಲ್ಕು ಹಾಡುಗಳಿದ್ದು, ಎಡ್ವರ್ಡ್ ಷಾ ಸಂಗೀತ ಸಂಯೋಜಿಸಿದ್ದಾರೆ. ಸಂತೋಷ್ ವೆಂಕಿ, ಮಾನಸ ಹೊಳ್ಳ, ದೇಸಿ ಮೋಹನ್, ಸುನೀತಾ ಮೊದಲಾದವರು ಚಿತ್ರದ ಹಾಡುಗಳಿಗೆ ಧ್ವನಿಯಾಗಿದ್ದಾರೆ.