ಹೊಸದಿಲ್ಲಿ : 40 ಯೋಧರನ್ನು ಬಲಿಪಡೆಯಲಾಗಿರುವ ಪುಲ್ವಾಮಾ ಉಗ್ರ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನಾ ಪಡೆ ಪಿಓಕೆಯಲ್ಲಿನ ತಮ್ಮ ತಾಣಗಳ ಮೇಲೆ ಭಾರೀ ಪ್ರಮಾಣದ ದಾಳಿ ನಡೆಸಬಹುದೆನ್ನುವ ಲೆಕ್ಕಾಚಾರದಲ್ಲಿ ಜೈಶ್ ಎ ಮೊಹಮ್ಮದ್ ಸಂಘಟನೆಯ ಉಗ್ರರು ತಮ್ಮ ಅಡಗುದಾಣಗಳನ್ನು ಪಾಕಿಸ್ಥಾನದ ಜನನಿಬಿಡ ಪ್ರದೇಶಗಳಿಗೆ ಸ್ಥಳಾಂತರಿಸಿರುವುದಾಗಿ ವರದಿಗಳು ಹೇಳಿವೆ.
ಜನನಿಬಿಡ ತಾಣಗಳ ಮೇಲೆ ಭಾರತ ದಾಳಿ ಮಾಡುವುದಿಲ್ಲ ಎಂಬ ಕಾರಣಕ್ಕೆ ತನ್ನ ದೇಶದ ಜನರನ್ನೇ ಗುರಾಣಿಯಾಗಿ ಬಳಸಿಕೊಳ್ಳುವ ನೀಚತನವನ್ನು ಜೈಶ್ ಉಗ್ರರು ತೋರಿರುವುದು ಅವರ ಈ ನಡೆಯಲ್ಲಿ ಸ್ಪಷ್ಟವಿದೆ ಎಂದು ಮೂಲಗಳು ತಿಳಿಸಿವೆ.
ಜೈಶ್ ಉಗ್ರರ ಅಡಗು ದಾಣಗಳ ಸ್ಥಳಾಂತರ ಕಳೆದ ಸೋಮವಾರ ರಾತ್ರಿಯಿಂದಲೇ ಚುರುಕಿನಿಂದ ನಡೆಯುತ್ತಿದೆ.
ಭಾರತೀಯ ಸೇನಾ ಪಡೆಗಳು ನಡೆಸಿರುವ ಉಗ್ರ ನಿಗ್ರಹ ಕಾರ್ಯಾಚರಣೆಯಲ್ಲಿ ಇಂದು ಜೈಶ್ ಎ ಮೊಹಮ್ಮದ್‌ನ ಟಾಪ್ ಉಗ್ರ ಅಬ್ದುಲ್ ರಶೀದ್ ಗಾಜಿ ಅಲಿಯಾಸ್ ಕಮ್ರಾನ್ ಹತನಾಗಿದ್ದಾನೆ. ಈತ ಪುಲ್ವಾಮಾ ದಾಳಿಯ ಮಾಸ್ಟರ್ ಮೈಂಡ್ .
ಆದರೆ ಇದೇ ವೇಳೆ ಮೇಜರ್ ವಿಭೂತಿ ಶಂಕರ್ ಧೌಂಡಿಯಾಲ್ ಮತ್ತು ಇತರ ಮೂವರು ಯೋಧರಾದ ಹವಾಲ್ದಾರ್ ಶಿವರಾಮ್, ಸಿಪಾಯ್ ಅಜಯ್ ಕುಮಾರ್ ಮತ್ತು ಸಿಪಾಯ್ ಹರಿ ಸಿಂಗ್ ಅವರು ಇಂದು ಸೋಮವಾರ ಹುತಾತ್ಮರಾಗಿದ್ದಾರೆ.