Advertisement
ಸ್ವಲ್ಪ ದೂರ ಹೋಗುವಷ್ಟರಲ್ಲಿ ನಾಲ್ವರು ಪೊಲೀಸರು ವ್ಯಕ್ತಿಯೊಬ್ಬನನ್ನು ನಡೆಸಿಕೊಂಡು ಹೋಗುತ್ತಿದ್ದುದು ಕಾಣಿಸಿತು.
Related Articles
Advertisement
ಅಪರಾಧಿ ಮತ್ತು ಊರಿನ ಪ್ರಮುಖ – ಇಬ್ಬರಿಗೂ ಪೊಲೀಸರು ಸಾಥಿಯಾಗಿದ್ದಾರೆ, ಒಬ್ಬರಿಗೆ ಅಧಿಕಾರಿಗಳಾಗಿ, ಇನ್ನೊಬ್ಬರ ಆಜ್ಞಾನುಧಾರಿಗಳಾಗಿ.
ನಮ್ಮ ಇಂದ್ರಿಯಗಳು, ಆಸೆ- ಆಕಾಂಕ್ಷೆಗಳು, ನಡವಳಿಕೆಗಳು ನಮ್ಮ ಆಜ್ಞಾವರ್ತಿಗಳಾಗಿರಬೇಕು, ನಾವು ಅವುಗಳ ಅಡಿಯಾಳುಗಳು ಆಗಿರಬಾರದು ಎನ್ನುತ್ತಾರೆ ಸ್ವಾಮಿ ಚಿನ್ಮಯಾನಂದರು.
ಬದುಕಿನ ಪೂರ್ಣತೆಯನ್ನು ಅನುಭವಿಸುವುದರಿಂದ ನಮ್ಮೊಳಗನ್ನು ಕಂಡುಕೊಳ್ಳಲು ಸಾಧ್ಯ. ಇದು ಸಾಧ್ಯವಾಗದಿರುವಷ್ಟು ಕಾಲ ನಮ್ಮ ಅ-ಪರಿಪೂರ್ಣತೆಯನ್ನು ಮೀರುವುದಕ್ಕಾಗಿ ಬುದ್ಧಿಯು ಅಡ್ಡದಾರಿಗಳನ್ನು ಹುಡುಕುತ್ತ ಇರುತ್ತದೆ.
ಇವೇ ಆಸೆ- ಆಕಾಂಕ್ಷೆಗಳು. ನಮ್ಮ ಬ್ರಹ್ಮಸ್ವರೂಪದ ಕುರಿತಾಗಿ ನಮಗಿರುವ ಅಜ್ಞಾನದ ಅಭಿವ್ಯಕ್ತಿಗಳೇ ಆಸೆಗಳು. ಈ ಅಜ್ಞಾನದಿಂದಲೇ ನಾವು ನಮ್ಮ ದೇಹ, ಬುದ್ಧಿ ಮತ್ತು ಮನಸ್ಸಿಗೆ ಅಂಟಿಕೊಂಡಿರುತ್ತೇವೆ. ನಾವು ನೋವು ಅನುಭವಿಸುವುದು, ದುಃಖೀ ತರಾಗುವುದು ಮತ್ತು ಅಹಂಭಾವಿಗಳಾಗಿರುವುದಕ್ಕೂ ಮೂಲಕಾರಣ ಈ ಅಜ್ಞಾನ. ಸೀಮಾತೀತ, ಅನಂತ ಬ್ರಹ್ಮ ಸ್ವರೂಪದ ಅರಿವನ್ನು ಹೊಂದುವುದೇ ಅತೀ ದೊಡ್ಡ ಆಧ್ಯಾತ್ಮಿಕ ಸಾಧನೆ ಎನ್ನುತ್ತಾರೆ ಸ್ವಾಮಿ ಚಿನ್ಮಯಾನಂದರು.
ಎಲ್ಲ ಧರ್ಮಗಳ ಮೂಲ ಉದ್ದೇಶ ಆಧ್ಯಾತ್ಮಿಕ ಸಾಧನೆಗಳ ಮೂಲಕ ಈ ಸುಜ್ಞಾನವನ್ನು ಹೊಂದುವುದು. ನಮ್ಮೊಳಗಿನ ಅಜ್ಞಾನವು ನಮ್ಮ ವಿವಿಧ ಕ್ರಿಯೆಗಳಾಗಿ ಪ್ರತಿ ಫಲಿಸುತ್ತವೆ. ಆದ್ದರಿಂದ ನಮ್ಮ ಕ್ರಿಯೆಗಳನ್ನು ವಿವೇಕಪೂರ್ವಕವಾಗಿ ನಿಯಂತ್ರಿಸುವುದೇ ಅಜ್ಞಾನವನ್ನು ಮೀರುವ ಅತ್ಯಂತ ಪ್ರಾಯೋಗಿಕ ವಿಧಾನ.ನಾವು ಪರಿಶುದ್ಧರಾಗಬೇಕು ಮತ್ತು ಆ ಮೂಲಕ ನಮ್ಮ ಕ್ರಿಯೆಗಳನ್ನು, ವರ್ತನೆಯನ್ನು, ನಡವಳಿಕೆಯನ್ನು ನಿಯಂತ್ರಿಸಬೇಕು. ಕಾರುಣ್ಯ, ಸಹಿಷ್ಣುತೆ, ನಿಸ್ವಾರ್ಥ ಬುದ್ಧಿ, ಸತ್ಯಪರತೆ – ಇವೇ ಎಲ್ಲ ಧರ್ಮಗಳು ಉಪದೇಶಿಸುವ ನೈತಿಕ ಪರಿಪೂರ್ಣತೆ. ಆಧ್ಯಾತ್ಮಿಕ ವಿಕಸನಕ್ಕೆ ಅಡಿಪಾಯವಾಗಿರುವುದು ಈ ಸದ್ಗುಣಗಳೇ. ಹಿಂದೂ ಜೀವನಪದ್ಧತಿ ಬೆಳೆದು ನಿಂತಿರುವುದು ಸಂಯಮ, ಅಹಿಂಸೆ ಮತ್ತು ಸತ್ಯಪರತೆ ಎಂಬ ಮೂರು ಸ್ತಂಭಗಳ ಆಧಾರದಲ್ಲಿ. ನಮ್ಮ ಪೂರ್ವಜರು ಈ ಮೂರನ್ನು ತಮ್ಮ ವೈಯಕ್ತಿಕ, ಸಾಮುದಾಯಿಕ ಮತ್ತು ರಾಷ್ಟ್ರೀಯ ಬದುಕಿನ ಅಡಿಪಾಯವನ್ನಾಗಿಸಿಕೊಂಡು ಬಾಳಿದ್ದರು. ಈ ಮೂರು ಗುಣಗಳನ್ನು ಸಂಪೂರ್ಣವಾಗಿ ಅವುಗಳ ನಿಜಾರ್ಥದಲ್ಲಿ ಅಳವಡಿಸಿಕೊಂಡು ಬದುಕುವುದರಿಂದ ನಮ್ಮ ಮನಸ್ಸಿನ ಮೇಲೆ ನಿಯಂತ್ರಣ ಸಾಧಿಸಲು ಸಾಧ್ಯವಾಗುತ್ತದೆ. ಬ್ರಹ್ಮಚರ್ಯ ಅಥವಾ ಸಂಯಮ, ಅಹಿಂಸೆ ಮತ್ತು ಸತ್ಯ – ಎಲ್ಲ ಸದ್ಗುಣಗಳ ಮೂಲ ಇವು; ದೈಹಿಕ, ಭಾವನಾತ್ಮಕ ಮತ್ತು ವೈಚಾರಿಕವೆಂಬ ನಮ್ಮ ವ್ಯಕ್ತಿತ್ವದ ಮೂರು ಆಯಾಮಗಳ ತಿರುಳು ಕೂಡ ಇವೇ. ಲೇಖನಗಳನ್ನು ಈ ವಿಳಾಸಕ್ಕೆ ಕಳುಹಿಸಿ
ಬರಹಗಾರರು ಪ್ರಚಲಿತ ವಿದ್ಯಮಾನಗಳಿಗೆ ಸಂಬಂಧಿಸಿದ ಲೇಖನಗಳನ್ನು edit@udayavani.comಗೆ ಕಳುಹಿಸಬಹುದು. ಸೂಕ್ತವಾದವುಗಳನ್ನು ಪ್ರಕಟಿಸಲಾಗುವುದು.