Advertisement

ನಾವೂ ನಮ್ಮವರೂ ಬದುಕಿ ಬಾಳುವ ಆಟ

03:05 AM Oct 05, 2020 | Hari Prasad |

ಅಯತಾ ಹು ಆ ಕಾಲಕ್ಕೆ ಬಹುದೊಡ್ಡ ಝೆನ್‌ ಗುರು. ಅವನು ಎತ್ತರದ ಬೆಟ್ಟದ ಮೇಲೆ ಮಠ ಕಟ್ಟಿಕೊಂಡು ತನ್ನ ಶಿಷ್ಯ ಸಮೂಹದ ಜತೆಗೆ ವಾಸವಾಗಿದ್ದ.

Advertisement

ಒಂದು ಬಾರಿ ಆ ಪ್ರಾಂತವನ್ನು ಆಳುತ್ತಿದ್ದ ಅರಸನ ಮಗನಿಗೆ ಅಯತಾ ಹುವಿನ ಬಳಿ ಜ್ಞಾನಾರ್ಜನೆ ಮಾಡಬೇಕು ಎನ್ನಿಸಿತು.

ಬೆಟ್ಟವನ್ನೇರಿ ಗುರುಮಠಕ್ಕೆ ಹೋದ. ಗುರುವನ್ನು ಭೇಟಿ ಮಾಡಿ ತನಗೆ ಜ್ಞಾನೋದಯವಾಗಬೇಕಾಗಿದೆ, ಅದೂ ಈಗಲೇ ಎಂದ!

ಅರಸನ ಮಗನಲ್ಲವೇ! ಅಯತಾ ಹು ಅದಾಗುವುದಿಲ್ಲ ಎಂದು ನಿರಾಕರಿಸಲಿಲ್ಲ. ಬದಲಾಗಿ “ನೀನು ಅತ್ಯಂತ ಪ್ರವೀಣನಾಗಿರುವುದು ಯಾವುದರಲ್ಲಿ’ ಎಂದು ಪ್ರಶ್ನಿಸಿದ. ಯುವರಾಜ ಚದುರಂಗದಾಟದಲ್ಲಿ ಎತ್ತಿದ ಕೈ ಎಂಬುದು ತಿಳಿಯಿತು.

ಗುರು ಅಯತಾ ಹು ತನ್ನ ಶಿಷ್ಯರಲ್ಲಿ ಕೆಲವು ತಿಂಗಳುಗಳ ಹಿಂದಷ್ಟೇ ಚದುರಂಗ ಕಲಿತಿದ್ದವನನ್ನು ಆರಿಸಿ ಯುವರಾಜನ ಎದುರು ಆಟಕ್ಕೆ ಕುಳ್ಳಿರಿಸಿದ. ಒಂದು ಷರತ್ತನ್ನೂ ಒಡ್ಡಿದ, “ಯಾರು ಸೋಲುತ್ತಾರೆಯೋ ಅವರ ತಲೆ ಕತ್ತರಿಸಿ ವಧಿಸಲಾಗುವುದು’.

Advertisement

ಆಟ ಸಾಗಿತು. ಹೊಸತಾಗಿ ಚದುರಂಗ ಕಲಿತವನ ಎದುರು ಯುವ ರಾಜನಿಗೆ ಆಟ ಬಹಳ ಸಲೀಸು. ಬಹಳ ಸುಲಭವಾಗಿ ಕೆಲವೇ ಕ್ಷಣಗಳಲ್ಲಿ ಆತನ ಕೈಮೇಲಾಯಿತು. ಆದರೆ ಅಷ್ಟು ಹೊತ್ತಿಗೆ ಯುವರಾಜನ ಅಂತರಂಗ ಪಿಸುಗುಡಲಾರಂಭಿಸಿತು, “ಎದುರಾಳಿ ಪಾಪದವನು.

ಈಗಷ್ಟೇ ಆಟ ಕಲಿತವನು. ಸೋತರೆ ಜೀವಕ್ಕೆ ಎರವಾಗು ತ್ತಾನೆ…’ ಇದಕ್ಕೆ ಕಿವಿಗೊಟ್ಟ ಬಳಿಕ ಯುವ ರಾಜ ಉದ್ದೇಶಪೂರ್ವಕವಾಗಿ ತಪ್ಪು ನಡೆ ಅನುಸರಿಸತೊಡಗಿದ. ಸ್ವಲ್ಪ ಹೊತ್ತು ಶಿಷ್ಯ ಮೇಲುಗೈ ಸಾಧಿಸಿದ. ಆಗ ಯುವರಾಜನ ಅಹಂಗೆ ಏಟು ಬೀಳಲಾರಂಭವಾಯಿತು. ಆತ ಮತ್ತೆ ಜಾಣ್ಮೆಯ ಆಟ ಆಡತೊಡಗಿದ. ನಾಲ್ಕಾರು ನಡೆಗಳಲ್ಲಿ ಶಿಷ್ಯನಿಗೆ ಹಿನ್ನಡೆಯಾದಾಗ ಯುವರಾಜನ ಆತ್ಮಸಾಕ್ಷಿ ಮತ್ತೆ ನುಡಿಯಿತು, “ನೀನಿಲ್ಲಿಗೆ ಬಂದದ್ದು ನಿನ್ನ ಸ್ವಾರ್ಥಕ್ಕಾಗಿ. ಅದರೆಡೆಯಲ್ಲಿ ಚದುರಂಗ ಗೊತ್ತಿಲ್ಲದ ಈ ಸಾಧು ಶಿಷ್ಯನ ಪ್ರಾಣ ಹೋಗುವಂತೆ ಮಾಡುವೆಯಾ…’ ಯುವರಾಜ ಮತ್ತೆ ತಪ್ಪು ಆಟ ಆಡಲಾರಂಭಿಸಿದ.

ಬಹಳ ಹೊತ್ತು ಇದು ಮುಂದುವರಿ ಯಿತು. ಸ್ವಭಾವ ಸಹಜ ನಡೆ ಮತ್ತು ಆತ್ಮಸಾಕ್ಷಿಯ ಕರೆ-ಇವುಗಳ ನಡುವೆ ಯುವರಾಜ ಹೈರಾಣಾದ. ಬೆವರಿಳಿಯಲಾರಂಭವಾಯಿತು. ಮುಖ ಕೆಂಪೇರಿತು.

ಮತ್ತೊಂದಿಷ್ಟು ಹೊತ್ತು ಆಟ ಸಾಗಿದ ಬಳಿಕ ಅಯತಾ ಹು ಆಟ ನಿಲ್ಲಿಸಿದ. ಬಳಿಕ ಯುವರಾಜನಿಗೆ ಹೇಳಿದ, “ಯುವರಾಜನೇ, ಜ್ಞಾನಮಾರ್ಗದಲ್ಲಿ ನಿನ್ನ ಮೊದಲನೆಯ ಪಾಠ ಮುಗಿಯಿತು. ಸಹಾನುಭೂತಿ ಮತ್ತು ಏಕಾಗ್ರತೆ ಎಂಬ ಎರಡು ವಿಷಯ ಗಳನ್ನು ನೀನು ಕಲಿತಿದ್ದೀಯ. ಇದನ್ನು ಕಲಿಸಿದ ನಿನ್ನ ಎದು ರಾಳಿಯನ್ನು ಆಲಂಗಿಸಿಕೋ’.
ನಮ್ಮ ಬದುಕಿನಲ್ಲಿಯೂ ನಾವು ಇಂತಹ ಸನ್ನಿವೇಶ ಗಳನ್ನು ಎದುರಿಸು ವುದಿದೆ. ಮನೆಯಲ್ಲಿ ಪುಟ್ಟ ಮಕ್ಕಳೊಂದಿಗೆ ಆಟವಾಡುವುದು ಒಂದು ಸರಳ ಉದಾಹರಣೆ. ಆಗ ಉದ್ದೇಶಪೂರ್ವಕವಾಗಿ ಸೋಲ ಬೇಕಾಗುತ್ತದೆ, ಅವರ ಖುಷಿಗೋಸ್ಕರ.

ಬೆಕ್ಕು ಅರೆ ಗಾಯಗೊಳಿಸಿದ ಇಲಿಯನ್ನು ತಂದು ಮರಿಗಳಿಗೆ ಬೇಟೆ ಕಲಿಸಿದ ಹಾಗೆ ನಮ್ಮ ವಯಸ್ಸಿಗೆ ಸರಳವೆನಿಸುವ ಪಟ್ಟುಗಳನ್ನು ಆಡಿ ಮಕ್ಕಳಿಗೆ ಆಟ ಕಲಿಸಬೇಕಾಗುತ್ತದೆ. ಇಡಿಯ ಬದುಕು ಹೀಗೆಯೇ ಒಂದು ಆಟದಂತೆ. ನಾವು ಮಾತ್ರವೇ ಕ್ಷೇಮವಾಗಿ, ಸುಖವಾಗಿದ್ದರೆ ಅದು ಬದುಕಲ್ಲ. ನಮ್ಮ ಜತೆಗೆ ನಮ್ಮವರು, ನಮ್ಮ ಸುತ್ತಲಿನವರು ಕೂಡ ಚೆಂದವಾಗಿ ಬದುಕಿ ಬಾಳಬೇಕು. ಆಗ ಈ ಜೀವಿತಕ್ಕೊಂದು ಸಾರ್ಥಕ್ಯ.

(ಸಾರ ಸಂಗ್ರಹ)

Advertisement

Udayavani is now on Telegram. Click here to join our channel and stay updated with the latest news.

Next