Advertisement

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

11:40 PM Mar 28, 2024 | Team Udayavani |

ಗೋಕರ್ಣ : ಈಗ ವಿದ್ಯಾರ್ಥಿಗಳಿಗೆ ವಿವಿಧ ಪರೀಕ್ಷೆಗಳು ನಡೆಯುತ್ತಿದ್ದರೆ, ಇನ್ನು ಕೆಲವು ವಿದ್ಯಾರ್ಥಿಗಳಿಗೆ ಪರೀಕ್ಷೆ ಮುಗಿದಿದೆ. ಹೀಗಾಗಿ ಸಹಜವಾಗಿ ಪ್ರವಾಸಿ ತಾಣಗಳತ್ತ ಆಗಮಿಸುತ್ತಿದ್ದು, ತಾಪಮಾನ ಏರಿಕೆಯಿಂದಾಗಿ ಸಹಜವಾಗಿಯೆ ನದಿ ಹಾಗೂ ಸಮುದ್ರದಲ್ಲಿ ಈಜಾಡುತ್ತಾರೆ. ಆದರೆ ಜೆಲ್ಲಿಫಿಶ್ ಹಾವಳಿಯಿಂದಾಗಿ ಪ್ರವಾಸಿಗರು ಆತಂಕಕ್ಕೆ ಸಿಲುಕಿದ್ದಾರೆ.

Advertisement

ಗೋಕರ್ಣ, ಮುರ್ಡೇಶ್ವರ, ಗಂಗಾವಳಿ ನೀರು ಇನ್ನು ಗೋವಾದ ಬೀಚ್‌ಗಳಲ್ಲಿ ಜೆಲ್ಲಿ ಮೀನುಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಂಡಿವೆ. ಇದರಿಂದ ಪ್ರವಾಸಿಗರಿಗೆ ತೊಂದರೆಯಾಗುವ ಸಾಧ್ಯತೆ ಇದೆ. ಜೆಲ್ಲಿ ಮೀನುಗಳಿರುವ ಪ್ರದೇಶಗಳಲ್ಲಿ ಜನರು ಸಮುದ್ರಕ್ಕಿಳಿಯದಂತೆ ಎಚ್ಚರಿಕೆ ನೀಡಲಾಗುತ್ತಿದೆ. ಬೀಚ್‌ಗಳಲ್ಲಿ ಪ್ರವಾಸಿಗರು ಎಚ್ಚರಿಕೆ ವಹಿಸುವ ಅಗತ್ಯವಿದೆ.

ಪ್ರಪಂಚದಾದ್ಯಂತದ ಕರಾವಳಿ ಪ್ರದೇಶಗಳಲ್ಲಿ ಕೆಲವು ಜಾತಿಯ ಜೆಲ್ಲಿ ಮೀನುಗಳು ವಿಷಪೂರಿತವಾಗಿವೆ ಮತ್ತು ಅವುಗಳು ಕಚ್ಚಿದರೆ ತೊಂದರೆಯುಂಟಾಗುವ ಸಾಧ್ಯತೆಯಿರುತ್ತದೆ. ಸುಮಾರು 2 ಸಾವಿರಕ್ಕೂ ಅಧಿಕ ಪ್ರಬೇಧವನ್ನು ಹೊಂದಿರುವ ಈ ಜೆಲ್ಲಿಫಿಶ್ ಫಿಲಿಪೈನ್ಸ್ ನಂತಹ ದೇಶಗಳಲ್ಲಿ ಪ್ರತಿವರ್ಷ ಅನೇಕ ನಾಗರಿಕರು ಜೆಲ್ಲಿ ಮೀನುಗಳ ಕುಟುಕಿಗೆ ಬಲಿಯಾಗುತ್ತಾರೆ.

ಗೋವಾ ರಾಜ್ಯದ ಕರಂಜಾಲೆ, ಮಿರಮಾರ್ ಸಿಕೇರಿ, ಸಮುದ್ರ ತೀರ ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜೆಲ್ಲಿ ಮೀನುಗಳು ಕಂಡುಬರುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಹಾಗೇ ಗೋಕರ್ಣದಲ್ಲಿ ಜೆಲ್ಲಿಫಿಶ್ ಕೆಲವು ವರ್ಷಗಳ ಹಿಂದೆ ತೀವ್ರವಾಗಿ ಕಾಣಿಸಿಕೊಂಡು ಸಮುದ್ರದಲ್ಲಿ ಈಜಾಡುವ ಪ್ರವಾಸಿಗರ ಮೇಲೆ ದಾಳಿ ಮಾಡಿದಾಗ ಅದರಿಂದ ತಪ್ಪಿಸಿಕೊಳ್ಳಲು ಒದ್ದಾಡಿ ನಂತರ ತಪ್ಪಿಸಿಕೊಂಡು ಬಂದ ಸಾಕಷ್ಟು ಉದಾಹರಣೆಗಳಿವೆ.

ಈ ಜೆಲ್ಲಿಫಿಶ್ ವಿವಿಧ ಆಕಾರಗಳನ್ನು ಹೊಂದಿದ್ದು, ಮನುಷ್ಯನ ಯಾವುದೇ ಭಾಗಗಳಿಗೆ ಅದು ಸುಲಭವಾಗಿ ಸುತ್ತಿಕೊಳ್ಳುತ್ತದೆ. ಹೀಗಾಗಿ ಮುಳ್ಳು ತಿರುಚಿದ ಗಾಯದಂತೆ ಕಂಡುಬರುವುದರ ಜತೆಗೆ ವಿಪರೀತ ತುರಿಕೆ ಬಂದು ಆಸ್ಪತ್ರೆಗೂ ಕೂಡ ದಾಖಲಾಗುವ ಪರಿಸ್ಥಿತಿ ಬರುತ್ತದೆ. ಇಂತಹುದೇ ಪರಿಸ್ಥಿತಿ ಗೋಕರ್ಣದಲ್ಲಿ 2 ವರ್ಷಗಳ ಹಿಂದೆ ನಡೆದಿದ್ದವು. ಆದರೆ ಈಗ ಪ್ರವಾಸಿಗರ ಕಣ್ಮುಂದೆಯೇ ಈ ಜೆಲ್ಲಿಫಿಶ್ ಹಾದುಹೋಗುವುದು ಹಾಗೂ ಕೆಲವರಿಗೆ ಸ್ಪರ್ಶ ಕೂಡ ಮಾಡಿದ್ದರಿಂದಾಗಿ ಸಹಜವಾಗಿಯೇ ನೀರಿಗಿಳಿಯುವ ಪ್ರವಾಸಿಗರು ಆತಂಕಕ್ಕೊಳಗಾಗಿದ್ದಾರೆ.

Advertisement

ಜೆಲ್ಲಿಫಿಶ್‌ನ್ನು ಭಕ್ಷಿಸುವ ಕಡಲಾಮೆ
ಈ ಜೆಲ್ಲಿಫಿಶ್ ಈಜಾಡುವವರಿಗೆ ಮಾತ್ರವಲ್ಲ, ಇದು ಮುಖ್ಯವಾಗಿ ಮೀನಿನ ಮೊಟ್ಟೆಗಳನ್ನು ತಿನ್ನುತ್ತದೆ. ಹೀಗಾಗಿ ಇದರ ಸಂಖ್ಯೆ ಹೆಚ್ಚಿದರೆ ಸಹಜವಾಗಿಯೇ ಮತ್ಯಕ್ಷಾಮ ಉಂಟಾಗುತ್ತದೆ. ಹಾಗೇ ಇದು ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬಂದರೆ ಮೀನುಗಳು ತಮ್ಮ ಪಥವನ್ನು ಬದಲಿಸಿ ಬೇರೆ ಕಡೆ ತೆರಳುವುದರಿಂದ ಸಹಜವಾಗಿಯೇ ಮೀನುಗಾರರು ನಷ್ಟ ಅನುಭವಿಸಬೇಕಾಗುತ್ತದೆ. ಆದರೆ ಇಂತಹ ಅಪಾಯಕಾರಿ ಜೆಲ್ಲಿಫಿಶ್‌ಗಳನ್ನು ಭಕ್ಷಿಸುವ ಏಕೈಕ ಜೀವಿಯೆಂದರೆ ಅದು ಕಡಲಾಮೆಯಾಗಿದೆ. ಸಮುದ್ರದಲ್ಲಿ ಕಡಲಾಮೆಗಳ ಸಂಖ್ಯೆ ಹೆಚ್ಚಾದರೆ ಇಂತಹ ಜೆಲ್ಲಿಫಿಶ್‌ಗಳ ಸಂಖ್ಯೆ ಕೂಡ ಕ್ಷೀಣಿಸುತ್ತದೆ. ಹೀಗಾಗಿ ಮೀನುಗಾರರು ತಮ್ಮ ಬಲೆಗೆ ಕಡಲಾಮೆ ಸಿಕ್ಕರೂ ಅದನ್ನು ಪುನಃ ನೀರಿಗೆ ಬಿಡುತ್ತಾರೆ. ಹಾಗೇ ಅರಣ್ಯ ಇಲಾಖೆಯವರು ಕೂಡ ಇದರ ಮಹತ್ವವನ್ನು ಅರಿತು ಇದು ಮೊಟ್ಟೆ ಹಾಕಿದ ನಂತರ ಸುತ್ತಲೂ ರಕ್ಷಣಾ ಕವಚ ಹಾಕಿ ಅದು ಮರಿಯಾಗಿ ಹೊರಬಂದ ನಂತರ ಅದನ್ನು ಮತ್ತೆ ಸಮುದ್ರಕ್ಕೆ ಬಿಡುತ್ತಾರೆ. ಕೇವಲ ಒಂದು ತಿಂಗಳಲ್ಲಿ ಕಾರವಾರದಿಂದ ಮುರ್ಡೇಶ್ವರದವರೆಗೆ ಸಾಕಷ್ಟು ಕಡಲಾಮೆಗಳ ಗೂಡುಗಳು ಕಂಡುಬಂದಿದ್ದು, ಅದನ್ನು ಸಂರಕ್ಷಿಸಿ ಮತ್ತೆ ಸಮುದ್ರಕ್ಕೆ ಬಿಡುತ್ತಿದ್ದಾರೆ.

ಜೆಲ್ಲಿ ಮೀನುಗಳು ಪ್ರಪಂಚದಾದ್ಯಂತ ಮತ್ತು ಎರಡೂ ಧ್ರುವ ಪ್ರದೇಶಗಳಲ್ಲಿಯೂ ಕಂಡುಬರುತ್ತವೆ. ಜೆಲ್ಲಿ ಮೀನುಗಳು ಮೇಲ್ಮೈ ನೀರಿನಿಂದ ಆಳ ಸಮುದ್ರದವರೆಗೆ ಕಂಡುಬರುತ್ತವೆ. ಸ್ಕೈಫೋಜೋವಾನ್ಸ್ ಉಪ್ಪುನೀರಿನ ಜೆಲ್ಲಿ ಮೀನುಗಳು ಪ್ರತ್ಯೇಕವಾಗಿ ಸಮುದ್ರದಲ್ಲಿವೆ. ಆದರೆ ಹೈಡ್ರೋಜೋವಾದಂತಹ ಜೆಲ್ಲಿ ಮೀನುಗಳು ಸಿಹಿ ನೀರಿನಲ್ಲಿಯೂ ಕಂಡುಬರುತ್ತದೆ. ಇದು ಮನುಷ್ಯನಿಗೆ ಅಪಾಯಕಾರಿಯಾಗಿ ಪರಿಣಮಿಸಿದೆ.
– ಡಾ. ಬಾಬನ್ ಇಂಗೋಲ್ ಹಿರಿಯ ಸಾಗರ ವಿಜ್ಞಾನಿ

ನಾಗರಾಜ ಎಂ.

Advertisement

Udayavani is now on Telegram. Click here to join our channel and stay updated with the latest news.

Next