ಎಂಎ ಓದುತ್ತಿರುವಾಗ ಸಾಹಿತಿ ಅರುಣ್ ಕೊಲಾಟ್ಕರ್ ಅವರ ಕವಿತೆಗಳನ್ನು ಓದಿದ್ದೆ. ಜೆಜುರಿ ಅನ್ನುವ ಕವಿತಾಸಂಕಲನ ಬಹಳ ಪ್ರಸಿದ್ಧ. ಮಾರ್ಮಿಕವಾಗಿ ಬರೆಯುವ, ಮರಾಠಿ ಮಾತೃಭಾಷೆಯ ಕವಿ ಅರುಣ್. ಮರಾಠಿ ಮತ್ತು ಇಂಗ್ಲಿಷ್ ಎರಡರಲ್ಲೂ ಬರೆದಿದ್ದಾರೆ. ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಆ್ಯನ್ ಓಲ್ಡ್ ವುಮನ್ ಎಂಬ ಕವಿತೆಯನ್ನು ಹೇಳುವಾಗಲೆಲ್ಲ ಈ ಕವಿತೆಯಲ್ಲಿ ಉಲ್ಲೇಖೀಸಲ್ಪಟ್ಟ ಜೆಜುರಿ ದೇವಸ್ಥಾನ ಕುತೂಹಲ ಮೂಡಿಸಿದ್ದು, ಅದು ಹೇಗಿರಬಹುದು? ಯಾಕೆ ಜನ ಆ ದೇವಸ್ಥಾನಕ್ಕೆ ಭೇಟಿ ಕೊಡುತ್ತಾರೆ? ವಿಶೇಷತೆಯೇನು? ಜೊತೆಗೆ ಕವಿತೆಗಳ ಸಂಗ್ರಹಕ್ಕೆ ಅರುಣ್ ಕೊಲಾಟ್ಕರ್ ಜೆಜುರಿ ಎಂದು ಏಕೆ ಹೆಸರಿಸಿದರು? ಈ ಎಲ್ಲ ಪ್ರಶ್ನೆಗಳು, ಒಮ್ಮೆಯಾದರೂ ಜೆಜುರಿಗೆ ಹೋಗಿ ಖಂಡೋಬಾ ದರ್ಶನ ಮಾಡಲೇಬೇಕೆಂಬ ಆಸೆಯನ್ನು ಹುಟ್ಟಿಸಿದ್ದವು. ಅದರ ಫಲವಾಗಿಯೇ ನಮ್ಮ ಪ್ರಯಾಣ ಜೆಜುರಿಯೆಡೆಗೆ ಸಾಗಿತ್ತು.
ಜೆಜುರಿ ಎನ್ನುವುದು ಒಂದು ಸಣ್ಣ ಪಟ್ಟಣ. ಮಹಾರಾಷ್ಟ್ರದ ಪುಣೆಯಿಂದ ಕೇವಲ 37 ಕಿ. ಮೀ. ದೂರದಲ್ಲಿದೆ. ಇಲ್ಲಿರುವುದೇ ಜೆಜುರಿ ದೇವಸ್ಥಾನ. ಖಂಡೋಬಾ ಆ ದೇವಸ್ಥಾನದ ಆರಾಧಿತ ದೇವರು. ಖಂಡೋಬಾನನ್ನು, ಮಲ್ಹಾರ್ ಮಾರ್ತಾಂಡ ಎಂದೂ ಕರೆಯಲಾಗುತ್ತದೆ. ಖಂಡೋಬಾ ಶಿವನ ಅವತಾರವೆಂದು ಹೇಳಲಾಗುತ್ತದೆ.
ದೇವಸ್ಥಾನವು ಸಮುದ್ರ ಮಟ್ಟಕ್ಕಿಂತ 718 ಮೀ. ಎತ್ತರದಲ್ಲಿದೆ. ಬೆಟ್ಟದ ಮೇಲಿರುವುದರಿಂದ ಅಂದಾಜು 250 ಯಿಂದ 350 ಕಲ್ಲಿನ ಮೆಟ್ಟಿಲುಗಳನ್ನು ಹತ್ತುವುದು ಅನಿವಾರ್ಯವಾಗಿದೆ. ಅಲ್ಲಿರುವ ಜನರು ಹೇಳುವಂತೆ ಈ ಮೆಟ್ಟಿಲುಗಳ ನಿರ್ಮಾಣಕ್ಕೆ ಸುಮಾರು ಒಂಬತ್ತು ಲಕ್ಷ ದೊಡ್ಡ ಕಲ್ಲುಗಳನ್ನು ಉಪಯೋಗಿಸಲಾಗಿದೆ. ಆದ್ದರಿಂದ ಇದಕ್ಕೆ ನೌ ಲಾಕ್ ಸಿಡಿಯಾ ಎಂದೂ ಕರೆಯಲಾಗುತ್ತದೆ. ಎಳಕೋಟ್ ಎಳಕೋಟ್ ಜೈ ಮಲ್ಲಾರ್ ಎಂಬ ಘೋಷಣೆಯೊಂದಿಗೆ ಸುಮಾರು ಮೆಟ್ಟಿಲುಗಳನ್ನು ಹತ್ತಬೇಕಾಗುತ್ತದೆ. ಮೇಲಿ ನಿಂದ ಜೆಜುರಿ ಪಟ್ಟಣದ ಸುಂದರ ದೃಶ್ಯ ಹತ್ತಿದ ನಂತರ ಕಣ್ಮನ ಸೆಳೆಯುತ್ತದೆ.
ಖಂಡೋಬಾನಿಗೆ ಹೂವು, ಹಣ್ಣು, ಕಾಯಿಗಳ ಸಮರ್ಪಣದೊಂದಿಗೆ ಅರಿಷಿಣ ಅಥವಾ ಭಂಡಾರವನ್ನು ಅರ್ಪಿಸಲಾಗುತ್ತದೆ. ಇದು ಹಳದಿಯಾಗಿದ್ದು ಬಂಗಾರ ವರ್ಣದಂತೆ ಕಾಣುತ್ತದೆ. ಅದಕ್ಕಾಗಿ ಇದನ್ನು ಸೋನ್ಯಾಚಾ ಜೆಜುರಿ ಎಂದೂ ಕರೆಯುತ್ತಾರೆ. ಇಡೀ ದೇವಸ್ಥಾನ ಹಳದಿ ಬಣ್ಣದಿಂದ ಎದ್ದು ಕಾಣುತ್ತದೆ. ನಮ್ಮಲ್ಲಿ ಸವದತ್ತಿ ಯಲ್ಲಮ್ಮನಿಗೆ ಭಂಡಾರವನ್ನು ಚಿಮುಕಿಸುವ ಹಾಗೆ ಇಲ್ಲಿಯೂ ಭಂಡಾರವನ್ನು ಬಳಸಲಾಗುತ್ತದೆ.
ಮಾಲಾ ಅಕ್ಕಿಶೆಟ್ಟಿ