Advertisement
ಹೌದು ಎನ್ನುತ್ತಿವೆ ಮೂಲಗಳು. ಪಾಕಿಸ್ತಾನದ ರಾವಲ್ಪಿಂಡಿಯ ಸೇನಾ ಆಸ್ಪತ್ರೆಯಲ್ಲಿ ಶನಿವಾರವೇ ಆತ ಮೃತಪಟ್ಟಿದ್ದಾನೆ ಎಂಬ ವದಂತಿಯು ಭಾನುವಾರವಿಡೀ ಹಬ್ಬಿದ್ದು, ಹಲವು ಚರ್ಚೆಗಳಿಗೆ ಗ್ರಾಸವಾಗಿದೆ. ಪಾಕಿಸ್ತಾನದ ಬಾಲಕೋಟ್ ಮೇಲೆ ಭಾರತದ ವಾಯುಪಡೆ ನಡೆಸಿದ ವೈಮಾನಿಕ ದಾಳಿ ವೇಳೆ ಉಗ್ರರ ಶಿಬಿರದಲ್ಲಿ ಮಲಗಿದ್ದ ಜೈಶ್-ಎ-ಮೊಹಮ್ಮದ್ ಸಂಸ್ಥಾಪಕ ಮಸೂದ್ ಅಜರ್ ತೀವ್ರ ಗಾಯಗೊಂಡು, ಆಸ್ಪತ್ರೆಗೆ ದಾಖಲಾಗಿದ್ದ. ಈತನಿಗೆ ಮೊದಲೇ ಕಿಡ್ನಿ ವೈಫಲ್ಯವಾಗಿದ್ದ ಕಾರಣ, ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ.
Related Articles
ಭಾನುವಾರ ಬೆಳಗ್ಗೆಯಿಂದಲೇ ಸಾಮಾಜಿಕ ಜಾಲತಾಣಗಳಲ್ಲಿ ಜೈಶ್ ಉಗ್ರ ಮಸೂದ್ ಅಜರ್ ಸತ್ತ ಎಂಬ ಸುದ್ದಿಗಳು ಹರಿದಾಡತೊಡಗಿವೆ. ಸಂಜೆ ವೇಳೆಗೆ ಈ ಸುದ್ದಿಯನ್ನು ಕೆಲವು ಮಾಧ್ಯಮಗಳೂ ಪ್ರಕಟಿಸಿವೆ. ಈ ಹಿನ್ನೆಲೆಯಲ್ಲಿ, ಆತನ ಸಾವಿನ ಬಗ್ಗೆ ಖಚಿತಪಡಿಸಲು ಗುಪ್ತಚರ ಸಂಸ್ಥೆಗಳು ಮಾಹಿತಿ ಕಲೆ ಹಾಕುತ್ತಿವೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ. ಈ ಕುರಿತು ಮಾತನಾಡಿದ ಅಧಿಕಾರಿಗಳು, ಉಗ್ರ ಅಜರ್ ಪಾಕ್‌ನ ಸೇನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂಬ ಮಾಹಿತಿ ಬಿಟ್ಟರೆ ಬೇರ್ಯಾವ ಮಾಹಿತಿಯೂ ನಮಗೆ ಸಿಕ್ಕಿಲ್ಲ. ಸಾವಿನ ಕುರಿತ ಸತ್ಯಾಸತ್ಯತೆಯನ್ನು ಅರಿಯಲು ಪ್ರಯತ್ನಿಸುತ್ತಿದ್ದೇವೆ ಎಂದಿದ್ದಾರೆ.
Advertisement
ಸಾಮಾಜಿಕ ಜಾಲತಾಣಗಳಲ್ಲಿ ದಿನವಿಡೀ ಚರ್ಚೆಫೇಸ್ಬುಕ್, ಟ್ವಿಟರ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಭಾನುವಾರ ದಿನವಿಡೀ ಉಗ್ರ ಅಜರ್ ಸಾವಿನ ಕುರಿತು ಚರ್ಚೆಯಾಗಿದೆ. ಟ್ವಿಟರ್‌ನಲ್ಲಿ ಮಸೂದ್‌ಅಜರ್ ಡೆಡ್ ಎಂಬ ಹ್ಯಾಷ್‌ಟ್ಯಾಗ್‌ನಲ್ಲಿ ಈ ಕುರಿತು ಹಲವರು ತಮ್ಮ ಅಭಿಪ್ರಾಯ, ಮಾಹಿತಿ ಹೊರಹಾಕಿದ್ದಾರೆ. ಫೆ.26ರಂದು ಭಾರತದ ವಾಯುಪಡೆ ನಡೆಸಿದ ದಾಳಿಯಲ್ಲೇ ಆತ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಆದರೆ, ಪಾಕಿಸ್ತಾನ ಸರ್ಕಾರವು ಆತನದ್ದು ಸಹಜ ಸಾವು ಎಂದು ಸದ್ಯದಲ್ಲೇ ಘೋಷಿಸಲಿದೆ ಎಂದು ಕೆಲವರು ಟ್ವೀಟ್ ಮಾಡಿದರೆ, ಇನ್ನು ಕೆಲವರು, “ಮಸೂದ್ ಅಜರ್ ಸ್ಥಿತಿ ಗಂಭೀರವಾಗಿದೆ. ಆತ ಸದ್ಯ ವೆಂಟಿಲೇಟರ್‌ನಲ್ಲಿದ್ದು, 2ರಿಂದ 3 ದಿನವಷ್ಟೇ ಬದುಕುಳಿಯಬಹುದು ಎಂದು ವೈದ್ಯರು ತಿಳಿಸಿದ್ದಾರೆ’ ಎಂದು ಬರೆದುಕೊಂಡಿದ್ದಾರೆ. ಮತ್ತೆ ಕೆಲವರು, ಮಸೂದ್ ಅಜರ್ ಸತ್ತಿರುವುದು ನಿಜ. ಆದರೆ, ಅದನ್ನು ಸರ್ಕಾರ ಬಹಿರಂಗಪಡಿಸಿಲ್ಲ ಎಂದಿದ್ದಾರೆ. ಮಸೂದ್ ಆರೋಗ್ಯವಾಗಿದ್ದಾನೆ ಎನ್ನುತ್ತಿದೆ ಜೈಶ್
ಉಗ್ರನ ಅಂತ್ಯವಾಯಿತು ಎಂಬ ಸುದ್ದಿ ವಿಶ್ವಾದ್ಯಂತ ಹಬ್ಬುತ್ತಿದ್ದಂತೆ, ಎಚ್ಚೆತ್ತಿರುವ ಜೈಶ್ ಉಗ್ರ ಸಂಘಟನೆ ಪ್ರಕಟಣೆಯೊಂದನ್ನು ಬಿಡುಗಡೆ ಮಾಡಿದೆ. ಮಸೂದ್ ಅಜರ್ ಜೀವಂತವಾಗಿದ್ದು, ಆರೋಗ್ಯವೂ ಚೇತರಿಸಿದೆ ಎಂದು ಭಾನುವಾರ ರಾತ್ರಿ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಲಾಗಿದೆ. ಇದೇ ವೇಳೆ, ಇಮ್ರಾನ್ ಖಾನ್ ಸಂಪುಟದ ಸಚಿವರೊಬ್ಬರು, ಉಗ್ರ ಕಮಾಂಡರ್‌ನ ಆರೋಗ್ಯ ಚಿಂತಾಜನಕವಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಹೇಳಿದ್ದಾರೆ. ಭಯೋತ್ಪಾದಕ ಪಟ್ಟಿಗೆ ಅಜರ್ ಹೆಸರು ಸೇರಿಸಲು ಒಪ್ಪಿಗೆ?
ಜೈಶ್ ಉಗ್ರ ಮಸೂದ್ ಅಜರ್ ಹೆಸರನ್ನು ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಭಯೋತ್ಪಾದಕರ ಪಟ್ಟಿಗೆ ಸೇರ್ಪಡೆ ಮಾಡುವುದಕ್ಕೆ ವಿರೋಧಿಸುತ್ತಾ ಬಂದಿರುವ ಪಾಕಿಸ್ತಾನವು, ತನ್ನ ವಿರೋಧವನ್ನು ವಾಪಸ್ ಪಡೆಯುವ ಸಾಧ್ಯತೆಯಿದೆ ಎಂದು ವರದಿಗಳು ಹೇಳಿವೆ. ಅಮೆರಿಕ, ಯುಕೆ ಮತ್ತು ಫ್ರಾನ್ಸ್ ಕಳೆದ ಬುಧವಾರ ಅಜರ್‌ನನ್ನು ಉಗ್ರರ ಪಟ್ಟಿಗೆ ಸೇರಿಸುವಂತೆ ಹೊಸ ಪ್ರಸ್ತಾಪ ಸಲ್ಲಿಸಿದ ಬೆನ್ನಿಗೇ ಇಂಥದ್ದೊಂದು ವರದಿ ಹೊರಬಿದ್ದಿದೆ. ಮಹತ್ವದ ಬೆಳವಣಿಗೆ ಎಂಬಂತೆ, ಪಾಕಿಸ್ತಾನವು ಎಲ್ಲ ಉಗ್ರ ಸಂಘಟನೆಗಳು ಹಾಗೂ ಜೆಇಎಂ ಉಗ್ರ ಅಜರ್ ವಿರುದ್ಧ ನಿರ್ಣಾಯಕ ಕ್ರಮ ಕೈಗೊಳ್ಳಲು ಚಿಂತನೆ ನಡೆಸಿದೆ ಎಂದು ಮೂಲಗಳನ್ನು ಉಲ್ಲೇಖೀಸಿ ದಿ ಎಕ್ಸ್‌ಪ್ರೆಸ್ ಟ್ರಿಬ್ಯೂನ್ ವರದಿ ಮಾಡಿದೆ. ಇದು ನಿಜವಾದಲ್ಲಿ, ಈ ಬೆಳವಣಿಗೆಯು ಭಾರತಕ್ಕೆ ಅತಿದೊಡ್ಡ ರಾಜತಾಂತ್ರಿಕ ಗೆಲುವಾಗುತ್ತದೆ. ಪಾಕಿಸ್ತಾನವೇ ತನ್ನ ನಿಲುವು ಸಡಿಲಿಸಿದರೆ, ಚೀನಾ ಕೂಡ ಅದಕ್ಕೆ ಬೆಂಬಲ ವ್ಯಕ್ತಪಡಿಸುವುದು ಖಚಿತ. ಆಗ, ಜಾಗತಿಕವಾಗಿ ಪಾಕಿಸ್ತಾನದ ಮೇಲೆ ಭಾರತ ತಂದ ಒತ್ತಡವೂ ಫಲನೀಡಿದಂತಾಗುತ್ತದೆ. ಪಾಕಿಸ್ತಾನದಲ್ಲಿರುವ ಸರ್ಕಾರದ ಉನ್ನತ ಮೂಲಗಳು ಉಗ್ರ ಮಸೂದ್ ಅಜರ್ ಸತ್ತಿದ್ದಾನೆಂಬ ಮಾಹಿತಿಯನ್ನು ದೃಢಪಡಿಸಲು ನಿರಾಕರಿಸುತ್ತಿವೆ. ಆತ ಡಯಾಲಿಸಿಸ್‌ನಲ್ಲಿದ್ದಾನೆ ಎಂದಷ್ಟೇ ಹೇಳುತ್ತಿವೆ. ಇನ್ನೂ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.
– ರಾಜ್‌ದೀಪ್ ಸರ್ದೇಸಾಯಿ